ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ಸಹೋದರನಿಗೆ ಪಿತ್ತ ಜನಕಾಂಗದ ಅಂಗಾಂಶ ದಾನ ಮಾಡಲು ವ್ಯಕ್ತಿಯೊಬ್ಬರಿಗೆ ಈಚೆಗೆ ಅನುಮತಿ ನೀಡಿರುವ ಮಧ್ಯಪ್ರದೇಶ ಹೈಕೋರ್ಟ್ ದಾನಿಯ ಪತ್ನಿ ಎತ್ತಿದ್ದ ಆಕ್ಷೇಪಣೆ ನಿರ್ಲಕ್ಷಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದೆ [ವಿಕಾಸ್ ಅಗರ್‌ವಾಲ್ ಮತ್ತು ಮಧ್ಯಪ್ರದೇಶ ಸರ್ಕಾರ ನಡುವಣ ಪ್ರಕರಣ].
ಅರ್ಜಿದಾರರೇ ತಮ್ಮ ಆಯ್ಕೆಯ ಪರಮ ವ್ಯಕ್ತಿಯಾಗಿರುವುದರಿಂದ ಅವರ ಪತ್ನಿ ಸೇರಿದಂತೆ ಯಾರೂ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ರಾಜ್ ಮೋಹನ್ ಸಿಂಗ್ ಅವರಿದ್ದ ಏಕಸದಸ್ಯ ಪೀಠ ಹೇಳಿದೆ.
ಅರ್ಜಿದಾರರ ಪತ್ನಿ ಸಲ್ಲಿಸಿದ ಆಕ್ಷೇಪಣೆ ತನ್ನ ವೈವಾಹಿಕ ಸಂಬಂಧವನ್ನು ಆರೋಗ್ಯಕರ ಹಾಗೂ ಸುರಕ್ಷಿತವಾಗಿಡುವ ಸಾಮಾಜಿಕ ಮಾನದಂಡವಾಗಿರಬಹುದು. ಆದರೆ ಪಿತ್ತಜನಕಾಂಗದ ಕಸಿಗೆ ಒಳಗಾದರೆ ತನ್ನ ಪತಿ ಸಾಯಬಹುದು ಎಂದು ಆಕೆ ಊಹಿಸಿಕೊಳ್ಳಬೇಕಿಲ್ಲ ಎಂಬುದಾಗಿ ನ್ಯಾಯಮೂರ್ತಿಗಳು ತಿಳಿಸಿದ್ದಾರೆ.
ವೈದ್ಯಕೀಯ ಪ್ರಗತಿಯಿಂದಾಗಿ ಅಂಗಾಂಗ ದಾನಗಳು ಈಗ ಯಶಸ್ವಿಯಾಗಿ ನಡೆಯುತ್ತಿದ್ದು ತನ್ನ ಸಹೋದರನ ಜೀವ ಉಳಿಸುವ ದಾನಿಯ ಸ್ವಂತ ಬಯಕೆಗಿಂತ ದಾನಿಯ ಹೆಂಡತಿಯ ಗ್ರಹಿಕೆ ಮಿಗಿಲು ಎಂದು ತೂಗಲು ಸಾಧ್ಯವಿಲ್ಲ ಎಂಬುದಾಗಿ ನ್ಯಾಯಾಲಯ ತರ್ಕಿಸಿದೆ.
ಪತ್ನಿ ಎತ್ತಿದ್ದ ಆಕ್ಷೇಪಣೆಯಿಂದಾಗಿ ಅರ್ಜಿದಾರ 33 ವರ್ಷದ ವಿಕಾಸ್ ಅಗರ್‌ವಾಲ್ ಅವರು ಯಕೃತ್ತಿನ ಅಂಗಾಂಶ ಕಸಿಗೆ ಒಳಗಾಗಲು ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಸಂಸ್ಥೆ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ವಿಕಾಸ್ ನ್ಯಾಯಾಲಯದ ಮೊರೆ ಹೋಗಿದ್ದರು.
ಜೀವಂತ ದಾನಿಯ ಪಿತ್ತಜನಕಾಂಗ ಕಸಿಗೆ ಅರ್ಜಿದಾರರ ಪತ್ನಿಯ ಒಪ್ಪಿಗೆ ಅಗತ್ಯವಿದೆಯೇ ಎಂಬ ಪ್ರಶ್ನೆ ಎದುರಾದಾಗ, ನಿಯಮಗಳು ದಾನಿಯ ಹತ್ತಿರದ ಸಂಬಂಧಿಕರ ಒಪ್ಪಿಗೆಯನ್ನು ಕಡ್ಡಾಯಗೊಳಿಸುತ್ತವೆ. ಆದರೆ ಕಾನೂನು ಸ್ಥಿತಿಯನ್ನು ಪರಿಶೀಲಿಸಿದ ನಂತರ, ಅರ್ಜಿದಾರರ ಕ್ರಮವನ್ನು ಕಾನೂನುಬಾಹಿರವೆಂದು ಪರಿಗಣಿಸಲಾಗದು ಎಂದು ನ್ಯಾಯಾಲಯ ಹೇಳಿದೆ.
ಈ ಸಂದರ್ಭದಲ್ಲಿ ನ್ಯಾಯಾಲಯ ಫ್ರೆಂಚ್ ತತ್ವಜ್ಞಾನಿ ಮತ್ತು ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ ಪಡೆದಿರುವ ಆಲ್ಬರ್ಟ್ ಕಮುವಿನ ಮಾತನ್ನು ಉಲ್ಲೇಖಿಸುತ್ತಾ "ಮುಕ್ತವಲ್ಲದ ಪ್ರಪಂಚವನ್ನು ಎದುರಿಸುವ ಏಕೈಕ ಮಾರ್ಗವೆಂದರೆ ನಿಮ್ಮ ಅಸ್ತಿತ್ವವೇ ದಂಗೆಯ ಕೃತ್ಯವೆನಿಸುವಷ್ಟು ಸಂಪೂರ್ಣವಾಗಿ ಮುಕ್ತರಾಗುವುದು." ಎಂದಿತು.
ಈ ಹಿನ್ನೆಲೆಯಲ್ಲಿ, ಕಮು ಬರೆದ ಸಾಲುಗಳನ್ನು ಪ್ರಕರಣದ ವಾಸ್ತವಾಂಶಗಳು ಮತ್ತು ಸಂದರ್ಭಗಳೊಂದಿಗೆ ಸಂಯೋಜಿಸಿದರೆ, ಅದು "ಅನಾರೋಗ್ಯ ಪೀಡಿತ ಸಹೋದರನಿಗೆ ತನ್ನ ಯಕೃತ್ತನ್ನು ದಾನ ಮಾಡುವ ಅರ್ಜಿದಾರರ ಕಾರ್ಯವು ಸರ್ಕಾರದ ಮಧ್ಯಪ್ರವೇಶ ಬಯಸುವಂತಹ ಕಾನೂನುಬಾಹಿರ ಕೃತ್ಯ ಎನಿಸುವುದಿಲ್ಲ" ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಹೀಗಾಗಿ, ಅರ್ಜಿದಾರರ ಪತ್ನಿ ಎತ್ತಿದ ಆಕ್ಷೇಪಣೆಯನ್ನು ಅವರ ಸಹೋದರನಿಗೆ ಯಕೃತ್ತಿನ ಭಾಗವನ್ನು ಕಸಿ ಮಾಡುವ ಉದ್ದೇಶಕ್ಕಾಗಿ ಗಣನೆಗೆ ತೆಗೆದುಕೊಳ್ಳಬಾರದು ಎಂದು ಮ್ಯಾಂಡಮಸ್ ಆದೇಶ ಹೊರಡಿಸುವುದು ಸೂಕ್ತವೆಂದು ನ್ಯಾಯಾಲಯ ತಿಳಿಸಿತು.
[ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ]