ಕಸಾಪದಲ್ಲಿ ಅಕ್ರಮ: ತನಿಖೆಗೆ ತಿಂಗಳ ಗಡುವು ವಿಧಿಸಿದ ಹೈಕೋರ್ಟ್‌; ಜೋಶಿ ಸಹಕರಿಸಿದ್ದರೆ ಗಮನಕ್ಕೆ ತರಲು ನಿರ್ದೇಶನ

“ಜೋಶಿ ಎಲ್ಲೂ ಪ್ರಯಾಣ ಮಾಡಿಲ್ಲ. ವಿಚಾರಣೆಯಿಂದ ತಪ್ಪಿಸಿಕೊಳ್ಳಲು ರೈಲಿನ ಟಿಕೆಟ್ ಬುಕ್ ಮಾಡಿ, ನಂತರ ಅದನ್ನು ರದ್ದುಪಡಿಸಿದ್ದಾರೆ. ತಾನು ಪ್ರಯಾಣ ಮಾಡಿದ್ದೇನೆ ಎಂದು ತೋರಿಸಲಷ್ಟೇ ಟಿಕೆಟ್ ಬುಕ್ ಮಾಡಿಸಿದ್ದರು” ಎಂದು ಆಪಾದಿಸಿದ ಎಜಿ ಶೆಟ್ಟಿ.
Mahesh Joshi, Karnataka HC
Mahesh Joshi, Karnataka HC
Published on

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಮಹೇಶ್ ಜೋಶಿ ಹೇಳಿರುವುದಲ್ಲೆವೂ ಸುಳ್ಳು. ಅವರ ನಡವಳಿಕೆ ಆಘಾತಕಾರಿಯಾಗಿದೆ. ಒಂದಲ್ಲ, ಎರಡಲ್ಲ ಸಾಲು-ಸಾಲು ಸುಳ್ಳುಗಳನ್ನು ಅವರು ಹೇಳಿದ್ದಾರೆ, ಆ ಸುಳ್ಳುಗಳನ್ನೇ ನ್ಯಾಯಾಲಯದ ಮುಂದೆ ಪುನರುಚ್ಚರಿಸಿದ್ದಾರೆ ಎಂದು ರಾಜ್ಯ ಸರ್ಕಾರವು ಗುರುವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ.

ಕನ್ನಡ ಸಾಹಿತ್ಯ ಪರಿಷತ್‌ನ ಪದಾಧಿಕಾರಿಗಳ ಕಾರ್ಯವೈಖರಿ, ಅನುದಾನ ಮತ್ತು ಖರ್ಚುವೆಚ್ಚಗಳ ಕುರಿತು ವಿಚಾರಣೆ ನಡೆಸಲು ತನಿಖಾಧಿಕಾರಿ ನೇಮಕ ಮಾಡಿ 2025ರ ಜೂನ್ 26 ಹಾಗೂ 30ರಂದು ಸಹಕಾರ ಸಂಘಗಳ ನೋಂದಣಾಧಿಕಾರಿ ಹೊರಡಿಸಿದ್ದ ಆದೇಶಕ್ಕೆ ತಡೆ ಕೋರಿ ಕಸಾಪ ಅಧ್ಯಕ್ಷ ಮಹೇಶ್‌ ಜೋಶಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಅಡ್ವೋಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು “ತನಿಖಾಧಿಕಾರಿ ಮುಂದೆ ಹಾಜರಾಗಲು ನೋಟಿಸ್ ನೀಡಿದಾಗ ಕುಟುಂಬದಲ್ಲಿ ಸಾವು ಸಂಭವಿಸಿದೆ, ಪ್ರಯಾಣ ಮಾಡಬೇಕಾಗಿರುವುದರಿಂದ 15 ದಿನ ಕಾಲಾವಕಾಶಬೇಕು ಎಂದು ಜೋಶಿ ಕೋರಿದ್ದರು. ಆದರೆ, ಅವರು ಎಲ್ಲೂ ಪ್ರಯಾಣ ಮಾಡಿಲ್ಲ. ವಿಚಾರಣೆಯಿಂದ ತಪ್ಪಿಸಿಕೊಳ್ಳಲು ರೈಲ್ವೆ ಟಿಕೆಟ್ ಬುಕ್ ಮಾಡಿ, ನಂತರ ಅದನ್ನು ರದ್ದುಪಡಿಸಿದ್ದಾರೆ. ತಾನು ಪ್ರಯಾಣ ಮಾಡಿದ್ದೇನೆ ಎಂದು ತೋರಿಸಲಷ್ಟೇ ಟಿಕೆಟ್ ಬುಕ್ ಮಾಡಿಸಿದ್ದರು. ಟಿಕೆಟ್ ರದ್ದುಪಡಿಸಿದ ವಿವರಗಳನ್ನು ಕೊಡದಂತೆ ರೈಲ್ವೆ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ. ವಾರಾಣಸಿಯಿಂದ ಲಖನೌಗೆ ವಿಮಾನ ಪ್ರಯಾಣ ಮಾಡಿದ ಅವಧಿ ಗಮನಿಸಿದರೆ, ಮನುಷ್ಯರಿಂದ ಅದು ಸಾಧ್ಯವೇ ಇಲ್ಲ” ಎಂದು ನ್ಯಾಯಾಲಯದ ಗಮನಕ್ಕೆ ತಂದರು.

“ಪ್ರಯಾಣ ಮಾಡಬೇಕಾಗಿದೆ ಎಂದು ಹೇಳಿದ್ದ ದಿನಗಳಲ್ಲಿ ಜೋಶಿ ಸಾಹಿತ್ಯ ಪರಿಷತ್‌ ಕಚೇರಿಗೆ ಬಂದು, ದೈನಂದಿನ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ” ಎಂದು ಅಡ್ವೋಕೇಟ್ ಜನರಲ್ ಹೇಳಿದರು.

ಆಗ ಪೀಠವು “ಜೋಶಿ ಅವರು ಕಚೇರಿಗೆ ಬಂದಿದ್ದು ಹೇಗೆ ಗೊತ್ತಾಯಿತು” ಎಂದು ಪ್ರಶ್ನಿಸಿತು. ಇದಕ್ಕೆ ಎಜಿ ಅವರು “ಸಿಸಿಟಿವಿ ದೃಶ್ಯಾವಳಿಗಳಿಂದ ತಿಳಿದಿದೆ” ಎಂದರು. ಕಸಾಪ ಅಧ್ಯಕ್ಷರ ಕಚೇರಿಯಲ್ಲಿ ಸಿಸಿಟಿವಿ ಕ್ಯಾಮರಾ ಇರುವ ಬಗ್ಗೆ ಪೀಠ ಅಚ್ಚರಿ ವ್ಯಕ್ತಪಡಿಸಿತು.

ಆಗ ಎಜಿ ಅವರು “ಅನಾವಶ್ಯಕವಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದು, ಹಣ ದುರ್ಬಳಕೆಯ ಮಾತುಗಳೂ ಕೇಳಿ ಬಂದಿವೆ. ಸಿಸಿಟಿವಿ ದೃಶ್ಯಾವಳಿ ಕೊಡದಂತೆ ಕಸಾಪ ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾರೆ. ಕಾನೂನು ಮತ್ತು ನ್ಯಾಯಾಲಯವನ್ನು ಅವರು ದುರ್ಬಳಕೆ ಮಾಡಿಕೊಂಡಿದ್ದಾರೆ” ಎಂದು ದೂರಿದರು.

ಮುಂದುವರಿದು, “ಈ ಪ್ರಕರಣದಲ್ಲಿ ಜೋಶಿ ಅವರನ್ನು ವೈಯುಕ್ತಿಕವಾಗಿ ಟಾರ್ಗೆಟ್ ಮಾಡಲಾಗಿಲ್ಲ. ತನಿಖೆ ನಡೆಯಲಿ, ನ್ಯಾಯಾಲಯವೇ ಕಾಲಮಿತಿ ನಿಗದಿಪಡಿಸಿ ಮೇಲ್ವಿಚಾರಣೆ ನಡೆಸಲಿ. ಏಕೆಂದರೆ, ವಿಷಯ ಬಹಳ ಗಂಭೀರವಾಗಿದ್ದು, ಅರ್ಜಿದಾರರ ನಡವಳಿಕೆ ಅನುಮಾನಸ್ಪದ ಹಾಗೂ ಆಘಾತಕಾರಿಯಾಗಿದೆ” ಎಂದು ಎಜಿ ಆಪಾದಿಸಿದರು.

Also Read
ಕಸಾಪ ಅವ್ಯವಹಾರ ಆರೋಪ: ತನಿಖಾ ಪ್ರಕ್ರಿಯೆ, ದಾಖಲೆಗಳ ಮಾಹಿತಿ ಸಲ್ಲಿಕೆಗೆ ಹೈಕೋರ್ಟ್‌ ನಿರ್ದೇಶನ

ಈ ವೇಳೆ ಜೋಶಿ ಪರ ಹಿರಿಯ ವಕೀಲ ಜಯಕುಮಾರ್‌ ಪಾಟೀಲ್‌ ಅವರು ಸ್ಪಷ್ಟನೆ ನೀಡಲು ಮುಂದಾದರು. ಆಗ ಜೋಶಿಯವರ ನಡವಳಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಪೀಠವು “ಇದು ಕಾನೂನು ಮತ್ತು ನ್ಯಾಯಾಲಯದ ದುರ್ಬಳಕೆ ಆಗಿದೆ. 30 ದಿನಗಳಲ್ಲಿ ತನಿಖೆ ಮುಗಿಸಬೇಕು. ಅಲ್ಲಿವರೆಗೆ ಯಾವುದೇ ಸಭೆ ನಡೆಯುವಂತಿಲ್ಲ. ತನಿಖೆಗೆ ಜೋಶಿ ಸಂಪೂರ್ಣವಾಗಿ ಸಹಕರಿಸಬೇಕು. ಈ ವಿಚಾರದಲ್ಲಿ ಯಾವುದೇ ರಿಯಾಯಿತಿ ಅಥವಾ ಕರುಣೆ ಇಲ್ಲ. ಜೋಶಿ ತನಿಖೆಗೆ ಸಹಕರಿಸದಿದ್ದರೆ ಸರ್ಕಾರಿ ವಕೀಲರು ನ್ಯಾಯಾಲಯಕ್ಕೆ ತಿಳಿಸಬೇಕು” ಎಂದು ನಿರ್ದೇಶಿಸಿದ ಪೀಠವು ವಿಚಾರಣೆಯನ್ನು ಡಿಸೆಂಬರ್ 8ಕ್ಕೆ ಮುಂದೂಡಿತು.

Kannada Bar & Bench
kannada.barandbench.com