ಕಳೆದ ತಿಂಗಳು ವಯನಾಡ್‌ನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಂತ್ರಸ್ತರಾಗಿರುವವರಿಗೆ ನೀಡಿದ ಪರಿಹಾರದ ಹಣದಲ್ಲಿ ಕೇರಳ ಗ್ರಾಮೀಣ ಬ್ಯಾಂಕ್ (ಗ್ರಾಮೀಣ ಪ್ರಾದೇಶಿಕ ಬ್ಯಾಂಕ್) ಇಎಂಐ ಕಡಿತ ಮಾಡಿಕೊಂಡಿರುವ ವರದಿಗೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್ ಶುಕ್ರವಾರ ಬೇಸರ ವ್ಯಕ್ತಪಡಿಸಿದೆ.
ಕೇರಳದ ವಯನಾಡ್‌ನಲ್ಲಿ ಉಂಟಾದ ಭೂಕುಸಿತದ ಹಿನ್ನೆಲೆಯಲ್ಲಿ ಪರಿಹಾರ ಕಾರ್ಯದ ಮೇಲೆ ನಿಗಾ ಇಡುವ ಉದ್ದೇಶದಿಂದ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎ ಕೆ ಜಯಶಂಕರನ್ ನಂಬಿಯಾರ್ ಮತ್ತು ಶ್ಯಾಮ್ ಕುಮಾರ್ ಎಂ ವಿ ಅವರ ವಿಭಾಗೀಯ ಪೀಠ ನಡೆಸಿತು.
"ಬ್ಯಾಂಕ್‌ಗಳು ಈ ಮಟ್ಟಕ್ಕೆ ಇಳಿದಿವೆಯೇ ಎಂಬುದನ್ನು ಸರ್ಕಾರ ತಿಳಿಸಬೇಕು. ಸಾಲದ ರೂಪದಲ್ಲಿ ನೀಡಿರುವ ಹಣವನ್ನು ಬ್ಯಾಂಕ್‌ಗಳು ಮರಳಿ ಪಡೆಯಬೇಕು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ತಮ್ಮ ಹೊಣೆಗಾರಿಕೆ ನಿಭಾಯಿಸುವ ನಿಟ್ಟಿನಲ್ಲಿ ನಿರ್ದಿಷ್ಟ ವಿಚಾರಕ್ಕೆ ಹಣ ನೀಡಿದಾಗ ಫಲಾನುಭವಿಗಳಿಗೆ ತಲುಪಿಸಬೇಕು. ಇಂಥ ಸಂದರ್ಭದಲ್ಲಿ ಬ್ಯಾಕ್ ಅನುಕಂಪ ತೋರುವುದು ಮೂಲಭೂತ ಕರ್ತವ್ಯವಾಗಿದೆ. ಇಂಥ ಘಟನೆಗಳು ರಾಜ್ಯದಲ್ಲಿ ನಡೆದಿವೆಯೇ ಎಂಬುದನ್ನು ಸರ್ಕಾರದ ಪರ ವಕೀಲರಾದ ಉನ್ನಿಕೃಷ್ಣನ್ ತಿಳಿಸಬೇಕು. ಇದು ನಡೆದಿದ್ದರೆ ನಾವು ಮಧ್ಯಪ್ರವೇಶಿಸುತ್ತೇವೆ” ಎಂದು ನ್ಯಾಯಾಲಯ ಹೇಳಿದೆ.
“ಇಡೀ ಪ್ರಕರಣದಲ್ಲಿ ಮಾನವೀಯತೆಯ ಕಣ್ಮರೆಯಾಗಿದೆ. ಮೊದಲ ವಾರದಲ್ಲಿ ಎಲ್ಲರೂ ಅಳುತ್ತಾರೆ. ಆನಂತರ ಹೀಗೆ ಮಾಡುತ್ತಾರೆ” ಎಂದು ನ್ಯಾಯಾಲಯ ಹೇಳಿದೆ.
ಘಟನೆಗೆ ಸಂಬಂಧಿಸಿದಂತೆ ವಿತರಿಸುವ ಪರಿಹಾರದ ಮೊತ್ತವು ಫಲಾನುಭವಿಗಳಿಗೆ ಧಕ್ಕುತ್ತಿದೆ ಎಂಬುದನ್ನು ಖಾತರಿಪಡಿಸಿ. ಸಂತ್ರಸ್ತರು ನ್ಯಾಯಾಲಯಕ್ಕೆ ಬರಬೇಕು ಎಂದು ನಿರೀಕ್ಷಿಸಲಾಗದು ಎಂದು ನ್ಯಾಯಾಲಯ ಹೇಳಿದೆ.
ಇಂಥ ನೈಸರ್ಗಿಕ ವಿಪತ್ತುಗಳನ್ನು ಹೇಗೆ ತಪ್ಪಿಸಬಹುದು ಎಂಬ ವಿಸ್ತೃತ ವಿಚಾರವನ್ನು ಪರಿಶೀಲಿಸಲು ನ್ಯಾಯಾಲಯ ಮುಂದಾಗಿದೆ.