ನಟಿ ಸಾಮೂಹಿಕ ಅತ್ಯಾಚಾರ ಪ್ರಕರಣ: ಪಲ್ಸರ್ ಸುನಿ ಇತರರಿಗೆ 20 ವರ್ಷ ಕಠಿಣ ಸಜೆ ವಿಧಿಸಿದ ಕೇರಳ ನ್ಯಾಯಾಲಯ

ನ್ಯಾಯಾಧೀಶೆ ಹನಿ ಎಂ ವರ್ಗೀಸ್ ಅವರು ಇಂದು ಸಂಜೆ ಶಿಕ್ಷೆ ಪ್ರಕಟಿಸಿದರು.
Pulsar Suni with Ernakulam District court
Pulsar Suni with Ernakulam District court
Published on

ಮಲಯಾಳಂ ಮೂಲದ ಬಹುಭಾಷಾ ನಟಿ ಮೇಲೆ 2017ರಲ್ಲಿ ನಡೆದಿದ್ದ ಲೈಂಗಿಕ ದೌರ್ಜನ್ಯ, ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದ ಪ್ರಮುಖ ಆರೋಪಿ ಪಲ್ಸರ್ ಸುನಿ ಹಾಗೂ ಇತರ ಐವರಿಗೆ ಇಪ್ಪತ್ತು ವರ್ಷಗಳ ಕಠಿಣ ಸಜೆ ವಿಧಿಸಿ ಕೇರಳ ನ್ಯಾಯಾಲಯ ಶುಕ್ರವಾರ ಆದೇಶ ಹೊರಡಿಸಿದೆ [ಕೇರಳ ಸರ್ಕಾರ ಮತ್ತು ಸುನಿಲ್ ಎನ್ಎಸ್ ಅಲಿಯಾಸ್‌ ಪಲ್ಸರ್ ಸುನಿ ನಡುವಣ ಪ್ರಕರಣ].

 ಪ್ರಕರಣದ ಸಂಬಂಧ ಡಿಸೆಂಬರ್ 8 ರಂದು ಬಹು ನಿರೀಕ್ಷಿತ ತೀರ್ಪನ್ನು ಪ್ರಕಟಿಸಿದ್ದ ಎರ್ನಾಕುಲಂ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ  ಹನಿ ಎಂ ವರ್ಗೀಸ್ ಅವರು ಪ್ರಕರಣದ ಇನ್ನೊಬ್ಬ ಆರೋಪಿ ಮಲಯಾಳಂಣ ನಟ ದಿಲೀಪ್‌ ಅವರನ್ನು ಖುಲಾಸೆಗೊಳಿಸಿದ್ದರು.

Also Read
ಖ್ಯಾತ ನಟಿ ಸಾಮೂಹಿಕ ಅತ್ಯಾಚಾರ ಪ್ರಕರಣ: ಮಲಯಾಳಂ ನಟ ದಿಲೀಪ್ ಖುಲಾಸೆಗೊಳಿಸಿದ ಕೇರಳ ನ್ಯಾಯಾಲಯ; ಉಳಿದವರು ದೋಷಿಗಳು

ಪ್ರಕರಣದ ಉಳಿದ ಆರೋಪಿಗಳಾದ ಸುನಿಲ್ ಎನ್ಎಸ್ ಅಲಿಯಾಸ್‌ ಪಲ್ಸರ್ ಸುನಿ, ಮಾರ್ಟಿನ್ ಆಂಟೋನಿ, ಮಣಿಕಂಠನ್ ಬಿ, ವಿಜೀಶ್ ವಿಪಿ, ಸಲೀಂ ಎಚ್ ಅಕಾ ವಡಿವಲ್ ಸಲೀಂ ಹಾಗೂ ಪ್ರದೀಪ್ ಅವರನ್ನು ದೋಷಿಗಳೆಂದು ನ್ಯಾಯಾಲಯ ತೀರ್ಪು ನೀಡಿತ್ತು.

 ಶಿಕ್ಷೆಯನ್ನು ಪ್ರಶ್ನಿಸಿ ಆರು ಅಪರಾಧಿಗಳು ಮಂಡಿಸಿದ ವಾದ ಆಲಿಸಿದ ನ್ಯಾಯಾಲಯ ಸಾಮೂಹಿಕ ಅತ್ಯಾಚಾರ ಕೃತ್ಯಕ್ಕಾಗಿ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿತು.

ತನ್ನ ವೃದ್ಧ ತಾಯಿಯ ಪಾಲನೆಗೆ ಇರುವುದು ತಾನೊಬ್ಬನೇ ಎಂದು ಪಲ್ಸರ್‌ ಸುನಿ ಶಿಕ್ಷೆಯ ಪ್ರಮಾಣ ತಗ್ಗಿಸುವಂತೆ ಕೋರಿದರು. ಮತ್ತೊಬ್ಬ ಆರೋಪಿ ಆಂಟನಿ ವಾದ ಮಂಡಿಸಿ ಅಪರಾಧದಲ್ಲಿ ತನ್ನ ಪಾತ್ರ ಇಲ್ಲವಾದರೂ ಈಗಾಗಲೇ ಹಲವು ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದೇನೆ. ಹೆತ್ತವರು ತನ್ನ ಮೇಲೆ ಅವಲಂಬಿತರಾಗಿದ್ದಾರೆ ಎಂದ. ಮಣಿಕಂಠನ್‌ ಕೂಡ ಇದೇ ರೀತಿಯ ಮನವಿ ಮಾಡಿದ.  ವಿಜೇತ್‌ ತನ್ನ ಊರಿನ ಸಮೀಪದ ಜೈಲಿಗೆ ಕಳಿಸುವಂತೆ ವಿನಂತಿಸಿದ. ವಡಿವಲ್ ಸಲೀಂ ಮತ್ತು ಪ್ರದೀಪ್ ತಾವು ನಿರಪರಾಧಿಗಳು ಎಂದರು.

Also Read
ನಟಿ ಮೇಲಿನ ಹಲ್ಲೆ ಪ್ರಕರಣ: ಪಲ್ಸರ್ ಸುನಿಗೆ ದಂಡ, ಹತ್ತನೇ ಬಾರಿಗೆ ಜಾಮೀನು ಅರ್ಜಿ ವಜಾಗೊಳಿಸಿದ ಕೇರಳ ಹೈಕೋರ್ಟ್

ಆರೋಪಿಗಳ ವಾದವನ್ನು ಬಲವಾಗಿ ವಿರೋಧಿಸಿದ ಸರ್ಕಾರಿ ವಿಶೇಷ ಅಭಿಯೋಜಕ ಅಜಕುಮಾರ್ ಸಮಾಜ ಇಂತಹ ಅಪರಾಧಗಳನ್ನು ಸಹಿಸದು ಎಂಬ ಸಂದೇಶವನ್ನು ಶಿಕ್ಷೆ ಸಾರಬೇಕು. ಎಲ್ಲಾ 6 ಜನರಿಗೆ ಅವರ ಅಪರಾಧಗಳಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ಕೋರಿದರು.

ಪಿತೂರಿಯಲ್ಲಿ ಭಾಗವಹಿಸಿದ ಎಲ್ಲರೂ ತಮ್ಮ ಅಪರಾಧಗಳಿಗೆ ಸಮಾನವಾಗಿ ಹೊಣೆಗಾರರಾಗಿದ್ದರೂ, ಸುನಿ ಮಾತ್ರ ನಿಜವಾಗಿಯೂ ಅತ್ಯಾಚಾರ ಎಸಗಿದ್ದಾನೆ ಎಂಬ ಅಂಶವನ್ನು ಗಣನೆಗೆ ತೆಗೆದುಕೊಳ್ಳಬೇಕಾಗಬಹುದು ಎಂದು ನ್ಯಾಯಾಧೀಶೆ ಹನಿ ಅವರು ಮೌಖಿಕವಾಗಿ ಹೇಳಿದರು.

Kannada Bar & Bench
kannada.barandbench.com