ಹಿಜಾಬ್‌ ಪ್ರಕರಣ: ಶಾಲೆ ತೊರೆಯಲು ನಿರ್ಧರಿಸಿದ ವಿದ್ಯಾರ್ಥಿನಿ, ಪ್ರಕರಣ ಮುಕ್ತಾಯಗೊಳಿಸಿದ ಕೇರಳ ಹೈಕೋರ್ಟ್‌

ಮುಸಿಂ ವಿದ್ಯಾರ್ಥಿನಿ ಹಾಗೂ ಆಕೆಯ ಪೋಷಕರು ಸೇಂಟ್‌ ರೀಟಾ ಶಾಲೆಯಲ್ಲಿ ಶಿಕ್ಷಣವನ್ನು ಮುಂದುವರಿಸದೆ ಇರಲು ನಿರ್ಧರಿಸಿದರು. ವಿದ್ಯಾರ್ಥಿನಿ ಮತ್ತೊಂದು ಶಾಲೆಗೆ ಸೇರ್ಪಡೆಗೊಳ್ಳಲು ಮುಂದಾದ ಹಿನ್ನೆಲೆಯಲ್ಲಿ ಪ್ರಕರಣವನ್ನು ಅಂತ್ಯಗೊಳಿಸಲಾಯಿತು.
Kerala HC with students wearing Hijab
Kerala HC with students wearing Hijab
Published on

ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳಿಗೆ ಹಿಜಾಬ್ ಧರಿಸಿ ತರಗತಿಗಳಿಗೆ ಹಾಜರಾಗಲು ಅವಕಾಶ ನೀಡುವ ಶಿಕ್ಷಣ ಇಲಾಖೆಯ ಅಧಿಕೃತ ನಿರ್ದೇಶನವನ್ನು ಪ್ರಶ್ನಿಸಿ ಸೇಂಟ್ ರಿಟಾ ಪಬ್ಲಿಕ್ ಶಾಲೆಯ ಅರ್ಜಿಯನ್ನು ಕೇರಳ ಹೈಕೋರ್ಟ್ ಶುಕ್ರವಾರ ಮುಕ್ತಾಯಗೊಳಿಸಿದೆ [ಮ್ಯಾನೇಜರ್, ಸೇಂಟ್ ರಿಟಾ ಪಬ್ಲಿಕ್ ಸ್ಕೂಲ್ vs ಕೇರಳ ಮತ್ತು ಇತರರು].

ಎಂಟನೇ ತರಗತಿಯ ವಿದ್ಯಾರ್ಥಿನಿಯು ತನ್ನ ವಕೀಲರ ಮೂಲಕ ನ್ಯಾಯಮೂರ್ತಿ ವಿ ಜಿ ಅರುಣ್ ಅವರಿಗೆ ತಾನು ಆ ಶಾಲೆಯಲ್ಲಿ ತನ್ನ ಅಧ್ಯಯನವನ್ನು ಮುಂದುವರಿಸಲು ಇಚ್ಛಿಸುವುದಿಲ್ಲ ಮತ್ತು ಈ ವಿಷಯವನ್ನು ಹೆಚ್ಚು ಬೆಳೆಸಲು ಬಯಸುವುದಿಲ್ಲ ಎಂದು ತಿಳಿಸಿದ ನಂತರ ನ್ಯಾಯಾಲಯ ಪ್ರಕರಣವನ್ನು ಮುಕ್ತಾಯಗೊಳಿಸಿತು.

ಅರ್ಜಿ ದಾಖಲಿಸಿದ್ದ ಸಿಬಿಎಸ್‌ಇ-ಸಂಯೋಜಿತ ಶಾಲೆಯು ಎರ್ನಾಕುಲಂನ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು (ಡಿಡಿಇ) ವಿದ್ಯಾರ್ಥಿಯ ಪರವಾಗಿ ನೀಡಿದ್ದ ಆದೇಶಕ್ಕೆ ತಡೆ ನೀಡಬೇಕೆಂದು ಕೋರಿತ್ತು.

ಆದರೆ, ಇಂದಿನ ವಿಚಾರಣೆ ವೇಳೆ ನ್ಯಾಯಾಲಯವು ಪ್ರಸಕ್ತ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ವಿಷಯವನ್ನು ಮತ್ತಷ್ಟು ಪರಿಶೀಲಿಸುವ ಅಗತ್ಯವಿಲ್ಲ ಎಂದು ಹೇಳಿತು.

"ಅಂತಿಮವಾಗಿ ವಿವೇಕವು ಜಯ ಸಾಧಿಸಿದೆ ಹಾಗೂ ಸಂವಿಧಾನದ ಅಡಿಪಾಯಗಳಲ್ಲಿ ಒಂದಾದ ಭ್ರಾತೃತ್ವವು ದೃಢವಾಗಿದೆ ಎಂದು ತಿಳಿಸಲು ಈ ನ್ಯಾಯಾಲಯವು ಹರ್ಷಿಸುತ್ತದೆ. ಆ ರೀತ್ಯಾ ಅರ್ಜಿಯನ್ನು ಮುಕ್ತಾಯಗೊಳಿಸಲಾಗಿದೆ" ಎಂದು ನ್ಯಾಯಮೂರ್ತಿಗಳು ತಿಳಿಸಿದರು.

Also Read
ಹಿಜಾಬ್ ವಿವಾದ: ಕ್ರೈಸ್ತಧರ್ಮೀಯರು ನಡೆಸುವ ಶಾಲೆಗೆ ಪೊಲೀಸ್ ರಕ್ಷಣೆ ನೀಡಿದ ಕೇರಳ ಹೈಕೋರ್ಟ್

ಅಲ್ಲದೆ, ವಿದ್ಯಾರ್ಥಿನಿಯು ಆ ಶಾಲೆಯಿಂದ ಹಿಂದೆ ಸರಿಯುವ ನಿರ್ಧಾರವನ್ನು ಆಡಳಿತ ಮಂಡಳಿಯು ಆಕೆಯನ್ನು ಹೊರಗೆ ತಳ್ಳಿದೆ ಎಂದು ಪರಿಗಣಿಸಬಾರದು ಎಂದೂ ಇದೇ ವೇಳೆ ನ್ಯಾಯಾಲಯವು ಹೇಳಿತು.

"ವಿದ್ಯಾರ್ಥಿನಿ ತನ್ನ ಸ್ವಂತ ಇಚ್ಛೆಯಿಂದ ಶಾಲೆಯನ್ನು ತೊರೆಯುತ್ತಿರುವುದರಿಂದ ಶಾಲಾ ಆಡಳಿತ ಮಂಡಳಿಯು ಆಕೆಯನ್ನು ಶಾಲೆಯಿಂದ ಹೊರಗೆ ತಳ್ಳಿದೆ ಎಂದು ಭಾವಿಸಲಾಗದು" ನ್ಯಾಯಮೂರ್ತಿಗಳು ಮೌಖಿಕವಾಗಿ ಹೇಳಿದರು.

Kannada Bar & Bench
kannada.barandbench.com