ಕಾಶ್ಮೀರಿ ಪಂಡಿತರನ್ನು ಬಲವಂತವಾಗಿ ಸ್ಥಳಾಂತರಿಸಲಾಗಿದ್ದು, 4.5 ಲಕ್ಷ ಜನ ವಲಸೆ ಹೋಗಿದ್ದಾರೆ. ಸಮಸ್ಯೆಯನ್ನು ಪರಿಹರಿಸುವ ವಿಚಾರದಲ್ಲಿ ಯಾವುದೇ ಸರ್ಕಾರದಿಂದ ಅವರಿಗೆ ನ್ಯಾಯ ದೊರೆತಿಲ್ಲ ಎಂದು ಇತ್ತೀಚೆಗಷ್ಟೇ ನಿವೃತ್ತರಾದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಅಭಿಪ್ರಾಯಪಟ್ಟಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ರದ್ದತಿಯನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠದ ಭಾಗವಾಗಿದ್ದರು ನ್ಯಾ. ಕೌಲ್. ವಿಧಿ ರದ್ದತಿ ಸಂಬಂಧ ಸುಪ್ರೀಂ ಕೋರ್ಟ್ ಕೆಲ ದಿನಗಳ ಹಿಂದೆ ಒಟ್ಟು ಮೂರು ತೀರ್ಪುಗಳನ್ನು ಪ್ರಕಟಿಸಿತ್ತು. ಒಂದು ತೀರ್ಪು ಸಿಜೆಐ ಚಂದ್ರಚೂಡ್ ಅವರದ್ದಾದರೆ, ನ್ಯಾಯಮೂರ್ತಿ ಗವಾಯಿ ಮತ್ತು ನ್ಯಾಯಮೂರ್ತಿ ಕಾಂತ್ ಅವರು ಮತ್ತೊಂದು ತೀರ್ಪು ನೀಡಿದರು. ನ್ಯಾಯಮೂರ್ತಿ ಕೌಲ್ ಮತ್ತು ಖನ್ನಾ ಅವರದ್ದು ಮೂರನೆಯ ತೀರ್ಪಾಗಿತ್ತು. ಈ ಮೂರು ಪ್ರತ್ಯೇಕ ತೀರ್ಪುಗಳಾದರೂ ಸಹಮತ ಹೊಂದಿದ್ದವು. 370ನೇ ವಿಧಿಯು ಜಮ್ಮು ಮತ್ತು ಕಾಶ್ಮೀರದಲ್ಲಿ ಯುದ್ಧಕಾಲದ ಪರಿಸ್ಥಿತಿಗಳಿಂದಾಗಿ ಜಾರಿಗೆ ಬಂದ ತಾತ್ಕಾಲಿಕ ನಿಬಂಧನೆಯಾಗಿದೆ ಎಂದು ಸುಪ್ರೀಂ ತೀರ್ಪು ನುಡಿದಿತ್ತು.
ತಮ್ಮ ನಿವೃತ್ತಿಯ ಬಳಿಕ ಬಾರ್ ಅಂಡ್ ಬೆಂಚ್‌ನ ದೇಬಯಾನ್ ರಾಯ್ ಅವರಿಗೆ ನೀಡಿದ ಸಂದರ್ಶನದಲ್ಲಿ ಕಾಶ್ಮೀರ ರಾಜ್ಯದವರೇ ಆಗಿರುವ ನ್ಯಾ. ಕೌಲ್ ಅವರು ಕಣಿವೆ ರಾಜ್ಯಕ್ಕೆ ಸಂಬಂಧಿಸಿದ ಕಾನೂನಾತ್ಮಕ ವಿಚಾರಗಳು, ವಿವಿಧ ಸಮಸ್ಯೆಗಳು ಹಾಗೂ ಭಾವನಾತ್ಮಕ ಅಂಶಗಳ ಕುರಿತಂತೆ ಹಲವು ಒಳನೋಟಗಳನ್ನು ಹಂಚಿಕೊಂಡಿದ್ದಾರೆ.
"ಕಾಶ್ಮೀರಿ ಪಂಡಿತ ಸಮುದಾಯವನ್ನು ಹೊರದಬ್ಬಲಾಯಿತು. 4.5 ಲಕ್ಷ ಜನ ನಿರಾಶ್ರಿತರಾಗಿದ್ದಾರೆ, ಸಮಸ್ಯೆಗೆ ಬಗೆಹರಿಸುವ ನಿಟ್ಟಿನಲ್ಲಿ ಅವರಿಗೆ ಯಾವುದೇ ಸರ್ಕಾರದಿಂದ ನ್ಯಾಯ ಸಿಕ್ಕಿತು ಎಂದು ನಾನು ಭಾವಿಸುವುದಿಲ್ಲ. ಪರಿಸ್ಥಿತಿ ಎಷ್ಟು ತೀವ್ರವಾಗಿತ್ತು ಎಂದರೆ ಸೇನೆಯನ್ನು ಕರೆಸಬೇಕಾಯಿತು. ಅದು ತನ್ನದೇ ಆದ ರೀತಿಯಲ್ಲಿ ಯುದ್ಧ ಮಾಡುತ್ತದೆ, ಸಾಮಾನ್ಯ ಕಾನೂನು ಮತ್ತು ಸುವ್ಯವಸ್ಥೆಯ ರೀತಿಯಲ್ಲಿ ಅಲ್ಲ, ಅದಕ್ಕಾಗಿಯೇ ನಾನು ಸರ್ಕಾರ ಮತ್ತು ಸರ್ಕಾರೇತರ ಪಾತ್ರಧಾರಿಗಳನ್ನು ತೀರ್ಪಿನ ಸಂದರ್ಭದಲ್ಲಿ ಉಲ್ಲೇಖಿಸಿದೆ ಎಂದಿದ್ದಾರೆ.
ವಿವಿಧ ಸಮುದಾಯಗಳು ತೊಂದರೆ ಅನುಭವಿಸಿದವು. ಈ ಪ್ರಕ್ಷುಬ್ಧತೆಯಲ್ಲಿ ಇಡೀ ಪೀಳಿಗೆ ಬೆಳೆದದ್ದನ್ನು ಕಂಡೆವು. ಆಗ 5-6 ವರ್ಷ ವಯಸ್ಸಾಗಿದ್ದವರಿಗೆ ಇಂದು 40 ವರ್ಷ, ಇಡೀ ಪೀಳಿಗೆ ಇಲ್ಲವಾಗಿದೆ. ಜನ ಒಟ್ಟಿಗೆ ವಾಸಿಸುವ ಪರಿಸ್ಥಿತಿಗಳನ್ನು ಅವರಲ್ಲಿ ಹೆಚ್ಚಿನವರು ನೋಡಿಲ್ಲ. ಇದು ತುಲನಾತ್ಮಕವಾಗಿ ಸಮೀಕರಿಸಲ್ಪಟ್ಟ ಸಮಾಜಗಳಲ್ಲಿ ಒಂದಾಗಿದೆ. ಬೇರೆ ಯಾವುದೇ ಸ್ಥಳಕ್ಕಿಂತಲೂ ಇದು ಹೆಚ್ಚು ಸುರಕ್ಷಿತವಾಗಿತ್ತು ಎಂದು ಹೇಳಿದ್ದಾರೆ.
ಕಾಶ್ಮೀರದ ವಿಚಾರವಾಗಿ ನಡೆದಿರುವ ತಪ್ಪನ್ನು ಒಪ್ಪಿಕೊಂಡೇ ಕಾನೂನು ಕ್ರಮದ ದೃಷ್ಟಿಯಿಂದಲ್ಲದೇ ಬೇರೇನನ್ನಾದರೂ ಮಾಡಬೇಕು ಅನ್ನಿಸಿದೆ. ಸತ್ಯವನ್ನು ಬಿಂಬಿಸದೇ ಇರುವುದು ನಡೆಯಬಾರದು ಅದನ್ನು ಒಪ್ಪಿ ನಡೆಯಬೇಕಿದೆ. ಇಲ್ಲದಿದ್ದರೆ ಇತಿಹಾಸಕ್ಕೆ ನಾವು ಬದ್ಧವಾಗಿರಬೇಕಾಗುತ್ತದೆ. ಕಾಶ್ಮೀರದಲ್ಲಿ ಶಾಂತಿ ಮರುಸ್ಥಾಪನೆಗೆ ಮತ್ತು ಅದರ ಉಳಿಯುವಿಕೆಯನ್ನು ನಾವು ಬಯಸುವುದಾದರೆ ಒಟ್ಟಿಗೆ ಕೆಲಸ ಮಾಡಬೇಕಿದೆ. ಏನು ತಪ್ಪಾಗಿದೆ ಎಲ್ಲಿ ತಪ್ಪಾಗಿದೆ ಯಾರು ತೊಂದರೆ ಅನುಭವಿಸಿದ್ದಾರೆ ಎಂಬುದನ್ನು ಒಪ್ಪಿಕೊಳ್ಳುವ ಮೂಲಕ ಮುಂದುವರೆಯಬೇಕಿದೆ ಎಂದು ಅವರು ಸಲಹೆ ನೀಡಿದ್ದಾರೆ.
ಸಂವಿಧಾನದ 370ನೇ ವಿಧಿಯಂತಹ ಪ್ರಕರಣ ನಿರ್ಧರಿಸುವಲ್ಲಿ ಉಂಟಾದ ವಿಳಂಬದಿಂದಾಗಿ ಮತ್ತೆ ಕಾಶ್ಮೀರದ ವಿಚಾರವಾಗಿ ಕಾಲವನ್ನು ಹಿಮ್ಮುಖವಾಗಿ ತಿರುಗಿಸುವುದು ಕಷ್ಟವಾಗಿದೆ ಎಂಬುದು ಸರಿಯಾದರೂ ಸುಪ್ರೀಂ ಕೋರ್ಟ್ ಏನಾದರೂ ಅಸಾಂವಿಧಾನಿಕ ಎಂದು ಕಂಡುಕೊಂಡರೆ, ಅದು ಬೇಡ ಎಂದು ಹೇಳಲು ಯಾವುದೇ ರೀತಿಯ ಅಡ್ಡಿಯಿಲ್ಲ. ಅತ್ಯುತ್ತಮ ವಿಧಾನ ಎಂದರೆ ತೀರ್ಪು ನೀಡಲು ಕಾಲಮಿತಿ ವಿಧಿಸಬಹುದಾಗಿತ್ತು. ಅದು ಅಸಾಧ್ಯವಾದುದಲ್ಲ. ಆದರೆ ಕಾಲಮಿತಿಯಿಂದ ಹಲವು ಸವಾಲುಗಳು ಎದುರಾಗುತ್ತವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ವಿಚಾರಣೆ ಮುಂದುವರೆಯುತ್ತಲೇ ಹೋದದ್ದರಿಂದಲೂ ಸಮಯ ಕಳೆದುಹೋಯಿತು. ಐವರು ನ್ಯಾಯಮೂರ್ತಿಗಳ ಪೀಠ ಪ್ರಕರಣವನ್ನು ಆಲಿಸಬಹುದೇ ಎಂದು ಕೆಲ ಅರ್ಜಿದಾರರ ಪರ ವಕೀಲರ ವರ್ಗ ಪ್ರಶ್ನಿಸಿದರು. ಆ ಹೊತ್ತಿಗೆ ಕೆಲವರು ನಿಬಂಧನೆಗಳನ್ನು ಪ್ರಶ್ನಿಸಿದ್ದ ವಿಚಾರದಲ್ಲಿ ತಮ್ಮ ವಾದವನ್ನು ಸಂಪೂರ್ಣ ಮುಕ್ತಾಯಗೊಳಿಸಿದ್ದರು. ಅಭಿಪ್ರಾಯದ ವ್ಯತಿರಿಕ್ತತೆ ಇದ್ದುದರಿಂದ ಅಂತಿಮವಾಗಿ ನಾವು ತೀರ್ಪು ಕಾಯ್ದಿರಿಸಬೇಕಾಯಿತು. ಐವರು ನ್ಯಾಯಮೂರ್ತಿಗಳ ಪೀಠ ಪ್ರಕರಣ ಆಲಿಸಲು ಸಾಧ್ಯವಾಗದ ಕಾರಣ ಮುಂದೆ ಅದನ್ನು ನಾವು ಆಲಿಸುವುದರಲ್ಲಿ ಅರ್ಥ ಇರಲಿಲ್ಲ. ಅದು ಸಮಯ ತೆಗೆದುಕೊಳ್ಳುವಂತೆ ಮಾಡಿ ಪ್ರಕರಣವನ್ನು ಒಂದು ಮಟ್ಟಿಗೆ ಹಳಿತಪ್ಪಿಸಿತು ಎಂದ ಅವರು ನಾನು ಹೆಚ್ಚು ಹೇಳಲಾರೆ ಇದು ಸಿಜೆಐ ಅವರ ಹಕ್ಕಾಗಿದ್ದು ಕೆಲ ಕಾಲದ ನಂತರ ಅಂತಿಮವಾಗಿ ಪ್ರಕರಣದ ವಿಚಾರಣೆ ನಡೆಯಿತು ಎಂದಿದ್ದಾರೆ.
ವಿಧಿ 370 ಕುರಿತ ಸುಪ್ರೀಂ ಕೋರ್ಟ್ ತೀರ್ಪು ವಿಚಲಿತಗೊಳಿಸುವಂತಿದೆ ಎಂಬ ಸರ್ವೋಚ್ಚ ನ್ಯಾಯಾಲಯದ ಮತ್ತೊಬ್ಬ ನಿವೃತ್ತ ನ್ಯಾಯಮೂರ್ತಿಗಳಾದ ರೋಹಿಂಟನ್ ನಾರಿಮನ್ ಅವರು ಈಚೆಗೆ ನಡೆಸಿದ್ದ ವಾಗ್ದಾಳಿಗೆ ಪ್ರತಿಕ್ರಿಯಿಸಿರುವ ನ್ಯಾ. ಕೌಲ್ "ವಿಚಾರಣೆಯ ವಿಧಾನ ಮತ್ತು ಪ್ರಕ್ರಿಯೆಗೆ ಸಂಬಂಧಿಸಿದಂತೆ ಫಾಲಿ ಅವರು ಸೇರಿದಂತೆ ಅನೇಕರು ಟೀಕೆ ವ್ಯಕ್ತಪಡಿಸಿದ್ದರೆ. ಅವರು ತಮ್ಮ ನಿಲುವು ವ್ಯಕ್ತಪಡಿಸಲು ಅರ್ಹರಾಗಿದ್ದಾರೆ. ರಾಜ್ಯ ಸರ್ಕಾರ ಅಧಿಕಾರದಲ್ಲಿಲ್ಲದೆ ರಾಜ್ಯವೊಂದು ಅಸ್ತಿತ್ವದಲ್ಲಿದ್ದದ್ದು ಸೇರಿದಂತೆ ಹಲವು ಸವಾಲುಗಳಿದ್ದವು, ಇದೇ ವೇಳೆ ಕೇಂದ್ರದಲ್ಲಿ ಸರ್ಕಾರ ಅಧಿಕಾರದಲ್ಲಿತ್ತು. ಈ ಅಂಶಗಳನ್ನು ಗಮನಿಸಿದರೆ ಇದು ಲಭ್ಯವಿರುವ ಒಂದು ವಿಧಾನವಾಗಿತ್ತು ಮತ್ತು ಅವರು (ಕೇಂದ್ರ) ಆ ವಿಧಾನವನ್ನು ಬಳಸಿದರು" ಎಂದಿದ್ದಾರೆ.
ಕಾಶ್ಮೀರಿ ಪಂಡಿತರ ವಲಸೆ ವೇಳೆ ತಮ್ಮ ಸ್ವಂತ ಮನೆ ಸುಟ್ಟುಹಾಕಲಾಯಿತಾದರೂ ಆ ವೈಯಕ್ತಿಕ ಅನುಭವ ತಾನು ನೀಡಿದ ತೀರ್ಪಿನ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಲಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಕಾಶ್ಮೀರದ ನಮ್ಮ ಮನೆಯಲ್ಲಿ 2023ರ ಬೇಸಿಗೆಯಲ್ಲಿ 1989ರ ನಂತರ ಮೊದಲ ಬಾರಿಗೆ ಉಳಿದುಕೊಂಡೆ. ಈ ಅವಧಿಯಲ್ಲಿ ಯಾವಾಗಲೂ ಹುದ್ದೆಯ ಕಾರಣಕ್ಕೆ ಸರ್ಕರಿ ವಸತಿ ಸೌಕರ್ಯ ಪಡೆಯುತ್ತಿದ್ದೆನಾದರೂ ನಾನು ವಾಸಿಸಲು ಸಾಧ್ಯವಾಗದ ಮನೆಯಲ್ಲಿ ಉಳಿಯಬೇಕು ಅನ್ನಿಸುತ್ತಿತ್ತು ಎಂದು ಅವರು ವಿವರಿಸಿದ್ದಾರೆ.
ಸಂವಿಧಾನದ 370ನೇ ವಿಧಿ ರದ್ದತಿ ಕಾಶ್ಮೀರಕ್ಕೆ ಮರಳಲು ನಿಮಗೆ ಸಹಾಯ ಮಾಡಿದೆಯೇ ಎಂಬ 'ಬಾರ್ ಅಂಡ್ ಬೆಂಚ್'ನ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು "ಇಲ್ಲ, ನಾನು ಅಲ್ಲಿಗೆ ಹೋಗುತ್ತಲೇ ಇದ್ದೆ. ಈ ಬಾರಿ ನಾನು ಕಂಡುಕೊಂಡ ವಿಶೇಷತೆ ಎಂದರೆ ಅಲ್ಲಿ ಜಿ- 20 ಶೃಂಗಸಭೆಯ ಕಾರಣಕ್ಕೆ ಸಾಕಷ್ಟು ಮತ್ತು ಎಷ್ಟೆಲ್ಲಾ ಅಭಿವೃದ್ಧಿಯಾಗಿದೆ ಎನ್ನುವುದು. ನನ್ನ ಮನೆ ನದಿ ಸಮೀಪದಲ್ಲಿದ್ದು ಸೈಕಲ್ ಸವಾರಿಗೆಂದು, ಜನ ನಡೆದಾಡಲೆಂದು ಪ್ರತ್ಯೇಕ ಟ್ರ್ಯಾಕ್ ನಿರ್ಮಿಸಿದ್ದಾರೆ. ರಾತ್ರಿ ಹೊತ್ತೂ ಸಹ ಜನ ಹೆಚ್ಚು ಲವಲವಿಕೆಯಿಂದ ನಡೆದಾಡುವುದು, ಮಾತನಾಡುವುದನ್ನು ಕಂಡೆ. ಸಮಾಜ ಆಘಾತದಿಂದ ಹೊರಬರಲು ಯತ್ನಿಸುತ್ತಿದೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಕಾಶ್ಮೀರದ ವಿಚಾರ ಮಾತ್ರವಲ್ಲದೆ ಸಲಿಂಗ ವಿವಾಹ, ಪಿಎಂಎಲ್‌ಎ ಕಾಯಿದೆ, ಮದ್ರಾಸ್ ಹೈಕೋರ್ಟ್‌ನಲ್ಲಿದ್ದಾಗ ಎದುರಾದ ಸವಾಲುಗಳು, ನ್ಯಾಯಾಲಯಗಳ ಪಾತ್ರ, ಸಾಂವಿಧಾನಿಕ ನ್ಯಾಯಾಲಯವಾಗಿ ಸುಪ್ರೀಂ ಕೋರ್ಟ್ ಪಾತ್ರ ನಿರ್ವಹಿಸಬೇಕೆ? ಆಡಳಿತಕ್ಕೆ ಸಂಬಂಧಿಸಿದ ಪ್ರಕರಣಗಳು ಸುಪ್ರೀಂ ಕೋರ್ಟ್ ಪೀಠಗಳಿಂದ ಅನಗತ್ಯವಾಗಿ ಹಸ್ತಾಂತರವಾಗುತ್ತಿರುವುದು ಇತ್ಯಾದಿ ವಿಚಾರಗಳ ಕುರಿತಂತೆಯೂ ಅವರು ಸಂದರ್ಶನದಲ್ಲಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಬಾರ್ ಅಂಡ್ ಬೆಂಚ್‌ನ ಆಂಗ್ಲ ಜಾಲತಾಣದಲ್ಲಿ ಪ್ರಕಟವಾಗಿರುವ ಸಂದರ್ಶನದ ಪೂರ್ಣ ಪಠ್ಯವನ್ನು ಓದಲು ಕೆಳಗಿನ ಲಿಂಕ್‌ಗಳನ್ನು ಕ್ಲಿಕ್ಕಿಸಿ:
[ವಿಡಿಯೋ ಸಂದರ್ಶನ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ]