
ಶಬರಿಮಲೆ ಶ್ರೀ ಧರ್ಮ ಸಾಸ್ತ ದೇವಸ್ಥಾನ ಮತ್ತು ಶಬರಿಮಲೆಯ ಮಲಿಕಾಪ್ಪುರಂ ದೇವಸ್ಥಾನದಲ್ಲಿ ಮುಂಬರುವ ಮುಖ್ಯ ಅರ್ಚಕರ ಆಯ್ಕೆ ಮೇಲ್ವಿಚಾರಣೆ ಮಾಡಲು ಕೇರಳ ಹೈಕೋರ್ಟ್ ಇತ್ತೀಚೆಗೆ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಟಿ ಆರ್ ರಾಮಚಂದ್ರನ್ ನಾಯರ್ ಅವರನ್ನು ವೀಕ್ಷಕರನ್ನಾಗಿ ನೇಮಿಸಿದೆ [ಸುಮೋಟೊ ಪ್ರಕರಣ ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣ].
ಪ್ರಧಾನ ಅರ್ಚಕರ ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಷಕತೆ ಕಾಪಾಡಿಕೊಳ್ಳುವ ಸಂಬಂಧ ಹೂಡಲಾಗಿರುವ ಸ್ವಯಂಪ್ರೇರಿತ ಪ್ರಕರಣದಲ್ಲಿ ನ್ಯಾಯಮೂರ್ತಿ ರಾಜಾ ವಿಜಯರಾಘವನ್ ವಿ ಮತ್ತು ನ್ಯಾಯಮೂರ್ತಿ ಕೆ ವಿ ಜಯಕುಮಾರ್ ಅವರಿದ್ದ ಪೀಠ ಈ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿ ಟಿ ಆರ್ ರಾಮಚಂದ್ರನ್ ನಾಯರ್ ಅವರು ಲಾಟರಿ ಡ್ರಾ ಸಮಯದಲ್ಲಿ ಶಬರಿಮಲೆಯಲ್ಲಿ ಇರಬೇಕೆಂದು ವಿನಂತಿಸುತ್ತೇವೆ. ವೀಕ್ಷಕರಿಗೆ ಅಗತ್ಯವಾದ ಸಾರಿಗೆ ಮತ್ತು ವಸತಿ ವ್ಯವಸ್ಥೆ ಮಾಡುವಂತೆ ನಾವು ತಿರುವಾಂಕೂರು ದೇವಸ್ವಂ ಮಂಡಳಿಗೆ ನಿರ್ದೇಶಿಸುತ್ತಿದ್ದೇವೆ ಎಂದು ಸೆಪ್ಟೆಂಬರ್ 29ರಂದು ನೀಡಲಾದ ತೀರ್ಪಿನಲ್ಲಿ ತಿಳಿಸಲಾಗಿದೆ.
ಶಬರಿಮಲೆ ವಿಶೇಷ ಆಯುಕ್ತರು ಸಲ್ಲಿಸಿದ ವರದಿಯಲ್ಲಿ, ಪಾರದರ್ಶಕತೆ ಕಾಯ್ದುಕೊಳ್ಳುವ ಮತ್ತು ಈಗಾಗಲೇ ಮುಖ್ಯ ಅರ್ಚಕರನ್ನು ಆಯ್ಕೆ ಮಾಡುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಬಗ್ಗೆ ಸಲ್ಲಿಸಲಾದ ವರದಿಯ ಆಧಾರದ ಮೇಲೆ ಸ್ವಯಂಪ್ರೇರಿತ ಪ್ರಕರಣ ಹೂಡಲಾಗಿತ್ತು.
ಸಾಂವಿಧಾನಿಕ ಉಲ್ಲಂಘನೆ ನಡೆಯದ ಹೊರತು, ಧಾರ್ಮಿಕ ವಿಷಯಗಳಲ್ಲಿ ನ್ಯಾಯಾಲಯಗಳು ಸಂಯಮದಿಂದ ಹಸ್ತಕ್ಷೇಪ ಮಾಡಬೇಕು ಎಂದು ಪೀಠ ಒಪ್ಪಿಕೊಂಡಿತು.
ಆದರೆ, ಅರ್ಚಕರ ಆಯ್ಕೆ ಪ್ರಕ್ರಿಯೆಯ ಪಾವಿತ್ರ್ಯ ಕಾಪಾಡಿಕೊಳ್ಳಲು ಮತ್ತು ಭಕ್ತರ ನಂಬಿಕೆಯನ್ನು ಉಳಿಸಿಕೊಳ್ಳಲು ಕೆಲವು ಅಂಶಗಳಲ್ಲಿ ನ್ಯಾಯಾಂಗ ಮೇಲ್ವಿಚಾರಣೆ ಅಗತ್ಯ ಎಂದು ಅದು ಒತ್ತಿ ಹೇಳಿದೆ.
ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ವ್ಯಾಪ್ತಿಗೆ ಬರುವ ಶಬರಿಮಲೆ ಶ್ರೀ ಧರ್ಮ ಸಾಸ್ತ ಮತ್ತು ಮಲಿಕಾಪ್ಪುರಂ ದೇವಾಲಯಗಳಲ್ಲಿ ಮುಖ್ಯ ಅರ್ಚಕರ ನೇಮಕಾತಿಗಾಗಿ ಸಂದರ್ಶನ ಮತ್ತು ಗರ್ಭಗುಡಿಯ ಮುಂದೆ ಲಾಟರಿ ಎತ್ತುವ ಮೂಲಕ ಅಂತಿಮ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಮೊದಲಿಗೆ ಸಂದರ್ಶನ ನಡೆದು ಅದರಲ್ಲಿ ಆಯ್ಕೆಯಾದ ಅಂತಿಮ ಅಭ್ಯರ್ಥಿಗಳ ಹೆಸರುಗಳನ್ನು ಗರ್ಭ ಗುಡಿಯು ಮುಂಭಾಗದಲ್ಲಿ ನಡೆಯುವ ಲಾಟರಿ ಎತ್ತುವ ಪ್ರಕ್ರಿಯೆಗೆ ಒಳಪಡಿಸುವ ಮೂಲಕ ಆಯ್ಕೆ ಮಾಡಲಾಗುತ್ತದೆ.
ಈ ಪ್ರಕ್ರಿಯೆಯನ್ನು ಹಿಂದೆ ಪ್ರಶ್ನಿಸಲಾಗಿತ್ತು. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳು ಆಯ್ಕೆ ಸಮಿತಿಯ ರಚನೆ, ಅಂಕಗಳ ಹಂಚಿಕೆ ಮತ್ತು ಸಂದರ್ಶನ ಕಾರ್ಯವಿಧಾನಗಳ ಕುರಿತು ಮಾರ್ಗಸೂಚಿ ಹೊರಡಿಸುವ ಆದೇಶಗಳನ್ನು ಹೊರಡಿಸಿವೆ.
ಈ ವರ್ಷ 119 ಅರ್ಜಿಗಳು ಬಂದಿದ್ದು, ಅದರಲ್ಲಿ ಶಬರಿಮಲೆಯ ಮುಖ್ಯ ದೇವಾಲಯದಲ್ಲಿ ಅರ್ಚಕರಾಗಲು ಬಯಸಿದ 53 ಅಭ್ಯರ್ಥಿಗಳು ಮತ್ತು ಮಲಿಕಪ್ಪುರಂ ದೇವಾಲಯಕ್ಕೆ ಸೇರಲು ಅರ್ಜಿ ಸಲ್ಲಿಸಿದ 36 ಅಭ್ಯರ್ಥಿಗಳು ಸಂದರ್ಶನಕ್ಕೆ ಅರ್ಹತೆ ಪಡೆದಿದ್ದಾರೆ ಎಂದು ಹೈಕೋರ್ಟ್ ತಿಳಿಸಿದೆ.
ಆಯ್ಕೆ ಪ್ರಕ್ರಿಯೆಗೆ ಈಗಾಗಲೇ ನಿಗದಿಪಡಿಸಲಾದ ಮಾರ್ಗಸೂಚಿ ಪಾಲಿಸಲು, ಶಬರಿಮಲೆಯಲ್ಲಿ ಸಂದರ್ಶನ ಮತ್ತು ಲಾಟರಿ ಡ್ರಾ ಎರಡನ್ನೂ ಮೇಲ್ವಿಚಾರಣೆ ಮಾಡಲು ನ್ಯಾಯಾಲಯ ನಿವೃತ್ತ ನ್ಯಾಯಮೂರ್ತಿ ಟಿ ಆರ್ ರಾಮಚಂದ್ರನ್ ನಾಯರ್ ಅವರನ್ನು ವೀಕ್ಷಕರನ್ನಾಗಿ ನೇಮಿಸಿತು.