ಆರಾಧಕರ ಒಂದು ವರ್ಗಕ್ಕೆ ತಮ್ಮ ವಾಹನಗಳಲ್ಲೇ ದೇಗುಲದ ಆವರಣ ಪ್ರವೇಶಿಸಲು ಅವಕಾಶ ನೀಡುವ ಕ್ರಮ ನಿಲ್ಲಿಸುವಂತೆ ಗುರುವಾಯೂರು ದೇವಸ್ಥಾನದ ದೇವಸ್ವಂ ವ್ಯವಸ್ಥಾಪನಾ ಸಮಿತಿಗೆ ಕೇರಳ ಹೈಕೋರ್ಟ್ ಇತ್ತೀಚೆಗೆ ತಾಕೀತು ಮಾಡಿದೆ.
ಮಲಯಾಳಂ ಖ್ಯಾತ ನಟ ಮೋಹನ್‌ಲಾಲ್ ಅವರ ವಾಹನವನ್ನು ವ್ಯವಸ್ಥಾಪನಾ ಸಮಿತಿಗೆ ಸೇರಿದ ಮತ್ತೊಂದು ವಾಹನದೊಂದಿಗೆ 2021ರ ಸೆಪ್ಟೆಂಬರ್‌ನಲ್ಲಿ ಗುರುವಾಯೂರು ಶ್ರೀ ಕೃಷ್ಣ ದೇಗುಲದ ಆವರಣದಲ್ಲಿರುವ ನಪ್ಪಂತಲ್‌ಗೆ ಪ್ರವೇಶಿಸಲು ಅವಕಾಶ ಮಾಡಿಕೊಟ್ಟ ಪ್ರಕರಣದ ವಿಚಾರಣೆ ನ್ಯಾಯಮೂರ್ತಿಗಳಾದ ಅನಿಲ್ ಕೆ ನರೇಂದ್ರನ್ ಮತ್ತು ಪಿ ಜಿ ಅಜಿತ್‌ಕುಮಾರ್ ಅವರಿದ್ದ ವಿಭಾಗೀಯ ಪೀಠದಲ್ಲಿ ನಡೆಯಿತು.
ಗುರುವಾಯೂರು ದೇವಸ್ವಂ ವ್ಯವಸ್ಥಾಪನಾ ಸಮಿತಿಯ ಹಾಲಿ ಆಡಳಿತಗಾರರಿಂದ ಬಂದಿದ್ದ ಪತ್ರವನ್ನು ಆಧರಿಸಿ ನ್ಯಾಯಾಲಯ ಸ್ವಯಂಪ್ರೇರಿತ ವಿಚಾರಣೆ ಆರಂಭಿಸಿತ್ತು. ನಟ ಮೋಹನ್‌ಲಾಲ್ ಜೊತೆ ಮಾಜಿ ಆಡಳಿತಗಾರರೊಬ್ಬರು ಇಬ್ಬರು ಹಾಲಿ ಸದಸ್ಯರೊಂದಿಗೆ ವಾಹನಗಳಲ್ಲಿ ದೇಗುಲ ಪ್ರವೇಶಿಸಿದ್ದನ್ನು ಪತ್ರದಲ್ಲಿ ಪ್ರಶ್ನಿಸಲಾಗಿತ್ತು.
ಆರಾಧನಾ ಹಕ್ಕು ಸಹಜವಾಗಿ ಎಲ್ಲರಿಗೂ ತಿಳಿದಿರುವಂತೆ ನಾಗರಿಕ ಹಕ್ಕಾಗಿದ್ದು ಪ್ರತಿ ದೇಗುಲದ ಆಚರಣೆ ಮತ್ತು ಸಂಪ್ರದಾಯಕ್ಕೆ ಒಳಪಟ್ಟಿರುತ್ತದೆ. ಮೋಹನ್ ಲಾಲ್ ರೀತಿಯ ವ್ಯಕ್ತಿಗಳನ್ನು ಅವರ ವಾಹನಗಳಲ್ಲಿ ದೇಗುಲ ಪ್ರವೇಶಿಸಲು ಅನುಮತಿ ನೀಡುವುದು ಎಲ್ಲಾ ಆರಾಧಕರು ಅನುಸರಿಸಬೇಕಾದ ನಿಯಮಾವಳಿಗಳನ್ನು ಉಲ್ಲಂಘಿಸುತ್ತದೆ ಎಂದು ಪೀಠ ತರಾಟೆಗೆ ತೆಗೆದುಕೊಂಡಿತು.
ಹೀಗಾಗಿ ದೇಗುಲದ ನಿಯಮಾವಳಿಗಳನ್ನು ಮಾಜಿ ಅಧಿಕಾರಿಗಳೂ ಸೇರಿದಂತೆ ಆಡಳಿತ ವರ್ಗದ ಸದಸ್ಯರು ಉಲ್ಲಂಘಿಸದಂತೆ ಸಮಿತಿ ನೋಡಿಕೊಳ್ಳಬೇಕು ಎಂದ ನ್ಯಾಯಾಲಯ ಹಿರಿಯ ನಾಗರಿಕರು, ವಿಕಲ ಚೇತನರು ಹಾಗೂ ವಿಶೇಷ ಚೇತನರಿಗೆ ದೇಗುಲದಲ್ಲಿ ಸೂಕ್ತ ವ್ಯವಸ್ಥೆಯ ಸಮಸ್ಯೆ ಇರುವುದನ್ನು ಗಮನಿಸಬೇಕು ಎಂದು ಸೂಚಿಸಿತು.