
ಕೇರಳದ ಕೊಚ್ಚಿ ಬಳಿಯ ಅಲಪ್ಪುಳ ಕರಾವಳಿಯಲ್ಲಿ ಮೇ 24 ರಂದು ಲೈಬೀರಿಯಾದ ಸರಕು ಸಾಗಣೆ ಹಡಗು ಎಂಎಸ್‌ಸಿ ಎಲ್ಸಾ 3 ಮುಳುಗಿದ ಪರಿಣಾಮ ಉಂಟಾಗಿರುವ ರಾಸಾಯನಿಕ ಮತ್ತು ತೈಲ ಸೋರಿಕೆ ಕುರಿತು ಮಾಹಿತಿ ಬಿಡುಗಡೆ ಮಾಡುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ [ಟಿ ಎನ್ ಪ್ರತಾಪನ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಂಸದ ಟಿ ಎನ್ ಪ್ರತಾಪನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ನಿತಿನ್ ಜಾಮ್‌ದಾರ್ ಮತ್ತು ನ್ಯಾಯಮೂರ್ತಿ ಬಸಂತ್ ಬಾಲಾಜಿ ಅವರಿದ್ದ ಪೀಠ ಈ ನಿರ್ದೇಶನ ನೀಡಿದೆ.
ಸೂಕ್ತ ಪರಿಹಾರ, ಪರಿಸರ ಶುಚಿಗೊಳಿಸುವುದು ಮತ್ತು ಭಾರತೀಯ ಮತ್ತು ಅಂತಾರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳುವುದಕ್ಕಾಗಿ ನ್ಯಾಯಾಲಯ ಮಧ್ಯಪ್ರವೇಶಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿತ್ತು.
ಸಮುದ್ರಕ್ಕೆ ಸೋರಿಕೆಯಾಗಿರುವ ಅಪಾಯಕಾರಿ ರಾಸಾಯನಿಕಗಳು ಮತ್ತು ತೈಲದ ಬಗ್ಗೆ ಸಾರ್ವಜನಿಕವಾಗಿ ಮಾಹಿತಿ ಪ್ರಕಟಿಸುವಂತೆ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ನಿರ್ದೇಶನ ನೀಡಿದ ಸಿಜೆ ಜಾಮ್‌ದಾರ್ ಅವರು ವಿಚಾರಣೆ ನಡೆಯುತ್ತಿರುವ ದಿನವಾದ ಇಂದು ಪರಿಸರ ದಿನ ಎಂದು ಮೌಖಿಕವಾಗಿ ತಿಳಿಸಿದರು.
ಮೇ 24 ರಂದು ಕರಾವಳಿ ಜಿಲ್ಲೆಯಾದ ಅಲಪ್ಪುಳದಿಂದ ನೈಋತ್ಯಕ್ಕೆ 25 ಕಿ.ಮೀ ದೂರದಲ್ಲಿ ಲೈಬೀರಿಯಾ ಧ್ವಜ ಹೊತ್ತಿದ್ದ ಸರಕು ಹಡಗು ಎಂಎಸ್‌ಸಿ ಎಲ್ಸಾ 3 ಮುಳುಗಿದ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸಲಾಗಿತ್ತು.
ವಿಳಿಜ್ಞಂನಿಂದ ಕೊಚ್ಚಿಗೆ ತೆರಳುತ್ತಿದ್ದ ಈ ಹಡಗು, ಭಾರತೀಯ ಜಲಪ್ರದೇಶದಲ್ಲಿ ಮುಳುಗಿತ್ತು ಡೀಸೆಲ್, ಬಂಕರ್ ತೈಲ ಹಾಗೂ ಅಪಾಯಕಾರಿ ಪ್ರತಿಕ್ರಿಯಾಶೀಲ ರಾಸಾಯನಿಕ ಕ್ಯಾಲ್ಸಿಯಂ ಕಾರ್ಬೈಡ್ ಮತ್ತು ಪ್ಲಾಸ್ಟಿಕ್ ನರ್ಡಲ್‌ಗಳನ್ನು ಅದು ಸಾಗಿಸುತ್ತಿತ್ತು ಎಂದು ವರದಿಯಾಗಿತ್ತು. ಅಪಾಯಕಾರಿ ವಸ್ತು ಸೋರಿಕೆಯಿಂದಾಗಿ ಅರಬ್ಬೀ ಸಮುದ್ರದಲ್ಲಿ ಮಾಲಿನ್ಯ ಮತ್ತು ಕೇರಳ ಕರಾವಳಿ ತೀರದ ಮೀನುಗಾರರ ಜೀವನೋಪಾಯದ ವಿಚಾರದಲ್ಲಿ ವ್ಯಾಪಕ ಕಳವಳ ಹುಟ್ಟುಹಾಕಿತ್ತು.
ಕೇರಳ ಮೀನುಗಾರರ ಸಮನ್ವಯ ಸಮಿತಿಯ ಅಧ್ಯಕ್ಷರೂ ಆಗಿರುವ ಮಾಜಿ ಸಂಸದ ಪ್ರತಾಪನ್, ಕೇರಳ ರಾಜ್ಯ ವಿಪತ್ತು ನಿರ್ವಹಣಾ ಯೋಜನೆ 2016ರ ಆದೇಶದಂತೆ ಕ್ರಮ ಕೈಗೊಳ್ಳಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ದೂರಿದ್ದರು.
ವಾದ ಆಲಿಸಿದ ನ್ಯಾಯಾಲಯ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮತ್ತು ಅವುಗಳ ಅಂಗಸಂಸ್ಥೆಗಳು ಎರಡು ವಾರಗಳಲ್ಲಿ ಕ್ರಮ ಕೈಗೊಂಡಿರುವ ಕುರಿತಾದ ವರದಿ ಸಲ್ಲಿಸಬೇಕು ಎಂದು ಸೂಚಿಸಿತು. ನಂತರ ಪ್ರಕರಣದ ವಿಚಾರಣೆ ನಡೆಯಲಿದೆ.