ಮುಂದಿನ ಆದೇಶದವರೆಗೆ ಸೇಫ್ ಕೇರಳ ಯೋಜನೆಗೆ ಹಣ ಪಾವತಿ ಸ್ಥಗಿತಗೊಳಿಸುವಂತೆ ನಿರ್ದೇಶಿಸಿದ ಕೇರಳ ಹೈಕೋರ್ಟ್

ಕೇರಳ ವಿಧಾನಸಭೆ ಕಾಂಗ್ರೆಸ್‌ ಸದಸ್ಯ ಮತ್ತು ವಿರೋಧ ಪಕ್ಷದ ನಾಯಕ ವಿ ಡಿ ಸತೀಶನ್‌ ಹಾಗೂ ಪಕ್ಷದ ಮತ್ತೊಬ್ಬ ನಾಯಕ ಹಾಗೂ ಶಾಸಕ ರಮೇಶ್‌ ಚೆನ್ನಿತ್ತಲ ಸಲ್ಲಿಸಿದ್ದ ಪಿಐಎಲ್‌ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿದೆ.
Chief Justice SV Bhatti, Justice Basant Balaji and Kerala HC
Chief Justice SV Bhatti, Justice Basant Balaji and Kerala HC
Published on

ರಸ್ತೆ ಅಪಘಾತ ಕಡಿಮೆ ಮಾಡುವ ಉದ್ದೇಶದಿಂದ ರಾಜ್ಯದೆಲ್ಲೆಡೆ ಎ ಐ (ಕೃತಕ ಬುದ್ಧಿಮತ್ತೆ) ಕ್ಯಾಮೆರಾ ಅಳವಡಿಸುವ 'ಸೇಫ್‌ ಕೇರಳ' ಯೋಜನೆಗೆ ಹಣ ಪಾವತಿ ಸ್ಥಗಿತಗೊಳಿಸುವಂತೆ ಕೇರಳ ಹೈಕೋರ್ಟ್‌ ಮಂಗಳವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ನ್ಯಾಯಾಲಯ ಮುಂದಿನ ಆದೇಶಗಳನ್ನು ಹೊರಡಿಸುವವರೆಗೆ ಹಣ ಪಾವತಿಸದಂತೆ ರಾಜ್ಯ ಸರ್ಕಾರಕ್ಕೆ ಮುಖ್ಯ ನ್ಯಾಯಮೂರ್ತಿ ಎಸ್‌ ವಿ ಭಟ್ಟಿ ಮತ್ತು ನ್ಯಾಯಮೂರ್ತಿ ಬಸಂತ್ ಬಾಲಾಜಿ ಅವರಿದ್ದ ವಿಭಾಗೀಯ ಪೀಠ ನಿರ್ದೇಶನ ನೀಡಿದೆ.

ಗೋಪ್ಯತೆ ಉಲ್ಲಂಘನೆ ಮತ್ತು ಭ್ರಷ್ಟಾಚಾರ ನಡೆದಿರುವ ಹಿನ್ನೆಲೆಯಲ್ಲಿ ಯೋಜನೆಗೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಕೋರಿ ಕೇರಳ ವಿಧಾನಸಭೆ ಕಾಂಗ್ರೆಸ್‌ ಸದಸ್ಯ ಮತ್ತು ವಿರೋಧ ಪಕ್ಷದ ನಾಯಕ ವಿ ಡಿ ಸತೀಶನ್‌ ಹಾಗೂ ಪಕ್ಷದ ಮತ್ತೊಬ್ಬ ನಾಯಕ ಹಾಗೂ ಶಾಸಕ ರಮೇಶ್‌ ಚೆನ್ನಿತ್ತಲ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿದೆ. ಅಲ್ಲದೆ ರಾಜ್ಯ ಸರ್ಕಾರ ಸೇರಿದಂತೆ ಪ್ರತಿವಾದಿಗಳಿಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.

Also Read
ಸಿಸಿಟಿವಿಗಳಿಂದ ಗೋಪ್ಯತೆ ಉಲ್ಲಂಘನೆ: ಸೇಫ್ ಕೇರಳ ಯೋಜನೆಯ ತನಿಖೆಗೆ ಕೋರಿ ಕೇರಳ ಹೈಕೋರ್ಟ್‌ ಮೆಟ್ಟಿಲೇರಿದ ಕಾಂಗ್ರೆಸ್

ವಿಚಾರಣೆಯ ಸಂದರ್ಭದಲ್ಲಿ, ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಜಾರ್ಜ್ ಪೂನ್‌ತೊಟ್ಟಮ್, ಅರ್ಜಿದಾರರು ಒಟ್ಟಾರೆಯಾಗಿ ಯೋಜನೆ ವಿರೋಧಿಸುತ್ತಿಲ್ಲ. ಆದರೆ ರಾಜ್ಯ ಸರ್ಕಾರದ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ನಡೆದಿರುವ ಉದ್ದೇಶಪೂರ್ವಕ ಭ್ರಷ್ಟಾಚಾರವನ್ನು ಮಾತ್ರ ವಿರೋಧಿಸುತ್ತಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದರು.

ಆಗ ನ್ಯಾಯಾಲಯ "… ಜಾರ್ಜ್ ಪೂನ್‌ತೊಟ್ಟಮ್‌ ಅವರ ವಾದವನ್ನು ಪುರಸ್ಕರಿಸಿದ್ದೇವೆ. ನೋಟಿಸ್‌ಗೆ ಆದೇಶಿಸುವಾಗ ಪ್ರಸ್ತುತ ಪಿಐಎಲ್ ಅರ್ಜಿದಾರರು ಟ್ರಸ್ಟ್‌ ಮತ್ತು ಸಾರ್ವಜನಿಕ ಹುದ್ದೆ ಅಲಂಕರಿಸಿದ್ದು ಜನರು ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪಾರದರ್ಶಕತೆ, ಉತ್ತರದಾಯಿತ್ವ ಹಾಗೂ ಸಂಪೂರ್ಣ ತನಿಖೆ ಬಯಸುತ್ತಾರೆ ಎಂಬುದನ್ನು ನಾವು ದಾಖಲಿಸಲು ಬಯಸುತ್ತೇವೆ" ಎಂದಿತು.

ಕುತೂಹಲಕಾರಿಯಾಗಿ ನ್ಯಾಯಾಲಯ ʼತಮ್ಮ ಕರ್ತವ್ಯಗಳನ್ನು ನಿರ್ವಹಿಸುವಾಗಲೂ ಸಹ ಭ್ರಷ್ಟಾಚಾರವನ್ನು ಎಳ್ಳಷ್ಟೂ ಸಹಿಸುವುದಿಲ್ಲ' ಎಂಬುದನ್ನು ವಿವರಿಸುವ ಹೆಚ್ಚುವರಿ ಅಫಿಡವಿಟ್‌ ಒಂದನ್ನು ಸಲ್ಲಿಸುವಂತೆ ಅರ್ಜಿದಾರ ರಾಜಕಾರಣಿಗಳಿಗೂ ಸೂಚಿಸಿತು.

Kannada Bar & Bench
kannada.barandbench.com