ʼಮಿನ್ನಲ್ ಮುರಳಿʼ ಆಧಾರಿತ ಚಿತ್ರ, ಸಿನಿಮೋತ್ಪನ್ನ ತಯಾರಿಕೆಗೆ ಕೇರಳ ನ್ಯಾಯಾಲಯ ತಾತ್ಕಾಲಿಕ ನಿರ್ಬಂಧ
ಮಲಯಾಳಂನ ಸೂಪರ್‌ಹೀರೋ ಚಲನಚಿತ್ರ 'ಮಿನ್ನಲ್ ಮುರಳಿ'ಯ ಪಾತ್ರಗಳನ್ನೊಳಗೊಂಡ ಚಲನಚಿತ್ರ, ಗ್ರಾಫಿಕ್ ಕಾದಂಬರಿ, ಚಿತ್ರೋತ್ಪನ್ನ, ಅಥವಾ ಚಿತ್ರದ ಹಿನ್ನೆಲೆಯಿರಿಸಿಕೊಂಡು ತಯಾರಿಸಲಾಗುವ ಸ್ಪಿನ್-ಆಫ್ ಮೂವಿಗಳ ತಯಾರಿಕೆಗೆ ಕೇರಳ ನ್ಯಾಯಾಲಯ ಗುರುವಾರ ತಾತ್ಕಾಲಿಕ ನಿರ್ಬಂಧ ವಿಧಿಸಿದೆ [ಅರುಣ್ ಎ ಆರ್ ಮತ್ತಿತರರು ಹಾಗೂ ವೀಕೆಂಡ್ ಬ್ಲಾಕ್‌ಬಸ್ಟರ್ಸ್ ಪ್ರೈ. ಲಿಮಿಟೆಡ್ ಇನ್ನಿತರರ ನಡುವಣ ಪ್ರಕರಣ]
ʼಮಿನ್ನಲ್ ಮುರಳಿʼಯ ಚಿತ್ರಕಥೆಗಾರರಾದ ಅರುಣ್ ಎ ಆರ್ ಮತ್ತು ಜಸ್ಟಿನ್ ಮ್ಯಾಥ್ಯೂ ಸಲ್ಲಿಸಿದ ಹಕ್ಕುಸ್ವಾಮ್ಯ ಉಲ್ಲಂಘನೆ ಮೊಕದ್ದಮೆಗೆ ಸಂಬಂಧಿಸಿದಂತೆ ಎರ್ನಾಕುಲಂ ಜಿಲ್ಲಾ ನ್ಯಾಯಾಲಯ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಮುಂದಿನ ಆದೇಶದವರೆಗೆ ತಡೆಯಾಜ್ಞೆ ಜಾರಿಯಲ್ಲಿರುತ್ತದೆ ಎಂದು ಆದೇಶ ಹೇಳಿದೆ.
ವೀಕೆಂಡ್ ಬ್ಲಾಕ್ ಬಸ್ಟರ್ಸ್ ಪ್ರೈ. ಲಿಮಿಟೆಡ್, ಚಿತ್ರ ಮಿನ್ನಲ್ ಮುರುಳಿ ಚಿತ್ರವನ್ನು ಆಧರಿಸಿ ಸ್ಪಿನ್ ಆಫ್ ಸಿನಿಮಾ ನಿರ್ಮಿಸಲು ಮುಂದಾಗಿರುವ ನೆಟ್‌ಫ್ಲಿಕ್ಸ್ ಇಂಡಿಯಾ, ಅಮರ್ ಚಿತ್ರ ಕಥಾ, ಸ್ಪಿರಿಟ್ ಮೀಡಿಯಾ ಮತ್ತು ನಿರ್ಮಾಪಕಿ ಸೋಫಿಯಾ ಪೌಲ್ ಪ್ರಕರಣದ ಪ್ರತಿವಾದಿಗಳಾಗಿದ್ದಾರೆ.
ಚಿತ್ರದ ನಾಯಕ ಹಾಗೂ ಪಾತ್ರಗಳು ತಮ್ಮ ಪರಿಕಲ್ಪನೆಯಿಂದ ಮೂಡಿಬಂದಿದ್ದು ಸಿಡಿಲಿಗೆ ಸಿಲುಕುವ ಜೈಸನ್ ಎಂಬ ಯುವ ಟೈಲರ್‌ಗೆ ನಂತರ ಅತಿಮಾನವ ಶಕ್ತಿ ದೊರೆತು ಆತ ಸೂಪರ್ ಹೀರೊ ಆಗಿ ಬದಲಾಗುತ್ತಾನೆ.
ತಮಗೇ ಹಕ್ಕುಸ್ವಾಮ್ಯ ದೊರೆಯಬೇಕು ಎಂದು ಪ್ರತಿಪಾದಿಸಿರುವ ಅರುಣ್ ಮತ್ತು ಮ್ಯಾಥ್ಯೂ ಅವರು, ಅಮರ ಚಿತ್ರ ಕಥಾ ಮತ್ತು ಸ್ಪಿರಿಟ್ ಮೀಡಿಯಾದೊಂದಿಗೆ ಪಾಲುದಾರಿಕೆ ಹೊಂದಿರುವ ವೀಕೆಂಡ್ ಬ್ಲಾಕ್‌ಬಸ್ಟರ್ಸ್ 'ಮಿನ್ನಲ್ ಮುರಳಿ ಸ್ಟ್ರೈಕ್ಸ್ ಎಗೇನ್' ಗ್ರಾಫಿಕ್ಸ್ ಕಾದಂಬರಿಯ ಹಕ್ಕನ್ನು ಮಾರಾಟ ಮಾಡಿದೆ ಎಂದು ಆರೋಪಿಸಿದ್ದಾರೆ.
ಅರುಣ್ ಮತ್ತು ಮ್ಯಾಥ್ಯೂ ಅವರ ಹಕ್ಕುಸ್ವಾಮ್ಯದ ಹೊರತಾಗಿಯೂ, ವೀಕೆಂಡ್ ಬ್ಲಾಕ್‌ಬಸ್ಟರ್ಸ್ ಅಮರ ಚಿತ್ರ ಕಥಾ ಮತ್ತು ಸ್ಪಿರಿಟ್ ಮೀಡಿಯಾದೊಂದಿಗೆ ಪಾಲುದಾರಿಕೆ ಹೊಂದಿದ್ದು, ಗ್ರಾಫಿಕ್ ಕಾದಂಬರಿ 'ಮಿನ್ನಲ್ ಮುರಳಿ ಸ್ಟ್ರೈಕ್ಸ್ ಎಗೇನ್' ಅನ್ನು ₹299 ಕ್ಕೆ ಪ್ರಕಟಿಸಿದ್ದು ಮತ್ತು ವಿವಿಧ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಮಾರಾಟ ಮಾಡಿದೆ ಎಂದು ಆರೋಪಿಸಿದ್ದಾರೆ.
ಅಲ್ಲದೆ ಚಿತ್ರೋತ್ಪನ್ನಗಳ ಮಾರಾಟಕ್ಕೂ ವೀಕೆಂಡ್ ಬ್ಲಾಕ್‌ಬಸ್ಟರ್ಸ್ ಮುಂದಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಫಿಕ್ ಕಾದಂಬರಿ ಮತ್ತು ಚಿತ್ರೋತ್ಪನ್ನಗಳ ಮಾರಾಟಕ್ಕೆ ಸಂಬಂಧಿಸಿದ ರಾಯಧನವನ್ನು ತಮಗೆ ಪಾವತಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ. ಮಿನ್ನಲ್ ಮುರಳಿ ಚಿತ್ರಕಥೆಗೆ ಅರುಣ್ ಮತ್ತು ಮ್ಯಾಥ್ಯೂ ಅವರಿಗೆ ವೀಕೆಂಡ್ ಬ್ಲಾಕ್‌ಬಸ್ಟರ್ಸ್ ಸಂಸ್ಥೆಯು ₹33,17,650 ಸಂದಾಯ ಮಾಡಿತ್ತು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.