ಪರೀಕ್ಷೆ ಬರೆಯುವ ಎಲ್ಲಾ ವಿಕಲಚೇತನ ವಿದ್ಯಾರ್ಥಿಗಳಿಗೂ ಅವರ ಅಂಗವೈಕಲ್ಯದ ಶೇಕಡಾವಾರು ಪ್ರಮಾಣ ಲೆಕ್ಕಿಸದೆ ಒಂದೇ ರೀತಿಯ ವಿಶೇಷ ನೆರವು ನೀಡುವಂತೆ ಕೋರಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್ ಇತ್ತೀಚೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ [ಬ್ಲೆಸ್ಸೆನ್ ಬೇಬಿ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ವಿಕಲಚೇತನರ ಹಕ್ಕುಗಳ ಕಾಯಿದೆ- 2016ರ ಅಡಿ ಪ್ರಯೋಜನ ಪಡೆಯಲು ಅಂಗವೈಕಲ್ಯದ ಯಾವುದೇ ಕನಿಷ್ಠ ಶೇಕಡಾವಾರು ಪ್ರಮಾಣ ನಿಗದಿಪಡಿಸದೆ, ಎಸ್‌ಎಸ್‌ಎಲ್‌ಸಿ, ಪ್ರಥಮ ಮತ್ತು ಎರಡನೇ ವರ್ಷದ ಹೈಯರ್ ಸೆಕೆಂಡರಿ ಪರೀಕ್ಷೆ ಬರೆಯುವ ವೇಳೆ ವಿಶೇಷ ಸಹಾಯದ ಅಗತ್ಯವಿರುವ ವಿದ್ಯಾರ್ಥಿಗಳಿಗೆ ನಿಯಮಗಳನ್ನು ರೂಪಿಸುವಂತೆ ಮನವಿಯಲ್ಲಿ ಕೋರಲಾಗಿದೆ.
ಈ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ಸಂಬಂಧಪಟ್ಟ ಶಿಕ್ಷಣ ಇಲಾಖೆಗಳಿಗೆ ಮುಖ್ಯ ನ್ಯಾಯಮೂರ್ತಿ ಎಸ್ ಮಣಿಕುಮಾರ್ ಮತ್ತು ನ್ಯಾಯಮೂರ್ತಿ ಶಾಜಿ ಪಿ ಚಾಲಿ ಅವರಿದ್ದ ವಿಭಾಗೀಯ ಪೀಠ ನೋಟಿಸ್ ಜಾರಿ ಮಾಡಿದೆ.
ತನ್ನ ಅಂಗವೈಕಲ್ಯ 40% ಅಥವಾ ಅದಕ್ಕಿಂತ ಕಡಿಮೆ ಇದೆ ಎಂದು ತಿಳಿಸಿ 2020ರಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಲಿಪಿಕಾರನನ್ನು (ಪರೀಕ್ಷೆ ಬರೆಯಲು ನೀಡಲಾಗುವ ಸಹಾಯಕ) ಹೊಂದಲು ಅನುಮತಿ ನೀಡದೆ ಇದ್ದುದನ್ನು ಪ್ರಶ್ನಿಸಿ ವಿಕಲಚೇತನ ವಿದ್ಯಾರ್ಥಿಯೊಬ್ಬರು ವಕೀಲ ಶೇಜಿ ಪಿ ಅಬ್ರಹಾಂ ಅವರ ಮೂಲಕ ಪಿಐಎಲ್ ಸಲ್ಲಿಸಿದ್ದಾರೆ. ಪ್ರಸ್ತುತ ಈ ವಿದ್ಯಾರ್ಥಿ ಲಿಪಿಕಾರನ ನೆರವಿನಿಂದ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಬರೆದು ಪಾಸಾಗಿದ್ದಾರೆ. ಆದರೆ, ಇಂದಿಗೂ ಈ ವಿಚಾರವಾಗಿ ಏಕರೂಪದ ನಿಯಮಾವಳಿಗಳನ್ನು ರೂಪಿಸದ ಸರ್ಕಾರದ ನಡೆಯನ್ನು ಗಮನಿಸಿ ಅವರು ಪಿಐಎಲ್ ಸಲ್ಲಿಸಿದ್ದಾರೆ.