ಇಂಟರ್‌ನೆಟ್‌ನಲ್ಲಿ ದೊರೆಯುವ ನ್ಯಾಯಾಲಯದ ಆದೇಶದಲ್ಲಿ ವ್ಯಕ್ತಿಯ ವೈಯಕ್ತಿಕ ವಿವರ ಅಳಿಸಿ ಹಾಕುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಸೋಮವಾರ ಕೇರಳ ಹೈಕೋರ್ಟ್ ವಿಚಾರಣೆಗೆ ಅಂಗೀಕರಿಸಿದೆ (ನಿಖಿಲ್ ಎಸ್ ರಾಜನ್ ವರ್ಸಸ್ ಭಾರತ ಸರ್ಕಾರ ಮತ್ತು ಇತರರು).
ಗೂಗಲ್ ಸರ್ಚ್‌ನಲ್ಲಿ ಸಿಗುವ ಅರ್ಜಿದಾರರ ವೈಯಕ್ತಿಕ ವಿವರ ಅಳಿಸಿಹಾಕುವ ಕುರಿತಾದ ಮನವಿ ವಿಚಾರಣೆ ನಡೆಸಲು ನ್ಯಾಯಮೂರ್ತಿ ಎನ್ ನಗರೇಶ್ ಅವರ ಏಕಸದಸ್ಯ ಪೀಠವು ಸಮ್ಮತಿಸಿತು. ಪ್ರಕರಣದಲ್ಲಿ ಖುಲಾಸೆ ಆಗಿದ್ದರೂ ಇಂಟರ್‌ನೆಟ್‌ನಲ್ಲಿ ಶೋಧ ನಡೆಸಿದರೆ ಜಾಮೀನು ಆದೇಶದಲ್ಲಿ ತಮ್ಮ ವೈಯಕ್ತಿಕ ವಿವರ ಒಳಗೊಂಡ ಮಾಹಿತಿ ಮೊದಲಿಗೆ ಬರುತ್ತದೆ ಎಂದು ದಂತವೈದ್ಯ ಸಲಹಾಕಾರರಾದ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಅಪರಾಧದ ಆರೋಪ, ವೈಯಕ್ತಿಕ ವಿವರವನ್ನು ಜಾಮೀನು ಆದೇಶದಲ್ಲಿ ನಮೂದಿಸಲಾಗಿದೆ. ಜಾಮೀನು ಆದೇಶದಲ್ಲಿ ಉಲ್ಲೇಖಿತವಾಗಿರುವ ಅಪರಾಧದ ವಿವರವು ದೋಷಪೂರಿತವಾಗಿದೆ ಎಂದು ಅವರು ವಿವರಿಸಿದ್ದಾರೆ. ತನ್ನನ್ನು ಇದು ಮಾನಸಿಕವಾಗಿ ಕುಗ್ಗಿಸಿದ್ದು, ಶೋಧನೆಯ ಸಂದರ್ಭದಲ್ಲಿ ತನ್ನ ಹೆಸರು, ತನ್ನ ತಂದೆಯ ಹೆಸರು, ವಿಳಾಸ ಮತ್ತು ದೋಷಪೂರಿತವಾದ ಅಪರಾಧ ಸಂಖ್ಯೆ ಕಾಣಿಸುತ್ತಿದ್ದು, ಇದು ಖಾಸಗಿ ಹಕ್ಕಿನ ಉಲ್ಲಂಘನೆಯಾಗಿದೆ ಎಂದಿದ್ದಾರೆ.
ಡಿಜಿಟಲ್ ಖಾಸಗಿತನಕ್ಕೆ ಸಂಬಂಧಿಸಿದಂತೆ ಜಾಗತಿಕವಾಗಿ ರೂಢಿಯಲ್ಲಿರುವ ವಿಚಾರವನ್ನು ಉಲ್ಲೇಖಿಸುತ್ತಾ ಅರ್ಜಿಯಲ್ಲಿ, ಇಂಟರ್‌ನೆಟ್‌ನಲ್ಲಿರುವ ಮಾಹಿತಿಗಳಿಗೆ ಡಿಜಿಟಲ್ ಅನಂತತೆಯ ಗುಣವಿದೆ ಎಂದು ವಾದಿಸಲಾಗಿದೆ. ಇಂಟರ್‌ನೆಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಅನಂತತೆಯು ಅವಶ್ಯವಾಗಿ ವ್ಯಕ್ತಿಯೊಬ್ಬರ ಖಾಸಗಿ ಹಕ್ಕನ್ನು ಕಸಿಯುತ್ತದೆ ಎಂದು ಅಹವಾಲು ಸಲ್ಲಿಸಲಾಗಿದೆ.
ಅರ್ಜಿದಾರರ ವೈಯಕ್ತಿಕ ವಿವರ ಒಳಗೊಂಡ ಜಾಮೀನು ಆದೇಶ ಪ್ರಕಟಿಸಿದ್ದಕ್ಕೆ ಸಂಬಂಧಿಸಿದಂತೆ ವಿಶೇಷವಾಗಿ ಗೂಗಲ್ ಇಂಕ್ ಮತ್ತು ಇಂಡಿಯನ್ ಕಾನೂನ್ ವಿರುದ್ಧ ಅರ್ಜಿ ಸಲ್ಲಿಸಲಾಗಿದೆ. ಇಂಡಿಯನ್ ಕಾನೂನ್ ದತ್ತಾಂಶದಲ್ಲಿ ತನ್ನ ವೈಯಕ್ತಿಕ ವಿವರ ಪ್ರಕಟಿಸಿದ್ದಕ್ಕೆ ಸಂಬಂಧಿಸಿದಂತೆ ಅಹವಾಲು ಸಲ್ಲಿಸಿದರೂ ಅದಕ್ಕೆ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ಅರ್ಜಿದಾರರು ವಿವರಿಸಿದ್ದಾರೆ.
ನ್ಯಾಯಾಲಯದ ತೀರ್ಪುಗಳನ್ನು ಪ್ರಕಟಿಸುವ ಹಕ್ಕು ಕಾನೂನು ವರದಿಗಾರರಿಗೆ ಇದ್ದರೂ ಅವರ ಆ ಹಕ್ಕು ಗೂಗಲ್ ಸರ್ಚ್‌ನಲ್ಲಿ ಹಿಂದಿನ ಕ್ರಿಮಿನಲ್ ದಾಖಲೆಗಳ ಸಾರಾಂಶ ತೋರಿಸುವವರೆಗೆ ವಿಸ್ತರಿಸುವುದಿಲ್ಲ ಎಂದು ನಿರ್ದಿಷ್ಟ ಪ್ರಶ್ನೆಗೆ ಅರ್ಜಿಯಲ್ಲಿ ವಿವರ ನೀಡಿದ್ದಾರೆ. ವೆಬ್‌ಸೈಟ್‌ನಲ್ಲಿ ಅರ್ಜಿದಾರರ ವೈಯಕ್ತಿಕ ವಿವರ ಪ್ರಕಟಿಸುವುದಕ್ಕೆ ವಿರುದ್ಧವಾಗಿ ಕಾನೂನು ವರದಿಗಾರರು ತೀರ್ಪನ್ನು ಸರಳವಾಗಿ ಪ್ರಕಟಿಸಬಹುದು ಎಂದು ಅರ್ಜಿದಾರರು ಹೇಳಿದ್ದಾರೆ. ಈ ಸಂಬಂಧ ಗೂಗಲ್ ಹಾಗೂ ಕೇರಳ ಹೈಕೋರ್ಟ್‌ಗೆ ಮನವಿ ಸಲ್ಲಿಸಲಾಗಿದೆ.
ಕೆ ಎಸ್ ಪುಟ್ಟಸ್ವಾಮಿ ವರ್ಸಸ್ ಭಾರತ ಸರ್ಕಾರದ ನಡುವಿನ ಪ್ರಕರಣವನ್ನು ಉಲ್ಲೇಖಿಸಿರುವ ಅರ್ಜಿದಾರರು ಖಾಸಗಿತನದ ಹಕ್ಕು ತನಗಿದ್ದು, ಈ ಹಕ್ಕಿನಡಿ ತಮ್ಮನ್ನು ಮರೆತು ಬಿಡುವ ಹಕ್ಕೂ ಸೇರಿದೆ ಎಂದು ಹೇಳಿದ್ದಾರೆ.
ವಿಶೇಷವಾಗಿ ಅವರು ಈಗಾಗಲೇ ದೋಷಮುಕ್ತಗೊಂಡಿರುವಾಗ ಅಸಮಂಜಸವಾದ ಅಪರಾಧ ಸಂಖ್ಯೆ ಒಳಗೊಂಡ ಜಾಮೀನು ಆದೇಶ ಪ್ರಕಟಿಸುವುದರಿಂದ ಯಾವುದೇ ಪ್ರಾಯೋಗಿಕ ಉದ್ದೇಶ ಈಡೇರುವುದಿಲ್ಲ ಎಂದು ಹೇಳಲಾಗಿದೆ. ವಕೀಲರಾದ ಜಾನ್ಸನ್ ಗೋಮೆಜ್, ಸಂಜಯ್ ಜಾನ್ಸನ್, ಜಾನ್ ಗೋಮೆಜ್, ಶ್ರೀದೇವಿ ಎಸ್, ಆದಿಲ್ ಎಂ ಎಚ್ ಮತ್ತು ಅಲಿಂಟ್ ಜೋಸೆಫ್ ಅವರು ಕೇರಳ ಹೈಕೋರ್ಟ್‌ನಲ್ಲಿ ಅರ್ಜಿದಾರರ ಪರವಾಗಿ ವಾದಿಸಲಿದ್ದಾರೆ.