

'ಗ್ಲೋಬಲ್ ಅಯ್ಯಪ್ಪ ಸಂಗಮಂ' ಕಾರ್ಯಕ್ರಮದ ಹಣಕಾಸು ಖಾತೆಗಳಲ್ಲಿ ಉಂಟಾಗಿರುವ ವ್ಯತ್ಯಾಸ ಕುರಿತು ವಿವರಿಸುವಂತೆ ಕೇರಳ ಹೈಕೋರ್ಟ್ ಬುಧವಾರ ತಿರುವಾಂಕೂರು ದೇವಸ್ವಂ ಮಂಡಳಿಗೆ (ಟಿಡಿಬಿ) ಆದೇಶಿಸಿದೆ [ಸ್ವಯಂ ಪ್ರೇರಿತ ಪ್ರಕರಣ ಮತ್ತು ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ನ್ಯಾಯಮೂರ್ತಿಗಳಾದ ರಾಜಾ ವಿಜಯರಾಘವನ್ ವಿ ಮತ್ತು ಕೆ ವಿ ಜಯಕುಮಾರ್ ಅವರಿದ್ದ ವಿಭಾಗೀಯ ಪೀಠ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಆದೇಶ ಹೊರಡಿಸುವ ಮೊದಲು ಕೇರಳ ಸರ್ಕಾರದ ಲೆಕ್ಕಪರಿಶೋಧನಾ ಇಲಾಖೆಯಿಂದ ಸಲಹೆ ಕೇಳಿತು.
ವಿಶ್ವ ಅಯ್ಯಪ್ಪ ಸಂಗಮ ಅಥವಾ ಅಯ್ಯಪ್ಪ ಭಕ್ತರ ಜಾಗತಿಕ ಸಮಾವೇಶಕ್ಕೆ ಸಂಬಂಧಿಸಿದಂತೆ ಟಿಡಿಬಿಯ ಲೆಕ್ಕಪರಿಶೋಧನೆ ಮಾಡಿದ ಖಾತೆಗಳ ಬಗ್ಗೆ ಶಬರಿಮಲೆ ವಿಶೇಷ ಆಯುಕ್ತರು ಸಲ್ಲಿಸಿದ್ದ ವರದಿಯನ್ನು ನ್ಯಾಯಾಲಯ ಪರಿಶೀಲಿಸುತ್ತಿದೆ.
ಶಬರಿಮಲೆಯನ್ನು ಜಾಗತಿಕ ಯಾತ್ರಾ ಕೇಂದ್ರವಾಗಿ ಬಿಂಬಿಸುವ, ' ತತ್ವಮಸಿ'ಯ ಸಾರ್ವತ್ರಿಕ ಸಂದೇಶವನ್ನು ಹರಡಲು ಜೊತೆಗೆ ಧಾರ್ಮಿಕ ಸಾಮರಸ್ಯ ಮತ್ತು ಜಾಗತಿಕ ಏಕತೆಯನ್ನು ಉತ್ತೇಜಿಸಲು ಟಿಡಿಬಿಯ ಎಪ್ಪತ್ತೈದನೇ ವರ್ಷಾಚರಣೆ ಭಾಗವಾಗಿ ಕಾರ್ಯಕ್ರಮ ಘೋಷಿಸಲಾಗಿತ್ತು.
ಕಾರ್ಯಕ್ರಮ ನಡೆಸುವಲ್ಲಿ ರಾಜ್ಯ ಮತ್ತು ಟಿಡಿಬಿಯ ಪಾತ್ರ ಪ್ರಶ್ನಿಸಿ ಭಕ್ತರು ಮತ್ತು ಧಾರ್ಮಿಕ ಸಂಸ್ಥೆಗಳು ವಿವಿಧ ಅರ್ಜಿಗಳನ್ನು ಸಲ್ಲಿಸಿದ್ದವು ಮತ್ತು ಇದು ಅಯ್ಯಪ್ಪ ಸ್ವಾಮಿಯ ಹೆಸರನ್ನು ದುರುಪಯೋಗಪಡಿಸಿಕೊಳ್ಳುವ ರಾಜಕೀಯ ಕಾರ್ಯಕ್ರಮವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದವು.
ನ್ಯಾಯಾಲಯ ಕಾರ್ಯಕ್ರಮಕ್ಕೆ ತಡೆ ನೀಡಲು ನಿರಾಕರಿಸಿತ್ತು. ಆದರೆ ಪಂಬಾ ನದಿ ಮತ್ತು ದೇವಾಲಯ ಪರಿಸರದ ಪಾವಿತ್ರ್ಯ ಕಾಪಾಡಬೇಕು ಹಾಗೂ ಹಣಕಾಸು ವ್ಯವಹಾರಗಳಲ್ಲಿ ಪಾರದರ್ಶಕತೆ ಇರಬೇಕು ಎಂದು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿತ್ತು.
ಲೆಕ್ಕ ಪರಿಶೋಧನೆ ವರದಿಯಲ್ಲಿ ಟೆಂಡರ್ ಕರೆಯದೆ ಐಐಐಸಿಗೆ ಕಾಮಗಾರಿ ವಹಿಸಲಾಗಿದೆ. ಇದರ ಜೊತೆಗೆ ಅನೇಕ ಅವ್ಯವಹಾರಗಳು ನಡೆದಿವೆ ಎಂದು ತಿಳಿದು ಬಂದಿತ್ತು. ಹೀಗಾಗಿ ವ್ಯತ್ಯಾಸ ಉಂಟಾಗಿರುವ ಕುರಿತು ಟಿಡಿಬಿ ಸ್ಪಷ್ಟನೆ ನೀಡಬೇಕು ಎಂದು ಸೂಚಿಸಿದ ನ್ಯಾಯಾಲಯ ಹತ್ತು ದಿನದ ಬಳಿಕ ಮತ್ತೆ ಪ್ರಕರಣದ ವಿಚಾರಣೆ ನಡೆಸುವುದಾಗಿ ತಿಳಿಸಿತು.