ದ್ವೇಷ ಭಾಷೆ ಆರೋಪ ಎದುರಿಸುತ್ತಿರುವ ವ್ಯಕ್ತಿಗೆ ಕೇರಳ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಆರೋಪಿಯ ಅಭಿಪ್ರಾಯಗಳು ಯೂಟ್ಯೂಬ್‌ನಲ್ಲಿ ಅಡಕವಾಗಿರುವುದರಿಂದ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಆರೋಪಿ ಅನಿಲ್ ಕುಮಾರ್ ಅವರು ತಮ್ಮ ಯೂಟ್ಯೂಬ್‌ನಲ್ಲಿ ಪ್ರಚೋದನಾಕಾರಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಕ್ರಿಶ್ಚಿಯನ್ ಮತ್ತು ಮುಸ್ಲಿಂ ಸಮುದಾಯಗಳನ್ನು ಪರಸ್ಪರ ಎತ್ತಿಕಟ್ಟುವ ವಿಚಾರಗಳನ್ನು ಅವರು ವ್ಯಕ್ತಪಡಿಸಿದ್ದರು.
ಇಸ್ಲಾಂ ಬೋಧಕರನ್ನು ಟೀಕಿಸುವ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವುದು ಮತ್ತು ದ್ವೇಷ ಹುಟ್ಟು ಹಾಕುವುದು ಹಾಗೂ ಎರಡೂ ಸಮುದಾಯಗಳ ನಡುವೆ ವೈರಾಗ್ಯ ಮೂಡಿಸುವ ಆರೋಪ ಕುಮಾರ್ ಅವರ ಮೇಲಿದೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 153A ಅಡಿ ಪ್ರಕರಣ ದಾಖಲಿಸಲಾಗಿದೆ.
"ಧರ್ಮಶಾಸ್ತ್ರದ ವಿಶ್ಲೇಷಣೆಯಲ್ಲಿ ತೊಡಗಿಕೊಂಡಿದ್ದು ಅದು ಸಾಂವಿಧಾನಿಕ ಚೌಕಟ್ಟಿನ ಒಳಗೆ ಬರುತ್ತದೆ" ಎಂದು ನಿರೀಕ್ಷಣಾ ಜಾಮೀನು ಕೋರಿದ್ದ ಕುಮಾರ್ ವಾದಿಸಿದ್ದರು. ಕಕ್ಷಿದಾರರ ಅಭಿಪ್ರಾಯಗಳು ಸಾರ್ವಜನಿಕವಾಗಿ ಯೂಟ್ಯೂಬ್‌ನಲ್ಲಿದ್ದು, ಯಾವುದೇ ಇತರೆ ಧಾರ್ಮಿಕ ಮುಖಂಡರ ವಿರುದ್ಧವಲ್ಲ ಎಂದು ಆರೋಪಿಯ ಪರ ವಕೀಲರಾದ ಡಿ ಜಯಕೃಷ್ಣನ್ ಮತ್ತು ರಾಘುಲ್ ಸುಧೀಶ್ ವಾದಿಸಿದ್ದು, ವಶಕ್ಕೆ ಪಡೆದು ತನಿಖೆ ಮಾಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ನ್ಯಾ. ಅಶೋಕ್ ಮೆನನ್ ಅವರು ಆರೋಪಿಯ ಅಭಿಪ್ರಾಯಗಳು ಯೂಟ್ಯೂಬ್ ನಲ್ಲಿವೆ ಎಂದಿದ್ದು ಹೀಗೆ ಹೇಳಿದ್ದಾರೆ.
“ಇಸ್ಲಾಂಗೆ ಹೋಲಿಕೆ ಮಾಡಿ ಆರೋಪಿಯು ಹಲವು ಚರ್ಚೆಗಳನ್ನು ನಡೆಸಿದ್ದಾರೆ ಎಂಬುದು ದಿಟ. ಇಸ್ಲಾಂ ಧರ್ಮದ ಪ್ರತಿಪಾದಕರ ವಿಚಾರಗಳಿಗೆ ವಿರುದ್ಧವಾಗಿ ಆರೋಪಿ ಮಾತನಾಡಿದ್ದಾರೆ. ಸೆಕ್ಷನ್ 153A ಅಡಿ ಶಿಕ್ಷಾರ್ಹ ಆರೋಪದ ಕುರಿತಾಗಿ ನಾವಿಲ್ಲಿ ಚರ್ಚಿಸಲು ಬಯಸುವುದಿಲ್ಲ" ಎಂದು ನ್ಯಾಯಮೂರ್ತಿ ಹೇಳಿದ್ದಾರೆ.
ಮೂರು ವಾರಗಳಲ್ಲಿ ಪೊಲೀಸರಿಗೆ ಶರಣಾಗುವಂತೆ ನ್ಯಾಯಾಲಯವು ಆರೋಪಿಗೆ ಸೂಚಿಸಿದೆ. ಒಂದೊಮ್ಮೆ ಆರೋಪಿಯನ್ನು ಬಂಧಿಸಿದರೆ ₹50 ಸಾವಿರ ಬಾಂಡ್ ಸಲ್ಲಿಸಿ ಜಾಮೀನು ಪಡೆಯುವಂತೆಯೂ ಸೂಚಿಸಿದೆ. ಹಿರಿಯ ಸರ್ಕಾರಿ ಅಭಿಯೋಜಕ ಸಿ ಎನ್ ಪ್ರಭಾಕರನ್ ಅವರು ಪ್ರಕರಣದಲ್ಲಿ ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದರು.