
ಬೆಂಗಳೂರಿನ ಕಾವೇರಿ ಭವನದ ಮೂರು ಬ್ಲಾಕ್‌ಗಳನ್ನು ಒಳಗೊಂಡ ಜಾಗ ಹಸ್ತಾಂತರಿಸುವ ಕಾರ್ಯ ಪೂರ್ಣಗೊಂಡಿದ್ದು ಇನ್ನೆರಡು ತಿಂಗಳಲ್ಲಿ ಹೈಕೋರ್ಟ್ ಬಳಕೆಗೆ ಕಾವೇರಿ ಭವನ ಲಭ್ಯವಾಗಲಿದೆ ಎಂದು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ತಿಳಿಸಿದರು.
ಗಣರಾಜ್ಯೋತ್ಸವದ ಅಂಗವಾಗಿ ನಗರದ ಕರ್ನಾಟಕ ಹೈಕೋರ್ಟ್ ಪ್ರಧಾನ ಪೀಠದ ಆವರಣದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಕಳೆದ ಸ್ವಾತಂತ್ರ್ಯ ದಿನಾಚರಣೆ ವೇಳೆ ಕೆಪಿಟಿಸಿಎಲ್‌ನಿಂದ ಭವನ ಹಸ್ತಾಂತರ ಕುರಿತು ಪ್ರಸ್ತಾಪಿಸುವ ಅವಕಾಶ ಒದಗಿ ಬಂದಿತ್ತು. ಕಟ್ಟಡ ಹಸ್ತಾಂತರಿಸುವ ವಿಧಿವಿಧಾನಗಳು ಪೂರ್ಣಗೊಂಡಿದ್ದು ಇನ್ನೆರಡು ತಿಂಗಳಲ್ಲಿ ಹೈಕೋರ್ಟ್ ಬಳಕೆಗೆ ಅದು ಲಭ್ಯವಾಗಲಿದೆ. ಇದು ಒತ್ತಡಮಯ ಹೈಕೋರ್ಟ್ ಕಾರ್ಯ ನಿರ್ವಹಣೆಯನ್ನು ಸುಗಮಗೊಳಿಸಲಿದೆ ಎಂಬುದಾಗಿ ಅವರು ವಿವರಿಸಿದರು.
ರಾಜ್ಯದ ಇದೀಗ 7 ಇ ಸೇವಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು ಇನ್ನೂ 75 ನ್ಯಾಯಾಲಯಗಳಲ್ಲಿ ಇಂತಹ ಕೇಂದ್ರಗಳು ತಲೆ ಎತ್ತಲಿವೆ. ಈ ಕೇಂದ್ರಗಳು ದಾವೆದಾರರಿಗೆ ಕ್ಷಿಪ್ರ ಮತ್ತು ಮುಕ್ತ ನ್ಯಾಯ ಪಡೆಯುವಂತೆ ಮಾಡಲಿವೆ. ಇ- ಫೈಲಿಂಗ್ ಮತ್ತು ಇ- ಕೋರ್ಟ್ ಸೇವೆಯನ್ನು ಇವು ವಿಸ್ತರಿಸಲಿವೆ. ಜಿಲ್ಲಾ ಮಟ್ಟದಲ್ಲಿ19,744 ಬಳಕೆದಾರರು, ಹೈಕೋರ್ಟ್ ಮಟ್ಟದಲ್ಲಿ 13,718 ಬಳಕೆದಾರರು ಇದರ ಪ್ರಯೋಜನ ಪಡೆದಿದ್ದಾರೆ ಎಂದರು.
ಜಿಲ್ಲಾ ಮಟ್ಟದಲ್ಲಿ ಮಾತ್ರವಲ್ಲದೆ ಹೈಕೋರ್ಟ್‌ಗಳಲ್ಲೂ ಇ ಫೈಲಿಂಗ್ ವ್ಯವಸ್ಥೆಯನ್ನು ವಕೀಲರು ಸದುಪಯೋಗಪಡಿಸಿಕೊಂಡರೆ ಅದರಿಂದ ನ್ಯಾಯಾಲಯದ ಕಾರ್ಯ ತ್ವರಿತಗೊಳ್ಳುವುದು ಮಾತ್ರವಲ್ಲದೆ, ಫೈಲಿಂಗ್ ವಿಳಂಬವಾಗುತ್ತಿದೆ, ಪ್ರಕರಣ ಪಟ್ಟಿ ಮಾಡುವುದು ವಿಳಂಬವಾಗುತ್ತಿದೆ ಎಂಬ ವಕೀಲರ ದೂರುಗಳೂ ಇಲ್ಲವಾಗಲಿವೆ ಎಂದರು.
ಸಮಾರಂಭದಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳು, ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ, ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್, ಡೆಪ್ಯೂಟಿ ಸಾಲಿಸಿಟರ್ ಜನರಲ್ ಶಾಂತಿಭೂಷಣ್, ರಿಜಿಸ್ಟ್ರಾರ್ ಜನರಲ್ ಭರತ್ ಕುಮಾರ್, ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಎಚ್ ಎಲ್ ವಿಶಾಲ ರಘು, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ಪ್ರಧಾನ ಕಾರ್ಯದರ್ಶಿ ರವಿ ಮತ್ತಿತರರು ಉಪಸ್ಥಿತರಿದ್ದರು.