ಕೇರಳದ ಕೊಟ್ಟೂಳಿ ಜೌಗು ಪ್ರದೇಶಕ್ಕೆ ಧಕ್ಕೆ ತರುವ ಕಾಮಗಾರಿಗಳಿಗೆ ಹೈಕೋರ್ಟ್‌ ತಡೆ

ಈ ಜೌಗು ಪ್ರದೇಶಗಳಿಗೆ ರಾಮ್ಸರ್‌ ಮಾನ್ಯತೆ ನೀಡುವ ಪ್ರಕ್ರಿಯೆನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಪೀಠ ಸೂಚಿಸಿದೆ.
Mangrove Forest
Mangrove Forest
Published on

ಕೇರಳದ ಕೊಟ್ಟೂಳಿಯನ್ನು ರಾಮ್ಸರ್‌ ಜೌಗು ಪ್ರದೇಶ ಎಂದು ಘೋಷಿಸುವ ಪ್ರಕ್ರಿಯೆ ನಡೆಯುತ್ತಿರುವಾಗಲೇ ಈ ಪ್ರದೇಶದ ನಿಷೇಧಿತ ವಲಯದಲ್ಲಿ ಯಾವುದೇ ಹೊಸ ನಿರ್ಮಾಣ ಕಾಮಗಾರಿ ನಡೆಯದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಕೇರಳ ಹೈಕೋರ್ಟ್‌ ಈಚೆಗೆ ನಿರ್ದೇಶಿಸಿದೆ [ಸರೋವರಂ ಪ್ರಕೃತಿ ಸಂರಕ್ಷಣಾ ಸಮಿತಿ ಹಾಗೂ ಪರಿಸರ ಮತ್ತು ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಇನ್ನಿತರರ ನಡುವಣ ಪ್ರಕರಣ].

ಕೊಟ್ಟೂಳಿ ಜೌಗು ಪ್ರದೇಶವನ್ನು ರಾಮ್ಸರ್ ತಾಣವೆಂದು ಘೋಷಿಸುವ ಪ್ರಕ್ರಿಯೆ ಮುಂದುವರಿಯುತ್ತಿರುವಾಗ ಶಾಶ್ವತ ಕಟ್ಟಡಗಳು ಅಥವಾ ಇತರೆ ಅಭಿವೃದ್ಧಿ ಕಾರ್ಯಗಳಿಗೆ ಅನುಮತಿ ನೀಡಿದರೆ, ಅದು ಜೌಗು ಪ್ರದೇಶಗಳನ್ನು ರಕ್ಷಿಸಲು ಉದ್ದೇಶಿಸಿರುವ 2017ರ ಜೌಗು ಪ್ರದೇಶಗಳ (ಸಂರಕ್ಷಣೆ ಮತ್ತು ನಿರ್ವಹಣೆ) ನಿಯಮಾವಳಿ ಹಾಗೂ ರಾಮ್ಸರ್ ಒಪ್ಪಂದದ ಮೂಲ ಉದ್ದೇಶವೇ ಹಾಳಾಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಸೋಮನ್ ಸೇನ್ ಮತ್ತು ನ್ಯಾಯಮೂರ್ತಿ ಶ್ಯಾಮ್ ಕುಮಾರ್ ವಿ ಎಂ ಅವರಿದ್ದ ಪೀಠ ತಿಳಿಸಿತು.

Also Read
ಡಿಜಿಟಲ್‌ ಅರೆಸ್ಟ್‌: ಬ್ಯಾಂಕ್‌ಗಳ ಪಾತ್ರದ ಬಗ್ಗೆ ಸುಪ್ರೀಂ ಕೋರ್ಟ್‌ ಕಳವಳ

ಜಗತ್ತಿನ ಜೌಗು ಪ್ರದೇಶಗಳನ್ನು ʼಅಂತಾರಾಷ್ಟ್ರೀಯ ಪ್ರಾಮುಖ್ಯತೆಯ ತಾಣ" ಎಂದು ಗುರುತಿಸಿ, ಅವುಗಳನ್ನು ರಕ್ಷಿಸಲು ಇರಾನ್‌ನ ರಾಮ್ಸರ್‌ನಲ್ಲಿ ನಡೆದ ಶೃಂಗಸಭೆಯಲ್ಲಿ ಮಾಡಿಕೊಳ್ಳಲಾದ ಒಪ್ಪಂದವೇ ರಾಮ್ಸರ್‌ ಒಪ್ಪಂದ. ಯುನೆಸ್ಕೋ ಪಾರಂಪರಿಕ ತಾಣಗಳಂತೆ ಇದು ಕೂಡ ಪ್ರಾಕೃತಿಕ ಪಾರಂಪರಿಕ ತಾಣವಾಗಿದ್ದು ಭಾರತದಲ್ಲಿ 98 ರಾಮ್ಸರ್ ತಾಣಗಳಿವೆ.

ಉತ್ತರ ಕನ್ನಡದ ಅಘನಾಶಿನಿ, ಗದಗ ಜಿಲ್ಲೆಯ ಮಾಗಡಿ ಕೆರೆ, ವಿಜಯನಗರದ ಅಂಕಸಮುದ್ರ ಪಕ್ಷಿ ಧಾಮ ಕರ್ನಾಟಕದ ಪ್ರಮುಖ ರಾಮ್ಸರ್‌ ಜೌಗು ಪ್ರದೇಶಗಳಾಗಿವೆ.

Also Read
ಎಸ್‌ಐಆರ್‌ಗೆ ಅಡ್ಡಿ ಸಲ್ಲದು: ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್‌ ಎಚ್ಚರಿಕೆ

ಅಂತೆಯೇ ಕೇರಳದ ಕೋರಿಕ್ಕೋಡ್‌ ಬಳಿ ಇರುವ ಕೊಟ್ಟೂಳಿ ಜೌಗು ಪ್ರದೇಶಗಳಿಗೆ ರಾಮ್ಸರ್‌ ಮಾನ್ಯತೆ ನೀಡುವ ಪ್ರಕ್ರಿಯೆನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಪೀಠ ಸೂಚಿಸಿದೆ.

ಪ್ರಕರಣದ ಮುಂದಿನ ವಿಚಾರಣೆ ಮೇ 21ರಂದು ನಡೆಯಲಿದೆ. ಸರೋವರಂ ಪ್ರಕೃತಿ ಸಂರಕ್ಷಣ ಸಮಿತಿ ಎಂಬ ಎನ್‌ಜಿಒ ಸಲ್ಲಿಸಿದ ಅರ್ಜಿ ಸಲ್ಲಿಸಿತ್ತು. ಸರೋವರಂ ಜೈವಿಕ ಉದ್ಯಾನದ ಸಮೀಪದ ಜೌಗು ಪ್ರದೇಶದಲ್ಲಿ ನಡೆಯುತ್ತಿರುವ ಕಾಮಗಾರಿ ಮತ್ತು ಭೂಮಿಯ ಮರುಸ್ವಾಧೀನ ಕಾರ್ಯಗಳು ಪರಿಸರ ವ್ಯವಸ್ಥೆ ಹಾಗೂ ಜೀವವೈವಿಧ್ಯಕ್ಕೆ ಹಾನಿ ಉಂಟುಮಾಡುವ ಸಾಧ್ಯತೆ ಇದೆ ಎಂದು ಅದು ಆತಂಕ ವ್ಯಕ್ತಪಡಿಸಿತ್ತು.

ಜಿಲ್ಲಾಧಿಕಾರಿ ಹಾಗೂ ಸ್ಥಳೀಯ ಪಾಲಿಕೆಗೆ ಜೌಗು ಪ್ರದೇಶದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಾಕೀತು ಮಾಡಿದ ನ್ಯಾಯಾಲಯ ಈಗಾಗಲೇ ನಿರ್ಮಿಸಲಾದ ಕಟ್ಟಡಗಳ ಕಾನೂನುಬದ್ಧತೆಯನ್ನು ಅಂತಿಮ ತೀರ್ಪಿನ ವೇಳೆ ಪರಿಶೀಲಿಸಲಾಗುವುದು ಎಂದು ಸ್ಪಷ್ಟಪಡಿಸಿದೆ.

[ಆದೇಶದ ಪ್ರತಿ]

Attachment
PDF
Sarovaram_Prakrithi_Samrakshana_Samiti_v_Ministry_of_Environment_and_Forests_and_Climate_Change___or
Preview
Kannada Bar & Bench
kannada.barandbench.com