ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ ಸಂವಿಧಾನದ 370ನೇ ವಿಧಿ ರದ್ದುಪಡಿಸುವುದನ್ನು ಎತ್ತಿಹಿಡಿದು ಸುಪ್ರೀಂ ಕೋರ್ಟ್ ಈಚೆಗೆ ನೀಡಿದ ತೀರ್ಪಿನ ವಿರುದ್ಧ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ತೀರ್ಪು ತುಂಬಾ ವಿಚಲಿತಗೊಳಿಸುವಂತಿದೆ ಮತ್ತು ಒಕ್ಕೂಟ ವ್ಯವಸ್ಥೆ ಮೇಲೆ ದೊಡ್ಡ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು.
ಮುಂಬೈನ ಏಷ್ಯಾಟಿಕ್ ಸೊಸೈಟಿ ತನ್ನ ದರ್ಬಾರ್ ಹಾಲ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ 30ನೇ ಬನ್ಸಾರಿ ಸೇಠ್ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ "ಭಾರತದ ಸಂವಿಧಾನ: ತಡೆ ಮತ್ತು ಸಮತೋಲನ" ಎಂಬ ವಿಷಯದ ಕುರಿತು ಅವರು ಮಾತನಾಡಿದರು.
ನ್ಯಾ. ನಾರಿಮನ್ ಅವರ ಭಾಷಣದ ಪ್ರಮುಖಾಂಶಗಳು
ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವಾಗಿ ಪರಿವರ್ತಿಸಿರುವ ಬಗ್ಗೆ ತೀರ್ಪು ನೀಡಲು ನಿರಾಕರಿಸುವ ಮೂಲಕ, ಸಂವಿಧಾನದ 356ನೇ ವಿಧಿಯನ್ನು ಮೀರಿ ನಡೆಯಲು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಅನುಮತಿ ನೀಡಿದೆ. ಕಾಯಿದೆ ಪ್ರಕಾರ ಪ್ರಕಾರ ರಾಜ್ಯದಲ್ಲಿ ಒಂದು ವರ್ಷ ಮಾತ್ರ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿರಬಹುದು.
ನಿಯಮದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಕೇಂದ್ರ ಸರ್ಕಾರ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಬದಲಿಸುವ ಚಾಣಾಕ್ಷ ಮಾರ್ಗ ಹಿಡಿದಿದೆ.
ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ನಿರಾಕರಿಸುವ ಮೂಲಕ, ಸುಪ್ರೀಂ ಕೋರ್ಟ್ ಈ ಅಸಂವಿಧಾನಿಕ ಕ್ರಮ ಮುಂದುವರಿಸಲು ಅನುಮತಿ ನೀಡಿದೆ.
ತಾನು ನಿರ್ಧರಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳುವ ಮೂಲಕ ಅಸಾಂವಿಧಾನಿಕ ಕಾಯಿದೆಯನ್ನು ಅನಿರ್ದಿಷ್ಟಾವಧಿಗೆ ಮುಂದುವರೆಸಲು ಅನುಮತಿಸಿದೆ. ಆ ಮೂಲಕ 356 (5)ನೇ ವಿಧಿಯನ್ನು ಉಲ್ಲಂಘಿಸಲಾಗಿದೆ. ಇವೆಲ್ಲವೂ ತುಂಬಾ ವಿಚಲಿತಗೊಳಿಸುವ ವಿಷಯಗಳು.
ಉತ್ತರಾಧಿಕಾರಿ ಸರ್ಕಾರ ಅಥವಾ ಶಾಸಕಾಂಗವನ್ನು ನಿರ್ಬಂಧಿಸುವ ಅಧಿಕಾರ ಸಾಲಿಸಿಟರ್ ಜನರಲ್ ಅವರಿಗೆ ಇಲ್ಲ.
ಸುಪ್ರೀಂ ಕೋರ್ಟ್ ಈ ಪ್ರಶ್ನೆಯನ್ನು ನಿರ್ಧರಿಸಲಿಲ್ಲ ಏಕೆಂದರೆ 'ಶೀಘ್ರದಲ್ಲೇ ರಾಜ್ಯ ಸ್ಥಾನಮಾನ ನೀಡಲಾಗುವುದು ಮತ್ತು ಚುನಾವಣೆಗಳು ನಡೆಯಲಿವೆ ಎಂಬ ಭಾರತದ ಸಾಲಿಸಿಟರ್ ಜನರಲ್ ಅವರ ಭರವಸೆಯನ್ನು ಅದು ಒಪ್ಪಿಬಿಟ್ಟಿತು.
ಬಿಬಿಸಿ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ, ಚುನಾವಣಾ ಆಯುಕ್ತರ ನೇಮಕಾತಿಯ ಕಾನೂನು ಹಾಗೂ ಕೇರಳ ರಾಜ್ಯಪಾಲರ ಕ್ರಮಗಳಂತಹ ವಿಚಲಿತಗೊಳಿಸುವ ಘಟನೆಗಳು ಕೂಡ ನಡೆದಿವೆ.
ಬಿಬಿಸಿ ದಾಳಿ ಪ್ರಶ್ನಾರ್ಹವಾದ ಕಷ್ಟಕರ ಘಟನೆ.
ಚುನಾವಣಾ ಆಯುಕ್ತರನ್ನು ನೇಮಿಸುವ ಪ್ರಸ್ತಾವಿತ ಕಾಯಿದೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ಮರೀಚಿಕೆಯನ್ನಾಗಿಸುತ್ತದೆ. ಇದನ್ನು ನಿರಂಕುಶ ಕಾಯಿದೆಯೆಂದು ಪರಿಗಣಿಸಿ ರದ್ದುಗೊಳಿಸಬೇಕು.
ರಾಜ್ಯ ಶಾಸಕಾಂಗವು ಅಂಗೀಕರಿಸಿದ ಏಳು ಮಸೂದೆಗಳನ್ನು ರಾಷ್ಟ್ರಪತಿಗಳಿಗೆ ಕಳುಹಿಸುವ ಕೇರಳ ರಾಜ್ಯಪಾಲರ ಕ್ರಮ ರಾಜ್ಯದ ಶಾಸಕಾಂಗ ಚಟುವಟಿಕೆಯನ್ನು ಸ್ಥಗಿತಗೊಳಿಸುತ್ತದೆ.