ಹದಿನೇಳು ವರ್ಷಗಳ ಹಿಂದೆ ಅಂದರೆ 2007ರಲ್ಲಿ ನಡೆದ ಲೈಂಗಿಕ ದೌರ್ಜನ್ಯ ಘಟನೆಗೆ ಸಂಬಂಧಿಸಿದಂತೆ ಕಳೆದ ತಿಂಗಳು ದಾಖಲಾಗಿದ್ದ ಪ್ರಕರಣದಲ್ಲಿ ನಟ ಮತ್ತು ನಿರ್ಮಾಪಕ ಬಾಲಚಂದ್ರ ಮೆನನ್ ಅವರಿಗೆ ಕೇರಳ ಹೈಕೋರ್ಟ್ ಬುಧವಾರ ಮಧ್ಯಂತರ ಜಾಮೀನು ನೀಡಿದೆ [ಬಾಲಚಂದ್ರ ಮೆನನ್ ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣ].
ಎಫ್‌ಐಆರ್ ದಾಖಲಿಸುವಲ್ಲಿ ವಿವರಿಸಲಾಗದ ವಿಳಂಬವಾಗಿದೆ ಎಂದ ನ್ಯಾಯಮೂರ್ತಿ ಸಿ ಎಸ್ ಡಯಾಸ್ ಮೇಲ್ನೋಟಕ್ಕೆ ಮಧ್ಯಂತರ ಪರಿಹಾರ ನೀಡಲು ಅಗತ್ಯವಾದ ಸಾಕ್ಷ್ಯಗಳಿವೆ ಎಂದು ಅಭಿಪ್ರಾಯಪಟ್ಟರು.
ಆದ್ದರಿಂದ, ಒಂದು ವೇಳೆ ಮೆನನ್ ಅವರನ್ನು ಬಂಧಿಸಿದ್ದರೆ ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ನ್ಯಾಯಾಲಯ ಪೊಲೀಸರಿಗೆ ಆದೇಶಿಸಿತು. ಈ ಆದೇಶ ಮೆನನ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿರುವ ನವೆಂಬರ್ 21ರವರೆಗೆ ಜಾರಿಯಲ್ಲಿರಲಿದೆ.
ಐಪಿಸಿ ಸೆಕ್ಷನ್ 354 (ಮಹಿಳೆಯ ಮೇಲಿನ ದೌರ್ಜನ್ಯ), 506 (ಕ್ರಿಮಿನಲ್ ಬೆದರಿಕೆ), ಮತ್ತು 509 (ಮಹಿಳೆಯರ ಘನತೆಗೆ ಧಕ್ಕೆ) ಅಡಿ ಬಾಲಚಂದ್ರ ಮೆನನ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. "ದೇ ಇಂಗೊಟ್ಟು ನೋಕ್ಕಿಯೇ" ಚಿತ್ರದ ಚಿತ್ರೀಕರಣದ ಸಮಯದಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ ದೂರುದಾರೆ ಆರೋಪಿಸಿದ್ದರು.
ಆದರೆ ದೂರುದಾರೆ ಮತ್ತು ಆಕೆಯ ವಕೀಲರು ತನಗೆ ಬೆದರಿಕೆ ಒಡಿದ್ದು ಬ್ಲಾಕ್‌ಮೇಲ್ ಮಾಡಿದ್ದರು. ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆಯಡಿ ದೂರು ದಾಖಲಿಸಲಾಗಿದೆ. ತಮ್ಮ ಪ್ರತಿಷ್ಠೆಗೆ ಮಸಿ ಬಳಿಯುವ ಮತ್ತು ಹಣ ಸುಲಿಗೆ ಮಾಡುವ ಉದ್ದೇಶ ಇದರ ಹಿಂದಿದೆ ಎಂದು ಮೆನನ್ ತಿಳಿಸಿದ್ದರು.
ಮಾಲಿವುಡ್‌ನಲ್ಲಿ ಮಹಿಳೆಯರ ಕೆಲಸದ ಪರಿಸ್ಥಿತಿಗಳ ಕುರಿತು ನ್ಯಾ. ಕೆ ಹೇಮಾ ಸಮಿತಿ ನೀಡಿದ್ದ ವರದಿ ಬಿಡುಗಡೆ ಬಳಿಕ ಲೈಂಗಿಕ ಕಿರುಕುಳದಂತಹ ಆರೋಪ ಎದುರಿಸುತ್ತಿರುವ ಮಲಯಾಳಂ ಚಿತ್ರರಂಗದ ಪ್ರಮುಖ ವ್ಯಕ್ತಿಗಳಲ್ಲಿ ಬಾಲಚಂದ್ರ ಮೆನನ್ ಒಬ್ಬರು .