
ಸಿಪಿಎಂ ನಾಯಕ ಎಂ ಎಂ ಲಾರೆನ್ಸ್ ಅವರ ಪಾರ್ಥಿವ ಶರೀರವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡುವುದಕ್ಕೆ ಅನುಮತಿ ನೀಡಿದ್ದ ಏಕಸದಸ್ಯ ಪೀಠದ ತೀರ್ಪನ್ನು ಕೇರಳ ಹೈಕೋರ್ಟ್ ಬುಧವಾರ ಎತ್ತಿಹಿಡಿದಿದೆ [ಆಶಾ ಲಾರೆನ್ಸ್ ಮತ್ತು ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ವೈದ್ಯಕೀಯ ಕಾಲೇಜಿಗೆ ತಂದೆಯ ದೇಹ ದಾನ ಮಾಡುವುದನ್ನು ವಿರೋಧಿಸಿ ಆಶಾ ಲಾರೆನ್ಸ್ ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ನಿತಿನ್ ಜಾಮ್ದಾರ್ ಮತ್ತು ನ್ಯಾಯಮೂರ್ತಿ ಎಸ್ ಮನು ಅವರಿದ್ದ ವಿಭಾಗೀಯ ಪೀಠ ಇಂದು ವಜಾಗೊಳಿಸಿದೆ.
ಕೌಟುಂಬಿಕ ಮತ್ತು ಕಾನೂನು ಪ್ರತಿಪಾದನೆಯ ತುಯ್ದಾಟಗಳ ನಡುವೆಯೇ ನ್ಯಾಯಮೂರ್ತಿ ವಿ ಜಿ ಅರುಣ್ ಅವರಿದ್ದ ಏಕಸದಸ್ಯ ಪೀಠ ಲಾರೆನ್ಸ್ ದೇಹದಾನ ಕಾನೂನುಬದ್ಧವಾಗಿದ್ದು ಕೇರಳ ಅಂಗರಚನಾ ಶಾಸ್ತ್ರ ಕಾಯಿದೆಗೆ ಅನುಗುಣವಾಗಿ ಇದೆ ಎಂದು ಈ ಹಿಂದೆ ಅಭಿಪ್ರಾಯಪಟ್ಟಿದ್ದತ್ತು.
ತೀರ್ಪನ್ನು ಪ್ರಶ್ನಿಸಿ ಆಶಾ ಲಾರೆನ್ಸ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಇಂದು ಅವರು ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ.
ಈ ಪ್ರಕರಣ ಎಂ ಎಂ ಲಾರೆನ್ಸ್ ಅವರ ಮರಣದ ನಂತರ ವೈದ್ಯಕೀಯ ಸಂಶೋಧನೆಗಾಗಿ ಅವರ ದೇಹ ದಾನ ಮಾಡಲು ಕಾನೂನು ಸಮ್ಮತಿ ನೀಡಿದೆಯೇ ಎಂಬ ವಿವಾದಕ್ಕೆ ಸಂಬಂಧಿಸಿದ್ದಾಗಿದೆ.
ತನ್ನ ತಂದೆಯ ದೇಹವನ್ನು ಶೈಕ್ಷಣಿಕ ಉದ್ದೇಶಗಳಿಗಾಗಿ ಎರ್ನಾಕುಲಂ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ದಾನ ಮಾಡುವ ತನ್ನ ಒಡಹುಟ್ಟಿದವರ ಹಾಗೂ ಸಿಪಿಎಂ ಪಕ್ಷದ ನಿರ್ಧಾರವನ್ನು ಆಶಾ ಪ್ರಶ್ನಿಸಿದ್ದರು. ದೇಣಿಗೆ ನಿರ್ಧಾರ ರಾಜಕೀಯದಿಂದ ಪ್ರಭಾವಿತವಾಗಿದ್ದು ಹೀಗೆ ದೇಹದಾನಕ್ಕೆ ತಮ್ಮ ಅನುಮತಿ ಇಲ್ಲ ಎಂದು ಆಕೆ ವಾದಿಸಿದ್ದರು.
ಕಮ್ಯುನಿಸ್ಟ್ ಸಿದ್ಧಾಂತದ ಹೊರತಾಗಿಯೂ ತನ್ನ ತಂದೆಯವರಿಗೆ ಇದ್ದ ಧಾರ್ಮಿಕ ನಂಟನ್ನು ಉಲ್ಲೇಖಿಸಿ, ಕ್ರಿಶ್ಚಿಯನ್ ವಿಧಿಗಳಿಗೆ ಅನುಗುಣವಾಗಿ ಅವರ ದೇಹವನ್ನು ಹೂಳಲು ಆಕೆ ಅನುಮತಿ ಕೋರಿದ್ದರು.
ಸೆಪ್ಟೆಂಬರ್ 23 ರಂದು, ಆಕೆಯ ಆಕ್ಷೇಪಣೆ ಪರಿಗಣಿಸಲು ಎರ್ನಾಕುಲಂ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಿಗೆ ನಿರ್ದೇಶಿಸಿದ್ದ ಹೈಕೋರ್ಟ್ ಅವರು ಸಲ್ಲಿಸಿದ್ದ ಮೊದಲ ಮನವಿಯನ್ನು ವಿಲೇವಾರಿ ಮಾಡಿತ್ತು.
ಪ್ರಾಂಶುಪಾಲರು ತಾವು ರಚಿಸಿದ್ದ ಸಲಹಾ ಸಮಿತಿ ಸೂಚಿಸಿದಂತೆ ಆಶಾ ಅವರ ಮನವಿ ತಿರಸ್ಕರಿಸಿದ್ದರು. ಎಂ ಎಂ ಲಾರೆನ್ಸ್ ಹಾಗೂ ಇಬ್ಬರು ಸಾಕ್ಷಿಗಳು ಸಹಿ ಹಾಕಿದ್ದಾರೆ ಎನ್ನಲಾದ ದೇಹದಾನ ಒಪ್ಪಿಗೆ ಪತ್ರವನ್ನು ಆಧರಿಸಿ ಸಲಹಾ ಸಮಿತಿ ಈ ನಿರ್ಧಾರ ಕೈಗೊಂಡಿತ್ತು. ಇದು ಕೇರಳದ ಅಂಗರಚನಾಶಾಸ್ತ್ರ ಕಾಯಿದೆಯ ಸೆಕ್ಷನ್ 4(1)ರ ಅಡಿ ಮಾನ್ಯವಾಗಿದೆ ಎಂದು ಸಮಿತಿ ತೀರ್ಮಾನಿಸಿತ್ತು.
ಈ ತೀರ್ಪಿನಿಂದಾಗಿ ದೇಹದಾನವನ್ನು ಬೆಂಬಲಿಸಿದ್ದ ಅವರ ಮಗ ಎಂ ಎಂ ಎಲ್ ಸಜೀವನ್ ಅವರು ದೇಹವನ್ನು ಕಾನೂನುಬದ್ಧವಾಗಿ ತಮ್ಮ ಸುಪರ್ದಿಗೆ ಪಡೆದಿದ್ದರು.
ಪ್ರಾಂಶುಪಾಲರಿಗೆ ಇಂತಹ ಸಮತಿ ರಚಿಸುವ ಅಧಿಕಾರ ಕಾಯಿದೆ ಅಡಿ ಇದೆಯೇ ಎಂದು ಪ್ರಶ್ನಿಸಿ ಬಳಿಕ ಆಶಾ ಎರಡನೇ ಅರ್ಜಿ ಸಲ್ಲಿಸಿದ್ದರು. ತನ್ನನ್ನು ಹಾಗೂ ತನ್ನ ಒಡಹುಟ್ಟಿದವರ ವಾದಗಳನ್ನು ಪ್ರತ್ಯೇಕವಾಗಿ ಆಲಿಸಲಾಗಿದೆ. ತನ್ನ ವಾದವನ್ನು ಪ್ರಾಂಶುಪಾಲರು ಸರಿಯಾಗಿ ಆಲಿಸದೆ ಸ್ವಾಭಾವಿಕ ನ್ಯಾಯಾದ ತತ್ವವನ್ನು ಉಲ್ಲಂಘಿಸಿದ್ದಾರೆ. ತನ್ನ ಒಡಹುಟ್ಟಿದವರು (ಸುಜಾತಾ ಬೋಬನ್) ದೇಹ ಹಸ್ತಾಂತರಿಸುವ ಒಪ್ಪಿಗೆ ಪತ್ರವನ್ನು ಹಿಂಪಡೆದಿದ್ದರೂ ಸಮಿತಿ ಅದನ್ನು ಪರಿಗಣಿಸಿಲ್ಲ. ಹೀಗಾಗಿ ಪ್ರಾಂಶುಪಾಲರ ತೀರ್ಪು ರದ್ದುಪಡಿಸಿ ತನ್ನ ತಂದೆಯ ಪಾರ್ಥಿವ ಶರೀರವನ್ನು ಕ್ರೈಸ್ತ ವಿಧಿ ವಿಧಾನದ ಮೂಲಕ ಅಂತ್ಯಕ್ರಿಯೆ ನಡೆಸಲು ಹಸ್ತಾಂತರಿಸಬೇಕು ಎಂದು ಆಶಾ ನ್ಯಾಯಾಲಯವನ್ನು ಒತ್ತಾಯಿಸಿದ್ದರು.
ಆದರೆ, ಅಕ್ಟೋಬರ್ 23ರಂದು ಏಕಸದಸ್ಯ ಪೀಠ ಆಕೆಯ ಅರ್ಜಿಯನ್ನುವಜಾಗೊಳಿಸಿ ದೇಹದಾನ ನಿರ್ಧಾರವನ್ನು ಎತ್ತಿಹಿಡಿದಿತ್ತು. ಇದನ್ನು ಆಶಾ ವಿಭಾಗೀಯ ಪೀಠದೆದುರು ಪ್ರಶ್ನಿಸಿದ್ದರು. ಇದೀಗ ಈ ಪೀಠ ಆಕೆಯ ಮನವಿಯನ್ನು ವಜಾಗೊಳಿಸಿದೆ.