sabarimala temple
sabarimala temple

ಶಬರಿಮಲೆ: ಮತ್ತೊಂದು ಚಿನ್ನಗಳವು ಪ್ರಕರಣದ ಕುರಿತು ತನಿಖೆಗೆ ಕೇರಳ ಹೈಕೋರ್ಟ್‌ ಆದೇಶ

ಇದೇ ವೇಳೆ ದ್ವಾರಪಾಲಕ ವಿಗ್ರಹಗಳು ಮತ್ತು ಬಾಗಿಲಿನ ಚೌಕಟ್ಟಿನಿಂದ ಚಿನ್ನ ಕಳ್ಳತನವಾದ ಪ್ರಕರಣವನ್ನು ತನಿಖೆ ಮಾಡುತ್ತಿರುವ ಎಸ್‌ಐಟಿ ಉನ್ನತ ವೈಜ್ಞಾನಿಕ ಪರೀಕ್ಷೆ ನಡೆಸಲು ಅನುವಾಗುವಂತೆ ನ್ಯಾಯಾಲಯ ನಿರ್ದೇಶನಗಳನ್ನು ನೀಡಿದೆ.
Published on

ಶಬರಿಮಲೆ ದೇವಾಲಯದಲ್ಲಿ 2017ರಲ್ಲಿ ಭಕ್ತರಿಂದ ಬಂದ ಚಿನ್ನದ ದೇಣಿಗೆಯನ್ನು ಬಳಸಿ ಹೊಸ ಧ್ವಜಸ್ತಂಭವನ್ನು ಸ್ಥಾಪಿಸಿದ ವೇಳೆ, ಧ್ವಜಸ್ತಂಭದಿಂದ ಚಿನ್ನ ಕಾಣೆಯಾಗಿರುವ ಆರೋಪಗಳ ಕುರಿತು ಪ್ರಾಥಮಿಕ ತನಿಖೆ ನಡೆಸುವಂತೆ ವಿಚಕ್ಷಣಾ ಹಾಗೂ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಕೇರಳ ಹೈಕೋರ್ಟ್ ಸೋಮವಾರ ಆದೇಶಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಒಬ್ಬ ಭಕ್ತರಿಂದ ದೇವಸ್ಥಾನದ ವಿಚಕ್ಷಣಾ ವಿಭಾಗಕ್ಕೆ ದೂರು ಸಲ್ಲಿಸಲಾಗಿದೆ ಎಂಬುದನ್ನು ನ್ಯಾಯಮೂರ್ತಿ ರಾಜಾ ವಿಜಯರಾಘವನ್ ವಿ ಮತ್ತು ನ್ಯಾಯಮೂರ್ತಿ ಕೆ ವಿ ಜಯಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠ ಗಮನಿಸಿತು.

Also Read
ಡಿಜಿಟಲ್‌ ಅರೆಸ್ಟ್‌: ಬ್ಯಾಂಕ್‌ಗಳ ಪಾತ್ರದ ಬಗ್ಗೆ ಸುಪ್ರೀಂ ಕೋರ್ಟ್‌ ಕಳವಳ

2016ರಲ್ಲಿ ಧ್ವಜಸ್ತಂಭ ಬದಲಾವಣೆಗೆ ನ್ಯಾಯಾಲಯವೇ ಅನುಮೋದನೆ ನೀಡಿತ್ತು. ಚಿನ್ನ ಮತ್ತು ಮೌಲ್ಯಯುತ ವಸ್ತುಗಳ ಕಾಯ್ದುಕೊಳ್ಳುವಿಕೆ ಹಾಗೂ ಲೆಕ್ಕಪತ್ರ ನಿರ್ವಹಣೆಗೆ ಸ್ಪಷ್ಟ ನಿರ್ದೇಶನಗಳನ್ನು ನೀಡಲಾಗಿತ್ತು. ಈ ಕಾರ್ಯವನ್ನುಹೈದರಾಬಾದ್‌ನ ಫೀನಿಕ್ಸ್‌ ಇನ್ಫಾಸ್ಟ್ರಕ್ಚರ್‌ ಪ್ರೈ.ಲಿ. ವಹಿಸಿಕೊಂಡಿತ್ತು.

ಆದರೆ ವಿಚಕ್ಷಣಾ ವಿಭಾಗದ ಪರಿಶೀಲನೆ ವೇಳೆ ದೇಣಿಗೆಯಾಗಿ ಬಂದ ಚಿನ್ನಕ್ಕೆ ಸಂಬಂಧಿಸಿದ ಪ್ರತ್ಯೇಕ ದಾನಿಗಳ ರಸೀದಿಗಳ ಕೊರತೆ ಸೇರಿದಂತೆ ಹಲವು ಲೋಪಗಳು ಪತ್ತೆಯಾಗಿವೆ. ದೇವಸ್ಥಾನ ಮಂಡಳಿಯ ನಿಯಮಗಳು ಮತ್ತು ಹಣಕಾಸು ಹೊಣೆಗಾರಿಕೆ ಮಾನದಂಡಗಳನ್ನು ಉಲ್ಲಂಘಿಸಿರುವುದು ಕಂಡುಬಂದಿದೆ. ದಾಖಲೆಗಳ ಪ್ರಕಾರ ಒಟ್ಟು 9,573.010 ಗ್ರಾಂ ಚಿನ್ನ ಲಭ್ಯವಿದ್ದರೂ, 9,340.200 ಗ್ರಾಂ ಮಾತ್ರ ಬಳಸಲಾಗಿದೆ ಎಂದು ತೋರಿಸಲಾಗಿದ್ದು, ಉಳಿದ ಚಿನ್ನದ ಬಗ್ಗೆ ಸಮರ್ಪಕ ಪುರಾವೆಗಳಿಲ್ಲ.

ಈ ಹಿನ್ನೆಲೆಯಲ್ಲಿ ಚಿನ್ನ ಕಳ್ಳತನದ ಆರೋಪಗಳಿಗೆ ಸಂಬಂಧಿಸಿದಂತೆ ಸ್ವತಂತ್ರ ತನಿಖೆ ಅಗತ್ಯವೆಂದು ನ್ಯಾಯಾಲಯ ತೀರ್ಮಾನಿಸಿದೆ. ಪ್ರಾಥಮಿಕ ತನಿಖೆಯನ್ನು ವಿಚಕ್ಷಣಾ ಹಾಗೂ ಭ್ರಷ್ಟಾಚಾರ ನಿಗ್ರಹ ದಳಕ್ಕೆ ವಹಿಸಿದೆ. ದಳದ ನಿರ್ದೇಶಕರು ನಿಷ್ಠಾವಂತ ಮತ್ತು ಅರ್ಹ ಅಧಿಕಾರಿಗಳ ತಂಡವನ್ನು ರಚಿಸಿ, ದಾನಿಗಳ ಹೇಳಿಕೆಗಳು ಹಾಗೂ ಹಣಕಾಸು–ದ್ರವ್ಯ ದಾಖಲೆಗಳನ್ನು ಪರಿಶೀಲಿಸಿ 30 ದಿನಗಳೊಳಗೆ ವರದಿ ಸಲ್ಲಿಸಬೇಕೆಂದು ಆದೇಶಿಸಲಾಗಿದೆ.

ಇದೇ ವೇಳೆ ದೇವಾಲಯದ ಗರ್ಭಗುಡಿಯ ದ್ವಾರಪಾಲಕ ವಿಗ್ರಹಗಳು ಮತ್ತು ಬಾಗಿಲಿನ ಚೌಕಟ್ಟಿನಿಂದ ಚಿನ್ನ ಕಳ್ಳತನವಾದ ಪ್ರಕರಣವನ್ನು ತನಿಖೆ ಮಾಡುತ್ತಿರುವ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಉನ್ನತ ವೈಜ್ಞಾನಿಕ ಪರೀಕ್ಷೆಗಳನ್ನು ನಡೆಸಲು ಅನುಕೂಲವಾಗುವಂತೆ ನ್ಯಾಯಾಲಯ ನಿರ್ದೇಶನಗಳನ್ನು ನೀಡಿದೆ. ಪ್ರಾಥಮಿಕ ವೈಜ್ಞಾನಿಕ ತನಿಖೇ ವೇಳೆ ಕಂಡುಬಂದ ಅಂಶಗಳು ಮೂಲ ಚಿನ್ನದ ಲೇಪನವನ್ನು ತೆಗೆದು ಕಡಿಮೆ ದಪ್ಪದ ಹೊಸ ಲೇಪನ ಹಾಕಿ ದುರುಪಯೋಗ ಮುಚ್ಚಿಹಾಕಿರುವ ಸಾಧ್ಯತೆಯನ್ನು ಸೂಚಿಸುತ್ತವೆ ಎಂದು ಎಸ್‌ಐಟಿ ತಿಳಿಸಿತ್ತು.

Also Read
ಏಮ್ಸ್ ರೋಗಿಗಳ ಕುಟುಂಬಸ್ಥರಿಗೆ ರಾತ್ರಿ ಆಶ್ರಯ ಕೇಂದ್ರ: ದೇಣಿಗೆ ನೀಡುವಂತೆ ವಕೀಲ ಸಮುದಾಯಕ್ಕೆ ದೆಹಲಿ ಹೈಕೋರ್ಟ್ ಸಲಹೆ

ಚಿನ್ನ ದುರ್ಬಳಕೆಯ ಪ್ರಮಾಣ ಎಷ್ಟು ಎಂಬುದನ್ನು ದೃಢಪಡಿಸಲು ಉನ್ನತ ಲೋಹಶಾಸ್ತ್ರೀಯ ಮತ್ತು ವಿಧಿವಿಜ್ಞಾನ ಪರೀಕ್ಷೆಗಳು ಅಗತ್ಯವೆಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಇದಕ್ಕಾಗಿ ಎಸ್‌ಐಟಿಗೆ ಫೆಬ್ರವರಿ 12ರಂದು ದೇವಸ್ಥಾನದಿಂಧ ಮಾದರಿಗಳನ್ನು ಸಂಗ್ರಹಿಸಿ, ಭಾಭಾ ಅಣು ಸಂಶೋಧನಾ ಕೇಂದ್ರ, ರಾಷ್ಟ್ರೀಯ ಲೋಹಶಾಸ್ತ್ರ ಪ್ರಯೋಗಾಲಯ ಹಾಗೂ ರಕ್ಷಣಾ ಲೋಹಶಾಸ್ತ್ರ ಸಂಶೋಧನಾ ಪ್ರಯೋಗಾಲಯಗಳಂತಹ ರಾಷ್ಟ್ರೀಯ ಸಂಸ್ಥೆಗಳಲ್ಲಿ ವಿಶೇಷ ಪರೀಕ್ಷೆ ನಡೆಸಲು ಅನುಮತಿಸಲಾಗಿದೆ.

ಇಲ್ಲಿಯವರೆಗೆ 262 ಸಾಕ್ಷಿಗಳನ್ನು ವಿಚಾರಣೆ ಮಾಡಲಾಗಿದ್ದು, 2019ರಿಂದಲೂ ಇರುವ ಕರೆ ವಿವರ ದಾಖಲೆಗಳು ಹಾಗೂ ಡಿಜಿಟಲ್ ಸಾಕ್ಷ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಪ್ರಕರಣದ ಮುಂದಿನ ವಿಚಾರಣೆ ಫೆಬ್ರವರಿ 19ರಂದು ನಡೆಯಲಿದೆ.

Kannada Bar & Bench
kannada.barandbench.com