ಪುಸ್ತಕ ಬಿಡುಗಡೆ ಹಿನ್ನೆಲೆ: ಕುಖ್ಯಾತ ಸರಣಿ ಹಂತಕನಿಗೆ ಕೇರಳ ಹೈಕೋರ್ಟ್‌ ಪೆರೋಲ್‌; ನ್ಯಾಯವಾದಿ ಮಗಳಿಂದಲೇ ವಾದ

ಅರ್ಜಿ ಸಲ್ಲಿಸಿದ್ದ ಕೊಲೆ ಆರೋಪಿ ಜಯನಂದನ್‌ ಅವರ ಪತ್ನಿ ಇಂದಿರಾ ಅಂದರೆ ತನ್ನ ತಾಯಿ ಪರವಾಗಿ ವಕೀಲೆ ಹಾಗೂ ಜಯನಂದನ್‌ ಅವರ ಮಗಳು ಕೀರ್ತಿ ವಾದ ಮಂಡಿಸಿದ್ದರು.
ಕೇರಳ ಹೈಕೋರ್ಟ್, ಜೈಲು
ಕೇರಳ ಹೈಕೋರ್ಟ್, ಜೈಲು

ಬಿಗಿ ಭದ್ರತೆಯ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕುಖ್ಯಾತ ಕೊಲೆ ಆರೋಪಿ ರಿಪ್ಪರ್ ಜಯನಂದನ್‌ಗೆ ಕೇರಳ ಹೈಕೋರ್ಟ್ ಇತ್ತೀಚೆಗೆ ಪೆರೋಲ್ ನೀಡಿದೆ [ಇಂದಿರಾ ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣ].

ತಾನು ರಚಿಸಿದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಆತನಿಗೆ ಎರಡು ದಿನಗಳ ಬೆಂಗಾವಲು ಪೆರೋಲ್ ನೀಡಿದ ನ್ಯಾಯಮೂರ್ತಿ ಪಿ.ವಿ.ಕುಂಞಿಕೃಷ್ಣನ್ ಪ್ರಕರಣ ಕೆಲ ಕಾರಣಗಳಿಗಾಗಿ ವಿಶಿಷ್ಟವಾಗಿದೆ ಎಂದರು.

ತನ್ನ ತಾಯಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಅಪರಾಧಿಯ ಮಗಳು, ವಕೀಲೆ ಕೀರ್ತಿ ಜಯನಂದನ್‌ ಅವರು ತನ್ನ ತಂದೆಯ ಬಿಡುಗಡೆಗಾಗಿ ವಾದ ಮಂಡಿಸಿದ್ದರು.

"ಈ ತೀರ್ಪು ಆರೋಪಿಯ ಮಗಳು ಮತ್ತು ಹೆಂಡತಿಯ ಯತ್ನದ ಫಲ. ಮಗಳು ತನ್ನ ತಂದೆಯನ್ನು ಪ್ರೀತಿಸುತ್ತಾಳೆ ಮತ್ತು ತನ್ನ ತಂದೆ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸುವುದನ್ನು ನೋಡಲು ಕಾತರಳಾಗಿದ್ದಾಳೆ. ಆದ್ದರಿಂದ ಕಾನೂನು ಪ್ರಕಾರ ಹೋರಾಟ ಮುಂದುವರೆಸಲು ಅವಕಾಶವಾಗುವಂತೆ ನ್ಯಾಯಾಲಯದ ನಿರ್ದೇಶನಗಳನ್ನು ಆತ ಪಾಲಿಸುವ ಮೂಲಕ ಸ್ಪಂದಿಸಬೇಕು. ತನ್ನ ತಂದೆ ಐದು ಕೊಲೆ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದರೂ , ಸಮಾರಂಭದಲ್ಲಿ ಭಾಗವಹಿಸಲು ಅನುವಾಗುವಂತೆ ತಂದೆಯ ಬಿಡುಗಡೆ ಆದೇಶ ಪಡೆಯಲು ಮಗಳು ನಡೆಸುತ್ತಿರುವ ಕಾನೂನು ಹೋರಾಟವನ್ನು ಸಹ ಪ್ರಶಂಸಿಸಬೇಕು. ಪ್ರತಿ ಮಗುವಿಗೆ ತಾಯಿಯಂತೆ, ತಂದೆ ಕೂಡ ಹೀರೋ ಆಗಿರುತ್ತಾನೆ" ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.

ಈ ನಿಟ್ಟಿನಲ್ಲಿ, ನ್ಯಾಯಮೂರ್ತಿ ಕುಂಞಿಕೃಷ್ಣನ್ ಅವರು ಪ್ರಸಿದ್ಧ ಕವಿ ಕೈತಾಪ್ರಂ ದಾಮೋದರನ್ ನಂಬೂದಿರಿ ಅವರು ಬರೆದ 'ಅಚನೇಯನೆಂಕಿಷ್ಠಂ' (ನಾನು ಪ್ರೀತಿಸುವ ನನ್ನ ತಂದೆ) ಕವಿತೆಯ ಸಾಲುಗಳನ್ನು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

ಒಂಬತ್ತನೇ ತರಗತಿಯವರೆಗೆ ಮಾತ್ರ ಓದಿರುವ ಜಯನಂದನ್ ಅವರು ಜೈಲಿನಲ್ಲಿದ್ದ 17 ವರ್ಷಗಳಲ್ಲಿ ಅನೇಕ ಪುಸ್ತಕಗಳನ್ನು ಬರೆದಿರುವುದನ್ನ ನ್ಯಾಯಾದೀಶರು ಗಮನಿಸಿದರು.

ವಿಶೇಷವಾಗಿ ಕೇವಲ ಒಂಬತ್ತನೇ ತರಗತಿಯವರೆಗೆ ಮಾತ್ರ ಅಧ್ಯಯನ ಮಾಡಿರುವ ಅಪರಾಧಿ ಪುಸ್ತಕ ಬರೆದಿರುವುದು ಮೆಚ್ಚುಗೆಯ ವಿಚಾರ ಎಂದು ನ್ಯಾಯಾಲಯ ತಿಳಿಸಿದೆ.

ಜಯನಂದನ್ ಸುಮಾರು 23 ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಅವುಗಳಲ್ಲಿ 5 ಕೊಲೆ ಪ್ರಕರಣಗಳಾಗಿವೆ. 3 ಕೊಲೆ ಪ್ರಕರಣಗಳಲ್ಲಿ ಆತನನ್ನು ಖುಲಾಸೆಗೊಳಿಸಲಾಗಿದ್ದು ಎರಡರಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ. ತನ್ನ 17 ವರ್ಷಗಳ ಸೆರೆವಾಸದ ಅವಧಿಯಲ್ಲಿ ಆತ ಈವರೆಗೆ ಎರಡು ಬಾರಿ ಜೈಲಿನಿಂದ ತಪ್ಪಿಸಿಕೊಂಡಿದ್ದ.

ಆದರೆ, ಈ 17 ವರ್ಷಗಳಲ್ಲಿ, ಆತ ಸಣ್ಣಕತೆ ಮತ್ತು ಕಾದಂಬರಿ ಬರೆದಿದ್ದಾನೆ ಎಂದು ಆತನ ಪರವಾಗಿ ವಕೀಲೆ ಪುತ್ರಿ ನ್ಯಾಯಾಲಯದ ಗಮನ ಸೆಳೆದರು.

ತಂದೆ ರಚಿಸಿದ 'ಪುಲಾರಿ ವಿರಿಯಮ್ ಮುನ್ಪೆ' ಕೃತಿ ಡಿಸೆಂಬರ್ 23ರಂದು ಎರ್ನಾಕುಲಂ ಪ್ರೆಸ್ ಕ್ಲಬ್ ನಲ್ಲಿ ಬಿಡುಗಡೆಯಾಗಲಿದೆ. ಅರ್ಜಿದಾರರ ಪ್ರಕಾರ, ಜಯನಂದನ್ ತನ್ನ ಪುಸ್ತಕದಿಂದ ಬರುವ ಆದಾಯವನ್ನು ವಿಶೇಷ ಅಗತ್ಯತೆ ಇರುವ ಮಕ್ಕಳ ಕಲ್ಯಾಣಕ್ಕಾಗಿ ದಾನ ಮಾಡಲು ಬಯಸಿದ್ದಾರೆ.

ಹಿರಿಯ ಮಗಳ ಮದುವೆಗೆ ಹಾಜರಾಗಲು ಜಯನಂದನ್‌ಗೆ ಈ ಹಿಂದೆ 2 ದಿನಗಳ ಬೆಂಗಾವಲು ಪೆರೋಲ್ ನೀಡಲಾಗಿತ್ತು ಎಂಬುದನ್ನು ನ್ಯಾಯಾಲಯಕ್ಕೆ ವಿವರಿಸಲಾಯಿತು.

ಪುಸ್ತಕ ಬಿಡುಗಡೆಗೆ ಪೆರೋಲ್‌ ನೀಡಲು ಕಾನೂನು ಪ್ರಕಾರ ಅವಕಾಶ ಇಲ್ಲ ಎಂದು ಜೈಲು ಅಧಿಕಾರಿಗಳು ನಿರಾಕರಿಸಿದ್ದರು. ಆದರೆ ಈ ಪ್ರಕರಣದ ಸಂದರ್ಭಗಳು ನ್ಯಾಯಾಲಯ ಮಧ್ಯಪ್ರವೇಶಿಸಲು ಅನುಮತಿಸುತ್ತವೆ ಎಂದು ಪೀಠ ತಿಳಿಸಿದೆ.

17 ವರ್ಷಗಳಿಂದ ಬಂಧನದಲ್ಲಿರುವ ಅಪರಾಧಿಯೊಬ್ಬರು ಪುಸ್ತಕ ಬರೆದು ತಮ್ಮ ಕೃತಿ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಲು ಬಯಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ನಿಯಮಗಳು ಈ ರೀತಿಯ ಬಿಡುಗಡೆಗೆ ಅವಕಾಶ ನೀಡದಿದ್ದರೂ ಸಾಂವಿಧಾನಿಕ ನ್ಯಾಯಾಲಯವಾಗಿ ತಾನು ಮಧ್ಯಪ್ರವೇಶಿಸಬೇಕಿದೆ ಎಂದು ನ್ಯಾಯಾಲಯ ನುಡಿದಿದೆ.

ಆದ್ದರಿಂದ, ಜಯನಂದನ್‌ಗೆ ನ್ಯಾಯಾಲಯ ಡಿಸೆಂಬರ್ 22ರಿಂದ 23ರವರೆಗೆ (ನಾಳೆ ಮತ್ತು ನಾಡಿದ್ದು) ಬೆಂಗಾವಲು ಪೆರೋಲ್ ನೀಡಿತು.

[ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ]

Attachment
PDF
Indira v. State of Kerala.pdf
Preview

Related Stories

No stories found.
Kannada Bar & Bench
kannada.barandbench.com