ತೀ ಚಾಮುಂಡಿ ತೆಯ್ಯಂನಲ್ಲಿ ಮಕ್ಕಳು ಪಾಲ್ಗೊಳ್ಳದಂತೆ ನೋಡಿಕೊಳ್ಳಿ: ಕಣ್ಣೂರು ಜಿಲ್ಲಾಧಿಕಾರಿಗೆ ಕೇರಳ ಹೈಕೋರ್ಟ್ ಸೂಚನೆ

ಉತ್ತರ ಕೇರಳದ ಮಲಬಾರ್ ಜಿಲ್ಲೆಗಳಲ್ಲಿ ಆಚರಣೆಯಲ್ಲಿರುವ "ತೀ ಚಾಮುಂಡಿ ತೆಯ್ಯಂ"ನಲ್ಲಿ ಮಕ್ಕಳನ್ನು ಒಳಗೊಳ್ಳುವ ರೂಢಿ ನಿಷೇಧಿಸುವಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕೋರಿದ್ದ ಹಿನ್ನೆಲೆಯಲ್ಲಿ ಆದೇಶ ರವಾನಿಸಲಾಗಿದೆ.
Kerala High Court
Kerala High Court

ಉತ್ತರ ಕೇರಳದಲ್ಲಿ ಆಚರಣೆಯಲ್ಲಿರುವ, ಕರ್ನಾಟಕದ ಕರಾವಳಿ ಭಾಗದ ಭೂತಾರಾಧನೆಯನ್ನೇ ಹೋಲುವ ಆದರೆ ಬೆಂಕಿ ಹಾಯುವ ಅಂಶವನ್ನು ಪ್ರಧಾನವಾಗಿರಿಸಿಕೊಂಡ ಸಾಂಪ್ರದಾಯಿಕ ನೃತ್ಯ ʼತೀ ಚಾಮುಂಡಿ ತೆಯ್ಯಂʼ ಪ್ರದರ್ಶನದಲ್ಲಿ ಮಕ್ಕಳು ಪ್ರದರ್ಶಕರಾಗಿ ಪಾಲ್ಗೊಳ್ಳದಂತೆ ನೋಡಿಕೊಳ್ಳಬೇಕು ಎಂದು ಕೇರಳ ಹೈಕೋರ್ಟ್‌ ಬುಧವಾರ ಕಣ್ಣೂರು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದೆ [ದಿಶಾ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಇಂತಹ ನೃತ್ಯ ಪ್ರಕಾರದಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯಲ್ಲಿ ಮಂಡಿತವಾದ ವಿಚಾರಗಳ ಬಗ್ಗೆ ಸರ್ಕಾರದಿಂದ ಸೂಚನೆಗಳನ್ನು ಪಡೆಯುವಂತೆಯೂ ಜಿಲ್ಲಾಧಿಕಾರಿಗೆ ಮುಖ್ಯ ನ್ಯಾಯಮೂರ್ತಿ ಎಸ್ ವಿ ಭಟ್ಟಿ ಮತ್ತು ನ್ಯಾಯಮೂರ್ತಿ ಬಸಂತ್ ಬಾಲಾಜಿ ಅವರಿದ್ದ ಪೀಠ ಸೂಚಿಸಿದೆ.

ತೆಯ್ಯಂ ಉತ್ತರ ಕೇರಳದ ಸಾಂಪ್ರದಾಯಿಕ ಧಾರ್ಮಿಕ ಆಚರಣೆಯಾಗಿದ್ದು ತೀ ಚಾಮುಂಡಿ ತೆಯ್ಯಂ ಅದರ ಭಾಗವಾಗಿದೆ. ನೃತ್ಯದಲ್ಲಿ ಭಾಗವಹಿಸಲು ಆಯ್ಕೆಯಾದ ಮಕ್ಕಳನ್ನು ಕನಿಷ್ಠ 101 ಬಾರಿ ಕೆಂಡ ಅಥವಾ ಬೆಂಕಿಯಲ್ಲಿ ಹಾಯಿಸಲಾಗುತ್ತದೆ ಎಂದು ಆಕ್ಷೇಪಿಸಿ ದಿಶಾ ಪ್ರತಿಷ್ಠಾನ ಎಂಬ ಸರ್ಕಾರೇತರ ಸಂಸ್ಥೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಇಂತಹ ಆಚರಣೆ ಮೂಲಕ ಮಕ್ಕಳ ಜೀವಿಸುವ ಮೂಲಭೂತ ಹಕ್ಕಿನೊಂದಿಗೆ ರಾಜಿ ಮಾಡಿಕೊಂಡು ಅವರ ಯೋಗಕ್ಷೇಮದ ಮೇಲೆ ಪರಿಣಾಮ ಬೀರಲಾಗಿದೆ ಎಂದು ದೂರಲಾಗಿತ್ತು.

Also Read
ಕೋಲ ಕಟ್ಟುವ ವ್ಯಕ್ತಿಗೆ ಜಾತಿ ನಿಂದನೆ: ಜ್ಯೋತಿಷಿಗೆ ಜಾಮೀನು ನಿರಾಕರಿಸಿದ ಪುತ್ತೂರು ನ್ಯಾಯಾಲಯ

ಚಿರಕ್ಕಲ್ ಕೋವಿಲಕಂ ಮತ್ತು ಚಿರಕ್ಕಲ್ ದೇವಸ್ಥಾನ ಟ್ರಸ್ಟ್ ತೀ ಚಾಮುಂಡಿ ತೆಯ್ಯಂನಲ್ಲಿ 14 ವರ್ಷದ ಮಗುವನ್ನು ಪ್ರದರ್ಶಕನನ್ನಾಗಿ ಬಳಸಿಕೊಂಡಿತ್ತು. ಸಾಂವಿಧಾನಿಕವಾಗಿ ಒದಗಿಸಲಾದ ಹಕ್ಕುಗಳು ಮತ್ತು ಅಂತಾರಾಷ್ಟ್ರೀಯ ಒಪ್ಪಂದಗಳನ್ನು ಇಂತಹ ಆಚರಣೆ ಉಲ್ಲಂಘಿಸುತ್ತದೆ. ಪ್ರದರ್ಶನದ ಸಮಯದಲ್ಲಿ ಅಪಘಾತ, ಅವಗಢಗಳು ಸಾಮಾನ್ಯ ವಿದ್ಯಮಾನಗಳಾಗಿವೆ. ಅದಕ್ಕಿಂತ ಹೆಚ್ಚಾಗಿ ತುರ್ತು ಸಮಯದಲ್ಲಿ ಕಲಾವಿದರ ಆರೋಗ್ಯ ಸುರಕ್ಷತೆಗೆ ದೇವಾಲಯದ ಅಧಿಕಾರಿಗಳು ಮುಂದಾಗುವುದಿಲ್ಲ. ಹೀಗಿದ್ದೂ ಮಕ್ಕಳನ್ನು ನೃತ್ಯ ಪ್ರದರ್ಶನದಲ್ಲಿ ಬಳಸಿಕೊಳ್ಳಲಾಗುತ್ತದೆ ಎಂದು ಪಿಐಎಲ್‌ ಕಳವಳ ವ್ಯಕ್ತಪಡಿಸಿತ್ತು.

ಅಂತಹ ಅಪಾಯಕಾರಿ ಆಚರಣೆಗಳಲ್ಲಿ ಮಗುವಿಗೆ ದೈಹಿಕ ಹಾನಿಯಲ್ಲದೆ ಮಾನಸಿಕ ಸಮಸ್ಯೆ ಉಂಟಾಗುವ ಸಾಧ್ಯತೆಗಳೂ ಇವೆ. ಆಚರಣೆ ವೇಳೆ ಮಕ್ಕಳ ಬಳಕೆ ನಿಷೇಧ ಕೋರಿ ಕೇಂದ್ರ, ರಾಜ್ಯ ಸರ್ಕಾರ ಹಾಗೂ ಸಂಬಂಧಿತ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆಚರಣೆಯಲ್ಲಿ ಪಾಲ್ಗೊಳ್ಳುವ ಮಕ್ಕಳು ಹಿಂದುಳಿದ ಸಮುದಾಯಕ್ಕೆ ಸೇರಿದವರಾಗಿದ್ದು, ಈ ಆಚರಣೆಯು ಊಳಿಗಮಾನ್ಯ ಕಾಲಘಟ್ಟದ ಪಳೆಯುಳಿಕೆಯಾಗಿದೆ ಎಂದು ಎನ್‌ಜಿಒ ಅಸಹಾಯಕತೆ ವ್ಯಕ್ತಪಡಿಸಿತ್ತು.

Related Stories

No stories found.
Kannada Bar & Bench
kannada.barandbench.com