
ರಾಜ್ಯದ ಮಲ್ಟಿಪ್ಲೆಕ್ಸ್ ಚಿತ್ರ ಮಂದಿರಗಳ ನಿರ್ವಾಹಕರು ಮನಸೋಇಚ್ಛೆಯಿಂದ ಸಿನಿಮಾ ಟಿಕೆಟ್ ಬೆಲೆ ಏರಿಕೆ ಮಾಡುವುದನ್ನು ನಿಯಂತ್ರಿಸುವುದಕ್ಕಾಗಿ ನ್ಯಾಯಾಲಯ ಮಧ್ಯಪ್ರವೇಶಿಸಬೇಕು ಎಂದು ಕೋರಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೇರಳ ಹೈಕೋರ್ಟ್ ಮಂಗಳವಾರ ವಿಚಾರಣೆಗೆ ಕೈಗೆತ್ತಿಕೊಂಡಿದೆ [ಮನು ನಾಯರ್ ಜಿ ಮತ್ತು ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ] .
ಅರ್ಜಿಯ ಕುರಿತು ಸರ್ಕಾರದಿಂದ ಸೂಚನೆ ಪಡೆಯುವಂತೆ ಸರ್ಕಾರಿ ವಕೀಲರಿಗೆ ಮುಖ್ಯ ನ್ಯಾಯಮೂರ್ತಿ ನಿತಿನ್ ಜಾಮ್‌ದಾರ್ ಮತ್ತು ನ್ಯಾಯಮೂರ್ತಿ ಬಸಂತ್ ಬಾಲಾಜಿ ಅವರಿದ್ದ ಪೀಠ ನಿರ್ದೇಶಿಸಿದ್ದು ಪ್ರಕರಣದ ಮುಂದಿನ ವಿಚಾರಣೆ ಜುಲೈ 1ರಂದು ನಡೆಯಲಿದೆ.
ಪಿವಿಆರ್, ಐನಾಕ್ಸ್, ಸಿನೆಪೊಲಿಸ್ ಮತ್ತಿತರ ಮಲ್ಟಿಪ್ಲೆಕ್ಸ್ ಕಂಪೆನಿಗಳು ಮನಸೋಇಚ್ಛೆಯಾಗಿ ಟಿಕೆಟ್ ದರ ನಿಗದಿಪಡಿಸುವುದನ್ನು ವಕೀಲ ಮನು ನಾಯರ್ ಜಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಪ್ರಶ್ನಿಸಿದೆ.
ಅರ್ಜಿಯ ಪ್ರಮುಖಾಂಶಗಳು
ಮಲ್ಟಿಪ್ಲೆಕ್ಸ್ ನಿರ್ವಾಹಕರು ಕ್ರಿಯಾತ್ಮಕ ಬೆಲೆ ಮಾದರಿಗಳ ಮೂಲಕ (ಡೈನಮಿಕ್ ಪ್ರೈಸಿಂಗ್) ಗ್ರಾಹಕರನ್ನು ಶೋಷಿಸುತ್ತಿದ್ದಾರೆ.
ಸಮಯ, ಬೇಡಿಕೆ ಹಾಗೂ ಚಿತ್ರ ಬಿಡುಗಡೆ ಸ್ಥಿತಿಗತಿ ಅಂಶ ಆಧರಿಸಿ ದರ ಹೆಚ್ಚಳ ಮಾಡಲಾಗುತ್ತಿದೆ. ಇದನ್ನು ನಿಯಂತ್ರಿಸುವ ಕಾಯಿದೆ ಅಥವಾ ಸೆಕ್ಷನ್‌ಗಳು ಅಸ್ತಿತ್ವದಲ್ಲಿಲ್ಲ.
ಮಲ್ಟಿಪ್ಲೆಕ್ಸ್‌ಗಳ ಮೇಲೆ ನಿಯಂತ್ರಣ ಇಲ್ಲದಿರುವುದರಿಂದ ಅವುಗಳ ಬೆಲೆ ಏರಿಕೆ ಅಪಾರದರ್ಶಕ, ತರತಮ ಆಧರಿತ. ಜೊತೆಗೆ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ.
ಕರ್ನಾಟಕ , ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮುಂತಾದ ಹಲವಾರು ರಾಜ್ಯಗಳಲ್ಲಿ ಈಗಾಗಲೇ ಚಲನಚಿತ್ರ ಟಿಕೆಟ್ ದರ ನಿಯಂತ್ರಿಸುವ ಆದೇಶ ಜಾರಿಗೆ ಬಂದಿದೆ.
ಉಳಿದ ರಾಜ್ಯಗಳಲ್ಲಿ ಮನಸೋಇಚ್ಛೆಯ ದರ ವಿಧಿಸದೆ ಇರುವುದರಿಂದ ಈ ವಿಷಯದಲ್ಲಿ ಕೇರಳ ಸರ್ಕಾರದ ನಿಷ್ಕ್ರಿಯತೆ ಸಂವಿಧಾನದ 14ನೇ ವಿಧಿಯ (ಸಮಾನತೆಯ ಹಕ್ಕು) ಉಲ್ಲಂಘನೆಯಾಗಿದೆ.
ಹೀಗಾಗಿ ಬೆಲೆ ನಿಯಂತ್ರಣ ನೀತಿ ರೂಪಿಸಲು ಮತ್ತು ಬೆಲೆಗಳ ಏರಿಳಿತ ತಡೆಯಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು.
ಸರ್ಕಾರ ಬೆಲೆ ನಿಯಂತ್ರಣ ನೀತಿ ರೂಪಿಸುವವರೆಗೆ ಮಲ್ಟಿಪ್ಲೆಕ್ಸ್‌ಗಳು ಕ್ರಿಯಾತ್ಮಕ ದರ ವಿಧಿಸದಂತೆ ತಡೆಯುವ ತಾತ್ಕಾಲಿಕ ಮಧ್ಯಂತರ ಪರಿಹಾರವನ್ನು ನ್ಯಾಯಾಲಯ ನೀಡಬೇಕು.