ಮಲಯಾಳಂನಲ್ಲಿ ಬಳಸುವಂತೆಯೇ ರಾಜ್ಯದ ಹೆಸರನ್ನು ಅಧಿಕೃತವಾಗಿ ಕೇರಳಂ ಎಂದು ಬದಲಾಯಿಸಲು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿ ಕೇರಳ ರಾಜ್ಯ ವಿಧಾನಸಭೆ ಸೋಮವಾರ ಅವಿರೋಧವಾಗಿ ನಿರ್ಣಯ ಅಂಗೀಕರಿಸಿದೆ.
ಮಲಯಾಳಂ ಮಾತನಾಡುವವರ ಏಕೀಕೃತ ರಾಜ್ಯಕ್ಕೆ ಕೇರಳಂ ಎಂಬುದಾಗಿ ಹೆಸರಿಡಬೇಕು ಎಂದು ಭಾರತ ಸ್ವಾತಂತ್ರ್ಯ ಹೋರಾಟದ ಕಾಲದಿಂದಲೂ ಬಲವಾಗಿ ಪ್ರತಿಪಾದಿಸಲಾಗಿದೆ ಆದರೆ, ಭಾರತದ ಸಂವಿಧಾನದ ಮೊದಲ ಪರಿಚ್ಛೇದದಲ್ಲಿ ರಾಜ್ಯದ ಹೆಸರು ಕೇರಳ ಎಂದಿದೆಯೆ ವಿನಾ, ಕೇರಳಂ ಎಂದಿಲ್ಲ ಎಂದು ನಿರ್ಣಯ ವಿವರಿಸಿದೆ.
ರಾಜ್ಯದ ಹೆಸರನ್ನು ಕೇರಳಂ ಎಂದು ಬದಲಾಯಿಸುವುದಕ್ಕಾಗಿ ಸಂವಿಧಾನದ ಮೊದಲನೇ ಪರಿಚ್ಛೇದದಲ್ಲಿ ಮಾರ್ಪಾಡು ಮಾಡಲು ಪರಿಚ್ಛೇದ 3ರ ಅಡಿಯಲ್ಲಿ ಕೇಂದ್ರ ಸರ್ಕಾರ ತುರ್ತು ಕ್ರಮ ಕೈಗೊಳ್ಳುವಂತೆ ಅದು ಕೋರಿದೆ.
ಅಲ್ಲದೆ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ನಮೂದಿಸಲಾದ ಎಲ್ಲಾ ಭಾಷೆಗಳಲ್ಲಿ ಕೂಡ ರಾಜ್ಯದ ಹೆಸರನ್ನು ಕೇರಳಂ ಎಂದೇ ಬದಲಿಸುವಂತೆ ನಿರ್ಣಯ ಆಗ್ರಹಿಸಿದೆ.
ವಿಧಾನಸಭೆ ಇಂತಹ ನಿರ್ಣಯ ಅಂಗೀಕರಿಸುತ್ತಿರುವುದು ಇದು ಎರಡನೇ ಬಾರಿ. ಅದರ ಮೊದಲ ನಿರ್ಣಯವನ್ನು ಕೇಂದ್ರ ಸರ್ಕಾರ ಕೆಲವು ತಾಂತ್ರಿಕ ಬದಲಾವಣೆಗಳನ್ನು ಸೂಚಿಸಿ ಹಿಂದಕ್ಕೆ ಕಳುಹಿಸಿತ್ತು.
ಜೂನ್ 24 ರಂದು, ಪ್ರಸ್ತುತ ನಿರ್ಣಯವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಂಡಿಸಿದ್ದು ವಿಧಾನಸಭೆ ಸರ್ವಾನುಮತದಿಂದ ಅಂಗೀಕರಿಸಿದೆ.