ಸಿಪಿಎಂ ನಾಯಕ ಲಾರೆನ್ಸ್ ಅವರ ಪಾರ್ಥಿವ ಶರೀರ ಸಂರಕ್ಷಿಸಲು ಕೇರಳ ಹೈಕೋರ್ಟ್ ಆದೇಶ

ಲಾರೆನ್ಸ್ ಅವರ ದೇಹವನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ವೈದ್ಯಕೀಯ ಕಾಲೇಜಿಗೆ ದಾನ ಮಾಡುವ ಕ್ರಮವನ್ನು ಲಾರೆನ್ಸ್ ಪುತ್ರಿ ಪ್ರಶ್ನಿಸಿದ್ದರು. ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 3ರಂದು ನಡೆಯಲಿದೆ.
MM Lawrence, Kerala high Court
MM Lawrence, Kerala high Court
Published on

ಸಿಪಿಎಂ ನಾಯಕ ಎಂ ಎಂ ಲಾರೆನ್ಸ್ ಅವರ ಪಾರ್ಥಿವ ಶರೀರವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡುವುದಕ್ಕೆ ಸಂಬಂಧಿಸಿದ ವಿವಾದ ನ್ಯಾಯಾಲಯದ ಮೆಟ್ಟಿಲೇರಿರುವ ಹಿನ್ನೆಲೆಯಲ್ಲಿ ಅವರ ಪಾರ್ಥಿವ ಶರೀರವನ್ನು ಸಂರಕ್ಷಿಸಿಡುವಂತೆ ಕೇರಳ ಹೈಕೋರ್ಟ್‌ ಸೋಮವಾರ ಮಧ್ಯಂತರ ಆದೇಶ ನೀಡಿದೆ [ ಆಶಾ ಲಾರೆನ್ಸ್  ಮತ್ತು ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಎಂ ಎಂ ಲಾರೆನ್ಸ್‌ ಪುತ್ರಿ ಆಶಾ ಲಾರೆನ್ಸ್‌ ಸಲ್ಲಿಸಿರುವ ಅರ್ಜಿಯನ್ನು ಅಕ್ಟೋಬರ್ 3 (ಗುರುವಾರ) ವಿಚಾರಣೆ ನಡೆಸಲಿದ್ದು ಅಲ್ಲಿಯವರೆಗೆ ಲಾರೆನ್ಸ್‌ ಅವರ ಪಾರ್ಥಿವ ಶರೀರವನ್ನು ಸಂರಕ್ಷಿಸಿಡುವಂತೆ ಕಲಮಚ್ಛೇರಿಯ ಸರ್ಕಾರಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಿಗೆ ನ್ಯಾಯಮೂರ್ತಿ ವಿ ಜಿ ಅರುಣ್ ಸೂಚಿಸಿದ್ದಾರೆ.

Also Read
ತಂದೆಗೆ ಅಂಗಾಂಗ ದಾನ: ಅಪ್ರಾಪ್ತ ವಯಸ್ಸಿನ ಪುತ್ರಿಗೆ ಹಾದಿ ಸರಾಗ ಮಾಡಿಕೊಟ್ಟ ಕೇರಳ ಹೈಕೋರ್ಟ್

ಕ್ರೈಸ್ತ ಧಾರ್ಮಿಕ ವಿಧಿ ವಿಧಾನಗಳಂತೆ ಅಂತ್ಯಸಂಸ್ಕಾರ ನಡೆಸುವುದಕ್ಕಾಗಿ ತಮ್ಮ ತಂದೆಯ ದೇಹ ಹಸ್ತಾಂತರಿಸುವಂತೆ ಮಾಡಿದ್ದ ಮನವಿಯನ್ನು ಪ್ರಾಂಶುಪಾಲರು ತಿರಸ್ಕರಿಸಿದ್ದರು. ಈ ಹಿನ್ನೆಲೆಯಲ್ಲಿ ಆಶಾ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿ ಸಮಸ್ಯೆ ಇತ್ಯರ್ಥಕ್ಕೆ ನಿರ್ಣಾಯಕ ತೀರ್ಪು ನೀಡುವುದಾಗಿ ನ್ಯಾಯಾಲಯ ನಿನ್ನೆ ತಿಳಿಸಿದೆ.  "ಇದನ್ನು ಹೀಗೆಯೇ ಬಿಡಲಾಗದು. ಕೆಲವು ಪರಿಣಾಮ ಬೀರುವಂತಹ ಅಂಶಗಳಿವೆ ಎಂದು ಭಾವಿಸುತ್ತೇನೆ" ಎಂದು ನ್ಯಾಯಮೂರ್ತಿ ಅರುಣ್ ತಿಳಿಸಿದರು.

ಪ್ರಕರಣ ಹೈಕೋರ್ಟ್ ಮೆಟ್ಟಿಲೇರುತ್ತಿರುವುದು ಇದು ಎರಡನೇ ಬಾರಿ. ತನ್ನ ತಂದೆಯ ದೇಹವನ್ನು ಶೈಕ್ಷಣಿಕ ಉದ್ದೇಶಗಳಿಗಾಗಿ ಎರ್ನಾಕುಲಂ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ದಾನ ಮಾಡುವ ತನ್ನ ಒಡಹುಟ್ಟಿದವರ ಹಾಗೂ ಸಿಪಿಎಂ ಪಕ್ಷದ ನಿರ್ಧಾರವನ್ನು ಆಶಾ ಪ್ರಶ್ನಿಸಿದ್ದರು.

ಮೊದಲ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್‌ ಅಂತಿಮ ನಿರ್ಧಾರ  ತೆಗೆದುಕೊಳ್ಳುವ ಮೊದಲು ಆಶಾ ಅವರ  ಆಕ್ಷೇಪಣೆ ಪರಿಗಣಿಸಬೇಕು ಎಂದು ಸೂಚಿಸಿತ್ತು. ಪ್ರಾಂಶುಪಾಲರು ತಾವು ರಚಿಸಿದ್ದ ಸಲಹಾ ಸಮಿತಿ ಸೂಚಿಸಿದಂತೆ ಆಶಾ ಅವರ ಮನವಿ ತಿರಸ್ಕರಿಸಿದ್ದರು.

ಆಶಾ ಮತ್ತು ಅವರ ಒಡಹುಟ್ಟಿದವರ ವಾದ ಆಲಿಸಿದ  ನಂತರ ಶೈಕ್ಷಣಿಕ ಉದ್ದೇಶಗಳಿಗಾಗಿ ಕಾಲೇಜಿನ ಅಂಗರಚನಾಶಾಸ್ತ್ರ ವಿಭಾಗಕ್ಕೆ ಲಾರೆನ್ಸ್ ಅವರ ದೇಹವನ್ನು ನೀಡಲು ನಿರ್ಧರಿಸಲಾಗಿತ್ತು. ಎಂ ಎಂ ಲಾರೆನ್ಸ್‌ ಹಾಗೂ ಇಬ್ಬರು ಸಾಕ್ಷಿಗಳು ಸಹಿ ಹಾಕಿದ್ದಾರೆ ಎನ್ನಲಾದ ದೇಹದಾನ ಒಪ್ಪಿಗೆ ಪತ್ರವನ್ನು ಆಧರಿಸಿ ಸಲಹಾ ಸಮಿತಿ ಈ ನಿರ್ಧಾರ ಕೈಗೊಂಡಿತ್ತು. ಇದು ಕೇರಳದ ಅಂಗರಚನಾಶಾಸ್ತ್ರ ಕಾಯಿದೆಯ ಸೆಕ್ಷನ್ 4(1)ರ ಅಡಿ ಮಾನ್ಯವಾಗಿದೆ ಎಂದು ಸಮಿತಿ ತೀರ್ಮಾನಿಸಿತ್ತು.

Also Read
ದಾನವಾಗಿ ನೀಡಲು ಮಗಳು ಆಸ್ತಿಯಲ್ಲ: ಬಾಬಾಗೆ ಮಗಳನ್ನು ದಾನ ಮಾಡಿದ್ದ ತಂದೆಯನ್ನು ತರಾಟೆಗೆ ತೆಗೆದುಕೊಂಡ ಬಾಂಬೆ ಹೈಕೋರ್ಟ್

ಪ್ರಾಂಶುಪಾಲರಿಗೆ ಇಂತಹ ಸಮತಿ ರಚಿಸುವ ಅಧಿಕಾರ ಕಾಯಿದೆ ಅಡಿ ಇದೆಯೇ? ತನ್ನನ್ನು ಹಾಗೂ ತನ್ನ ಒಡಹುಟ್ಟಿದವರ ವಾದಗಳನ್ನು ಪ್ರತ್ಯೇಕವಾಗಿ ಆಲಿಸಲಾಗಿದೆ. ತನ್ನ ವಾದವನ್ನು ಪ್ರಾಂಶುಪಾಲರು ಸರಿಯಾಗಿ ಆಲಿಸದೆ ಸ್ವಾಭಾವಿಕ ನ್ಯಾಯಾದ ತತ್ವವನ್ನು ಉಲ್ಲಂಘಿಸಿದ್ದಾರೆ. ತನ್ನ ಒಡಹುಟ್ಟಿದವರು ದೇಹ ಹಸ್ತಾಂತರಿಸುವ ಒಪ್ಪಿಗೆ ಪತ್ರವನ್ನು ಹಿಂಪಡೆದಿದ್ದರೂ ಸಮಿತಿ ಅದನ್ನು ಪರಿಗಣಿಸಿಲ್ಲ. ಹೀಗಾಗಿ ಪ್ರಾಂಶುಪಾಲರ ತೀರ್ಪು ರದ್ದುಪಡಿಸಿ ತನ್ನ ತಂದೆಯ ಪಾರ್ಥಿವ ಶರೀರವನ್ನು ಕ್ರೈಸ್ತ ವಿಧಿ ವಿಧಾನದ ಮೂಲಕ ಅಂತ್ಯಕ್ರಿಯೆ ನಡೆಸಲು ಹಸ್ತಾಂತರಿಸಬೇಕು ಎಂದು ಆಶಾ ನ್ಯಾಯಾಲಯವನ್ನು ಒತ್ತಾಯಿಸಿದ್ದಾರೆ.

ಸಲಹಾ ಸಮಿತಿಯ ವಿಚಾರಣೆಯಲ್ಲಿ ದಾಖಲಾಗಿರುವ ಅಂಶಗಳು ಏಕಪಕ್ಷೀಯವಾಗಿರುವಂತೆ ತೋರುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಂಶುಪಾಲರು ನ್ಯಾಯಾಲಯದ ಮೊರೆ ಹೋಗಬಹುದಿತ್ತು. ಆದರೆ ಹಾಗೆ ಮಾಡಿಲ್ಲ ಎಂದು ನಿನ್ನೆಯ ವಿಚಾರಣೆ ವೇಳೆ ನ್ಯಾಯಾಲಯ ತಿಳಿಸಿತು.

Kannada Bar & Bench
kannada.barandbench.com