ಚಾನೆಲ್‌ಗಳು ಕಾನೂನು ಪಾಲಿಸುತ್ತಿವೆಯೇ ಎಂದು ಪರಿಶೀಲಿಸುವ ವ್ಯವಸ್ಥೆ ಇದೆಯೇ? ಕೇಂದ್ರಕ್ಕೆ ಬಾಂಬೆ ಹೈಕೋರ್ಟ್ ಪ್ರಶ್ನೆ

ವಿದ್ಯುನ್ಮಾನ ಮಾಧ್ಯಮಗಳನ್ನು ನಿಯಂತ್ರಿಸಲು ಯಾವುದೇ ವ್ಯವಸ್ಥೆ ಇಲ್ಲ. ಮಾಧ್ಯಮಗಳನ್ನು ಏಕೆ ಇಂತಹ ಪರಿಶೀಲನೆಯಿಂದ ಹೊರಗಿರಿಸಲಾಗಿದೆ? ಏಕೆ ಪ್ರತಿಬಾರಿಯೂ ನಾಗರಿಕರು ನ್ಯಾಯಾಲಯದ ಮೆಟ್ಟಿಲೇರಬೇಕು ಎಂದು ಪ್ರಶ್ನಿಸಿದ ಬಾಂಬೆ ಹೈಕೋರ್ಟ್.
ಚಾನೆಲ್‌ಗಳು ಕಾನೂನು ಪಾಲಿಸುತ್ತಿವೆಯೇ ಎಂದು ಪರಿಶೀಲಿಸುವ ವ್ಯವಸ್ಥೆ ಇದೆಯೇ? ಕೇಂದ್ರಕ್ಕೆ ಬಾಂಬೆ ಹೈಕೋರ್ಟ್ ಪ್ರಶ್ನೆ

“ಹಾನಿ ಸಂಭವಿಸುವುದಕ್ಕೂ ಮುನ್ನ” ವಿದ್ಯುನ್ಮಾನ ಮಾಧ್ಯಮಗಳು ಕಾನೂನು ಪರಿಪಾಲಿಸುತ್ತಿವೆಯೇ ಎಂಬುದನ್ನು ಪರಿಶೀಲಿಸಲು ಯಾವುದಾದರೂ ವ್ಯವಸ್ಥೆ ಇದೆಯೇ? ಅಥವಾ ದೂರು ನೀಡಿದ ಮೇಲೆ ಈಗಾಗಲೇ ಇರುವ ನಿಯಮದಡಿ ಕ್ರಮವಹಿಸಲಾಗುತ್ತದೆಯೇ? ಎಂದು ಕೇಂದ್ರ ಸರ್ಕಾರವನ್ನು ಬಾಂಬೆ ಹೈಕೋರ್ಟ್ ಶುಕ್ರವಾರ ಪ್ರಶ್ನಿಸಿತು.

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದ ಸಾವಿನ ವರದಿಗಾರಿಕೆಯ ಮೇಲಿನ ಮಾಧ್ಯಮ ವಿಚಾರಣೆ ವಿರೋಧಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ (ಪಿಐಎಲ್) ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಾಂಕರ್ ದತ್ತಾ ಮತ್ತು ನ್ಯಾ. ಜಿ ಎಸ್ ಕುಲಕರ್ಣಿ ಅವರಿದ್ದ ವಿಭಾಗೀಯ ಪೀಠವು ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಅವರಿಗೆ ಹಲವು ಪ್ರಶ್ನೆಗಳನ್ನು ಹಾಕಿತು. ನ್ಯಾಯಾಲಯವು ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ.

“ಮುದ್ರಣ ಮಾಧ್ಯಮದ ವಿರುದ್ಧ ಕ್ರಮಕೈಗೊಳ್ಳಲು 1970ರಿಂದಲೂ ಕಾನೂನು ಅಸ್ವಿತ್ವದಲ್ಲಿದೆ. ಆದರೆ, ವಿದ್ಯುನ್ಮಾನ ಮಾಧ್ಯಮಗಳ ವಿರುದ್ಧ ಕ್ರಮವಹಿಸಲು ಯಾವುದೇ ಕಾನೂನು ಇಲ್ಲ ಏಕೆ? ವಿದ್ಯುನ್ಮಾನ ಮಾಧ್ಯಮಗಳಿಗೆ ಕಡಿವಾಣ ಹಾಕುವ ಮನಸ್ಥಿತಿ ನಿಮಗೆ ಇಲ್ಲ” ಎಂದು ಪೀಠವು ತರಾಟೆಗೆ ತೆಗೆದುಕೊಂಡಿತು.
ಏನಾದರೂ ಅವಘಡಗಳು ಸಂಭವಿಸಿದರೆ ಸರ್ಕಾರಿ ಅಧಿಕಾರಿಗಳನ್ನು ಜವಾಬ್ದಾರಿಯನ್ನಾಗಿಸಲಾಗುತ್ತದೆ. ಖಾಸಗಿ ಕ್ಷೇತ್ರದಲ್ಲೂ ಈ ನಿಯಮವಿದೆ. ದುರ್ವರ್ತನೆ ತೋರಿದರೆ ಸಾಮಾನ್ಯರ ವಿರುದ್ಧವೂ ಕ್ರಮವಹಿಸಲಾಗುತ್ತದೆ. ಇದು ರಾಷ್ಟ್ರಪತಿಯಿಂದ ಹಿಡಿದು ಎಲ್ಲರಿಗೂ ಅನ್ವಯಿಸುತ್ತದೆ” ಎಂದು ನ್ಯಾಯಪೀಠ ಪರೋಕ್ಷವಾಗಿ ಮಾಧ್ಯಮಗಳು ಈ ಚೌಕಟ್ಟಿಗೆ ಹೊರತಲ್ಲ ಎನ್ನುವುದನ್ನು ಹೇಳಿತು.

ಮುಂದುವರೆದು ಪೀಠವು, "ವಿದ್ಯುನ್ಮಾನ ಮಾಧ್ಯಮಗಳನ್ನು ನಿಯಂತ್ರಿಸಲು ಯಾವುದೇ ವ್ಯವಸ್ಥೆ ಇಲ್ಲ. ಮಾಧ್ಯಮಗಳನ್ನು ಏಕೆ ಇಂತಹ ಪರಿಶೀಲನೆಯಿಂದ ಹೊರಗಿರಿಸಲಾಗಿದೆ? ಏಕೆ ಪ್ರತಿಬಾರಿಯೂ ನಾಗರಿಕರು ನ್ಯಾಯಾಲಯದ ಮೆಟ್ಟಿಲೇರಬೇಕು? ಇದು ಮಾಧ್ಯಮಕ್ಕೂ ಒಳ್ಳೆಯದಲ್ಲ," ಎಂದು ಕಠಿಣವಾಗಿ ಹೇಳಿತು.

“ಮಾಧ್ಯಮಗಳು ಸಂಯಮದಿಂದ ವರ್ತಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಅವುಗಳು ಹಾಗೆ ಮಾಡಲಿಲ್ಲ. ಆದ್ದರಿಂದ ನಾವು ಕೆಲವು ಕಾರ್ಯವಿಧಾನಗಳನ್ನು ಜಾರಿಗೊಳಿಸಲು ಕ್ರಮವಹಿಸುತ್ತಿದ್ದೇವೆ” ಎಂದು ಅನಿಲ್ ಸಿಂಗ್ ಪೀಠಕ್ಕೆ ವಿವರಿಸಿದರು.

Also Read
ಒಂದು ತಿಂಗಳ ಚರ್ಚೆಯಲ್ಲಿ ಸುಶಾಂತ್ ಪ್ರಕರಣಕ್ಕಾಗಿ ಅರ್ನಾಬ್ ರಿಂದ ಶೇ.65, ನಾವಿಕಾರಿಂದ ಶೇ.69 ಸಮಯ ಮೀಸಲು!

”ತನಿಖಾ ಪತ್ರಿಕೋದ್ಯಮ ಮತ್ತು ಕುಟುಕು ಕಾರ್ಯಚಾರಣೆಯ ಮೂಲಕ ಹಲವು ಹಗರಣಗಳು ಮಾಧ್ಯಮಗಳು ಭಾರತದಲ್ಲಿ ಬಯಲಿಗೆಳೆದಿವೆ. ವಿದೇಶಿ ವ್ಯಾಪ್ತಿಯಲ್ಲೂ ಅಕ್ರಮ ಬಯಲು ಮಾಡಿವೆ. ಲಕ್ಷ್ಮಣ ರೇಖೆಯ ಬಗ್ಗೆ ಚರ್ಚೆ ನಡೆಯಬೇಕಿದ್ದು, ಅದನ್ನು ನ್ಯಾಯಾಲಯ ನಿರ್ಧರಿಸಬೇಕಿದೆ. ಅಸಾಧಾರಣ ಸ್ವಾತಂತ್ರ್ಯ, ಮಹಾನ್ ಜವಾಬ್ದಾರಿಯೊಂದಿಗೆ ಲಭಿಸುತ್ತದೆ” ಎಂದು ಸುದ್ದಿ ಪ್ರಸಾರ ಸಂಸ್ಥೆ ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಅರವಿಂದ್ ದಾತಾರ್ ಅವರು ಪರೋಕ್ಷವಾಗಿ ಮಾಧ್ಯಮಗಳಿಗೆ ತಮ್ಮ ಜವಾಬ್ದಾರಿ ನೆನಪಿಸಿದರು.
”ಮಾಧ್ಯಮಗಳಿಗೆ ಮಾಹಿತಿ ನೀಡಲು ಪೊಲೀಸರು ನಿರ್ದಿಷ್ಟ ಮಾರ್ಗಸೂಚಿ ರೂಪಿಸಬೇಕು. ಒಂದು ಚಾನೆಲ್ ಗೆ ಹೇಗೆ ವಾಟ್ಸ್ ಅಪ್ ಸಂದೇಶಗಳು ಮತ್ತು ಇಮೇಲ್ ವಿಚಾರ ತಿಳಿಯುತ್ತದೆ? ಇದು ಹೇಗೆ ಒಂದು ಚಾನೆಲ್ ಗೆ ಮಾತ್ರ ಗೊತ್ತಾಗುತ್ತದೆ. ಉಳಿದ ಚಾನೆಲ್ ಗಳಿಗೇಕೆ ಸಿಗುವುದಿಲ್ಲ?" ಎಂದು ಅವರು ಪ್ರಶ್ನಿಸಿದರು.

“ಮಾಧ್ಯಮದ ಮೇಲೆ ನಿಯಂತ್ರಣವಿಲ್ಲ ಎಂಬುದನ್ನು ಒಪ್ಪಲಾಗದು. ಕೆಲವೇ ಕೆಲವು ಮಾಧ್ಯಮಗಳಿಗಾಗಿ ಇಡೀ ಮಾಧ್ಯಮವನ್ನು ಕಠಿಣ ನಿರ್ಬಂಧಕ್ಕೆ ಒಳಪಡಿಸಲಾಗದು. ಹಲವು ಸುರಕ್ಷಾ ಮತ್ತು ಮಾರ್ಗಸೂಚಿಗಳು ಅಸ್ತಿತ್ವದಲ್ಲಿವೆ. ಆದರೆ, ಅವುಗಳನ್ನು ನಾವು ಜಾರಿಗೊಳಿಸಲು ವಿಫಲವಾಗಿದ್ದೇವೆ."
ಅರವಿಂದ್ ದಾತಾರ್, ಹಿರಿಯ ವಕೀಲ

“ಸ್ವನಿಯಂತ್ರಣ ನಿಯಮವಾಗಿದ್ದು, ಹಲವು ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಿಯಂತ್ರಣ ವಿಧಿಸಲಾಗಿಲ್ಲ. ನಮ್ಮಲ್ಲೂ ಸಂವಿಧಾನದ 19(1)(a) ವಿಧಿಯ ಅನ್ವಯ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಲಭ್ಯವಿದ್ದು, ಅದು ನಿರ್ಬಂಧಕ್ಕೆ ಒಳಪಟ್ಟಿದೆ” ಎಂದು ದಾತಾರ್ ಗಮನಸೆಳೆದರು.

Related Stories

No stories found.
Kannada Bar & Bench
kannada.barandbench.com