ಮುನ್ನಾರ್‌ನಲ್ಲಿರುವ ತನ್ನ ರೆಸಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣದಲ್ಲಿ ಮಲಯಾಳಂ ಚಿತ್ರ ನಟ ಬಾಬುರಾಜ್‌ಗೆ ಕೇರಳ ಹೈಕೋರ್ಟ್ ಸೋಮವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಕಳೆದ ಆಗಸ್ಟ್‌ನಲ್ಲಿ ಮಲಯಾಳಂ ಚಿತ್ರೋದ್ಯಮದಲ್ಲಿ ದೊಡ್ಡ ಪ್ರಮಾಣದ ಲೈಂಗಿಕ ಕಿರುಕುಳ ನಡೆದಿರುವ ಕುರಿತು ನ್ಯಾಯಮೂರ್ತಿ ಕೆ ಹೇಮಾ ಸಮಿತಿ ವರದಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿದ ಕೆಲ ದಿನಗಳಲ್ಲಿ ಮಹಿಳೆ ಅತ್ಯಾಚಾರದ ಆರೋಪ ಮಾಡಿದ್ದರು.
ದೂರು ದಾಖಲಿಸುವಲ್ಲಿ ಸುಮಾರು ಆರು ವರ್ಷದಷ್ಟು ವಿಳಂಬವಾಗಿರುವುದನ್ನು ಗಮನಿಸಿದ ನ್ಯಾಯಮೂರ್ತಿ ಸಿ ಎಸ್ ಡಯಾಸ್ ಅವರು ಬಾಬುರಾಜ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪುರಸ್ಕರಿಸಿದರು. ದೂರುದಾರೆ ಮೊದಲು ನಟನೊಂದಿಗೆ ಸಹಮತದ ಸಂಬಂಧ ಹೊಂದಿರುವಂತೆ ತೋರುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣದಲ್ಲಿ ನಟನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದು ತಿಳಿಸಿದ ನ್ಯಾಯಮೂರ್ತಿಗಳು ನ್ಯಾ. ಹೇಮಾ ಸಮಿತಿ ವರದಿ ಬಿಡುಗಡೆಯಾದ ಬಳಿಕ ಇದೇ ರೀತಿಯ ಅತ್ಯಾಚಾರ ಆರೋಪ ಎದುರಿಸಿಸುತ್ತಿದ್ದ ನಟ ಸಿದ್ದಿಕ್‌ಗೆ ಸುಪ್ರೀಂ ಕೋರ್ಟ್ ಈಚೆಗೆ ಜಾಮೀನು ನೀಡಿರುವುದನ್ನು ಪ್ರಸ್ತಾಪಿಸಿದರು.
ಹತ್ತು ದಿನಗಳೊಳಗೆ ತನಿಖಾಧಿಕಾರಿ ಮುಂದೆ ವರದಿ ನಟ ಬಾಬುರಾಜ್ ವರದಿ ಮಾಡಿಕೊಂಡು ತನಿಖೆಗೆ ಸಹಕರಿಸುವಂತೆ ಪೀಠ ಇದೇ ವೇಳೆ ಸೂಚಿಸಿತು.