ಭೂಕುಸಿತ ಪೀಡಿತ ವಯನಾಡಿನಲ್ಲಿ ರಾಜಕೀಯ ಪಕ್ಷಗಳ ದಿಢೀರ್ ಮುಷ್ಕರ: ಕೇರಳ ಹೈಕೋರ್ಟ್ ಛೀಮಾರಿ

“ಹರತಾಳಗಳು ನಡೆಯುವುದು ಘೋರ ಅನ್ಯಾಯಗಳನ್ನು ಪ್ರತಿರೋಧಿಸುವುದಕ್ಕಾಗಿ. ಇದು ಯಾವ ಉದ್ದೇಶದ ಹರತಾಳ? ಕೇಂದ್ರ ಹಣ ನೀಡುತ್ತಿಲ್ಲ ಎಂದು ಹೇಳಿ ಮುಷ್ಕರ ನಡೆಸಿದರೆ ಹಣ ಬರುತ್ತದೆಯೇ?” ಎಂದು ಅದು ಟೀಕಿಸಿದೆ.
Kerala High Court
Kerala High Court
Published on

ಕೇರಳದ ಭೂಕುಸಿತ ಪೀಡಿತ ವಯನಾಡಿನಲ್ಲಿ ಯುಡಿಎಫ್‌ ಮತ್ತು ಎಲ್‌ಡಿಎಫ್‌ ಮೈತ್ರಿಕೂಟಗಳು ನವೆಂಬರ್ 19ರಂದು  ಕರೆ ನೀಡಿದ್ದ ಹರತಾಳವನ್ನು (ಮುಷ್ಕರ) ಕೇರಳ ಹೈಕೋರ್ಟ್ ಶುಕ್ರವಾರ ಕಟುವಾಗಿ ಟೀಕಿಸಿದೆ [ಕೇರಳದಲ್ಲಿ ನೈಸರ್ಗಿಕ ವಿಕೋಪ ತಡೆ ಮತ್ತು ನಿರ್ವಹಣೆ ಕುರಿತ ಸ್ವಯಂ ಪ್ರೇರಿತ ಪ್ರಕರಣ]

 ವಯನಾಡಿನಲ್ಲಿ ನಡೆಯುತ್ತಿರುವ ಪುನರ್ವಸತಿ ಪ್ರಯತ್ನಗಳಿಗೆ ಸಹಾಯ ಮಾಡಲು ಕೇಂದ್ರ ಸರ್ಕಾರ ಹಣ ನೀಡಲು ವಿಳಂಬ ಮಾಡುತ್ತಿರುವುದನ್ನು ಪ್ರತಿಭಟಿಸಿ ಎರಡೂ ರಾಜಕೀಯ ಮೈತ್ರಿಕೂಟಗಳು ಮುಷ್ಕರಕ್ಕೆ ಕರೆನೀಡಿದ್ದವು.

Also Read
ಅನುಕಂಪ ಕಳೆದುಕೊಂಡಿದ್ದೇವೆ: ವಯನಾಡ್‌ ಭೂದುರಂತದ ಪರಿಹಾರದ ಹಣದಲ್ಲಿ ಇಎಂಐ ಕಡಿತಕ್ಕೆ ಕೇರಳ ಹೈಕೋರ್ಟ್‌ ಕಿಡಿ

ಇಂತಹ ಹರತಾಳಗಳು ಸಂಕಷ್ಟದಾಯಕ ಮತ್ತು ಜನವಿರೋಧಿ ಎಂದು ನ್ಯಾಯಮೂರ್ತಿಗಳಾದ ಎಕೆ ಜಯಶಂಕರನ್ ನಂಬಿಯಾರ್ ಮತ್ತು ನ್ಯಾಯಮೂರ್ತಿ ಶ್ಯಾಮ್ ಕುಮಾರ್ ವಿಎಂ ಅವರಿದ್ದ ಪೀಠ ತಿಳಿಸಿದೆ.

“ತುಂಬಾ ವಿಚಲಿತಗೊಳಿಸುವಂತಹ ಸಂಗತಿಯೊಂದನ್ನು ಓದಿದೆವು.  ಯುಡಿಎಫ್ ಮತ್ತು ಎಲ್‌ಡಿಎಫ್ ಎರಡೂ ಹರತಾಳಕ್ಕೆ ಕರೆ ನೀಡಿವೆ. ಇದು ತುಂಬಾ ಜನವಿರೋಧಿ. ನ್ಯಾಯಾಲಯದ ಆದೇಶವಿದ್ದರೂ ದಿಢೀರ್‌ ಹರತಾಳ ನಡೆಸುವುದು ಸ್ವೀಕಾರಾರ್ಹವಲ್ಲ. ಅಂತಹ ನಡೆಗೆ ತನ್ನ ಬೆಂಬಲವಿಲ್ಲ ಎಂದಿದ್ದ ವಿರೋಧ ಪಕ್ಷ ಯುಡಿಎಫ್‌ ಕೂಡ ಮುಷ್ಕರದಲ್ಲಿ ಪಾಲ್ಗೊಂಡಿತು. ಹರತಾಳಗಳು ನಡೆಯುವುದು ಘೋರ ಅನ್ಯಾಯಗಳನ್ನು ಪ್ರತಿರೋಧಿಸುವುದಕ್ಕಾಗಿ. ಇದು ಯಾವ ಉದ್ದೇಶದ ಹರತಾಳ? ಕೇಂದ್ರ ಹಣ ನೀಡುತ್ತಿಲ್ಲ ಎಂದು ಹೇಳಿ ಮುಷ್ಕರ ನಡೆಸಿದರೆ ಹಣ ಬರುತ್ತದೆಯೇ? ಇದು ಸಮರ್ಥನೀಯವಲ್ಲ” ಎಂದು ಅದು ಕಿಡಿಕಾರಿತು.

ಅಲ್ಲದೆ ಇಂತಹ ಘಟನೆಗಳು ಮುಂದುವರೆದರೆ ಗಂಭೀರ ಪರಿಣಾಮ ಎದುರಿಸಬೇಕಾದೀತು ಎಂದು ಪೀಠ ಕಟ್ಟೆಚ್ಚರಿಕೆ ನೀಡಿತು. "ಇಂತಹ ನಡವಳಿಕೆಯನ್ನು ನ್ಯಾಯಾಲಯ  ಸಹಿಸುವುದಿಲ್ಲ ಎಂದು ದಯವಿಟ್ಟು ಸರ್ಕಾರ ಮತ್ತು ರಾಜಕೀಯ ಪಕ್ಷಗಳಿಗೆ ತಿಳಿಸಿ. ಜನವಿರೋಧಿಯಾಗಿರುವಂತಹ ವಿಚಾರಕ್ಕೆ, ಎಲ್ಲಾ ಪಕ್ಷಗಳು ಒಗ್ಗೂಡಿರುವಂತೆ ತೋರುತ್ತವೆ. ಇದು ಅತ್ಯಂತ ದುಃಖಕರ ನಡವಳಿಕೆ" ಎಂದು ನ್ಯಾಯಮೂರ್ತಿ ನಂಬಿಯಾರ್ ಹೇಳಿದರು.

ಹರತಾಳಗಳು ನಡೆಯುವುದು ಘೋರ ಅನ್ಯಾಯಗಳನ್ನು ಪ್ರತಿರೋಧಿಸುವುದಕ್ಕಾಗಿ. ಇದು ಯಾವ ಉದ್ದೇಶದ ಹರತಾಳ? ಕೇಂದ್ರ ಹಣ ನೀಡುತ್ತಿಲ್ಲ ಎಂದು ಹೇಳಿ ಮುಷ್ಕರ ನಡೆಸಿದರೆ ಹಣ ಬರುತ್ತದೆಯೇ?”
ಕೇರಳ ಹೈಕೋರ್ಟ್‌

ಕಳೆದ ಜುಲೈ 30 ರಂದು ಉಂಟಾಗಿದ್ದ ತೀವ್ರ ಭೂಕುಸಿತದಿಂದಾಗಿ ತೊಂದರೆ ಅನುಭವಿಸಿದ್ದ ವಯನಾಡಿನಲ್ಲಿ ಪರಿಹಾರ ಕಾರ್ಯದ ಮೇಲೆ ನಿಗಾ ಇಡುವ ಉದ್ದೇಶದಿಂದ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಅಸಮಾಧಾನ ಹೊರಹಾಕಿತು.

 ಪುನರ್ವಸತಿ ಕಾರ್ಯಗಳಿಗೆ ಸಹಾಯ ಮಾಡಲು ಕೇರಳಕ್ಕೆ ಕೇಂದ್ರ ಸರ್ಕಾರ ಹಣ ವಿತರಿಸಲು ವಿಳಂಬ ಮಾಡುತ್ತಿರುವ ಬಗ್ಗೆ ನ್ಯಾಯಾಲಯ ಈ ಹಿಂದಿನ ವಿಚಾರಣೆ ವೇಳೆ ಕಳವಳ ವ್ಯಕ್ತಪಡಿಸಿತ್ತು.

Kannada Bar & Bench
kannada.barandbench.com