ದಲಿತ ಪ್ರಾಧ್ಯಾಪಕನಿಗೆ ʼತಯಾರಿಕೆಯಲ್ಲೇ ದೋಷʼ ಇದೆ ಎಂದಿದ್ದ ಪ್ರಾಂಶುಪಾಲ: ಪ್ರಕರಣ ರದ್ದತಿಗೆ ಕೇರಳ ಹೈಕೋರ್ಟ್ ನಕಾರ

ಜಾತಿ ಆಧಾರಿತ ತಾರತಮ್ಯ ಸಾಮಾನ್ಯವಾಗಿ ಸೂಕ್ಷ್ಮವಾಗಿ ನಡೆಯಲಿದ್ದು ಹೇಳಿಕೆಯೊಂದು ಜಾತಿವಾದಿಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ವಿಚಾರಣೆ ವೇಳೆಯಷ್ಟೇ ನಿರ್ಧರಿಸಬಹುದು ಎಂದು ಅದು ಹೇಳಿದೆ.
ದಲಿತ ಪ್ರಾಧ್ಯಾಪಕನಿಗೆ ʼತಯಾರಿಕೆಯಲ್ಲೇ ದೋಷʼ ಇದೆ ಎಂದಿದ್ದ ಪ್ರಾಂಶುಪಾಲ: ಪ್ರಕರಣ ರದ್ದತಿಗೆ ಕೇರಳ ಹೈಕೋರ್ಟ್ ನಕಾರ
Published on

ಅಧ್ಯಾಪಕರ ವಿರುದ್ಧ ಜಾತಿ ನಿಂದನೆ ಮಾಡಿದ ಆರೋಪ ಎದುರಿಸುತ್ತಿದ್ದ ಪ್ರಾಂಶುಪಾಲರೊಬ್ಬರ ವಿರುದ್ಧ ಎಸ್‌ಸಿ ಎಸ್‌ಟಿ ಕಾಯಿದೆಯಡಿ ದಾಖಲಾಗಿದ್ದ ಪ್ರಕರಣ ರದ್ದುಗೊಳಿಸಲು ಕೇರಳ ಹೈಕೋರ್ಟ್‌ ಈಚೆಗೆ ನಿರಾಕರಿಸಿದೆ.  [ಡಾ. ಸಿಎಂ. ಕುಸುಮನ್ ಮತ್ತು ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಡಿಬಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಿರಣ್ ಎಂ ಪ್ರಕಾಶ್ ಅವರಿಗೆ ಮ್ಯಾನ್ಯುಫ್ಯಾಕ್ಚರಿಂಗ್‌ ಡಿಫೆಕ್ಟ್‌ (ನಿರ್ಮಾಣ ದೋಷ- ಹುಟ್ಟಿನಿಂದಲೇ ಸಮಸ್ಯೆಯುಳ್ಳವರು ಎಂದು ತಿಳಿಸಲು ಆಂಗ್ಲಭಾಷೆಯಲ್ಲಿ ಸಾಮಾನ್ಯವಾಗಿ ಬಳಕೆಯಲ್ಲಿರುವ ಪದ) ಇದೆ ಎಂದು ಪ್ರಾಂಶುಪಾಲರಾದ ಡಾ. ಸಿಎಂ. ಕುಸುಮನ್ ಹೇಳಿದ್ದರು ಎನ್ನಲಾಗಿತ್ತು. ಈ ಸಂಬಂಧ ಕೊಟ್ಟಾಯಂನ ವೆಲ್ಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

Also Read
ದಲಿತ ಪದ ಬಳಕೆಗೆ ನಿಷೇಧ ಕೋರಿಕೆ: ಪಿಐಎಲ್‌ ವಜಾಗೊಳಿಸಿದ ಹೈಕೋರ್ಟ್‌

ವಿಚಾರಣೆ ವೇಳೆ ನ್ಯಾಯಾಲಯ ಜಾತಿ ಆಧಾರಿತ ಅವಮಾನದ ಆರೋಪಗಳನ್ನು ಅವು ಮಾಡಲಾದ ಸಂದರ್ಭದಲ್ಲಿ ಮತ್ತು ಅಂಚಿನಲ್ಲಿರುವ ಸಮುದಾಯಗಳು ಎದುರಿಸುತ್ತಿರುವ ಸಾಮಾಜಿಕ ವಾಸ್ತವಗಳ ಮೂಸೆಯಲ್ಲಿ ವಿಶ್ಲೇಷಿಸಬೇಕು ಎಂದು ನ್ಯಾಯಮೂರ್ತಿ ವಿ.ಜಿ. ಅರುಣ್ ಹೇಳಿದರು.

" ದುರ್ಬಲ ವರ್ಗಗಳಿಗೆ ಸೇರಿದ ವ್ಯಕ್ತಿಗಳ ಸಹಿಷ್ಣುತೆಯ ಮಟ್ಟ ಅಂತಹ ಯಾವುದೇ ಅವಮಾನ ಅನುಭವಿಸದ ವ್ಯಕ್ತಿಗಳಿಗೆ ಸಮನಾಗಿರುವುದಿಲ್ಲ ಎಂಬ ಅಂಶವನ್ನು ಯಾರೂ ಮರೆಯುವಂತಿಲ್ಲ... ಶೂ ಎಲ್ಲಿ ಕಚ್ಚುತ್ತದೆ ಎಂದು ಅದನ್ನು ಧರಿಸಿದವರಿಗೆ ಮಾತ್ರ ಗೊತ್ತಿರುತ್ತದೆ. ಆದ್ದರಿಂದ, ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದ ಸಂತ್ರಸ್ತರ ಕಾರಣದಿಂದಾಗಿ ಅವಮಾನ ಅಥವಾ ಬೆದರಿಕೆ ಇದೆಯೇ ಎಂದು ನಿರ್ಧರಿಸುವಾಗ, ಸಂದರ್ಭ ಮತ್ತು ಸನ್ನಿವೇಶವು ಅತ್ಯಂತ ಮಹತ್ವದ್ದಾಗಿದೆ " ಎಂದು ನ್ಯಾಯಮೂರ್ತಿಗಳು ವಿವರಿಸಿದರು.

ಅರ್ಜಿದಾರರು ಮತ್ತು ದೂರುದಾರರು ಉಲ್ಲೇಖಿಸಿದ ಪೂರ್ವನಿದರ್ಶನಗಳು ಅವಮಾನ ಅಥವಾ ಬೆದರಿಕೆಯನ್ನು ಬಲಿಪಶುವಿನ ಜಾತಿ ಸ್ಥಿತಿಗೆ ಸಂಬಂಧಿಸಿರಬೇಕು ಎಂದು ಸ್ಪಷ್ಟಪಡಿಸುತ್ತವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

“ಪ್ರಕರಣವನ್ನು ನಿರ್ಧರಿಸುವಾಗ ಭಾರತದಲ್ಲಿ ಪರಿಶಿಷ್ಟ ಜಾತಿಗಳು ಶತಮಾನಗಳಷ್ಟು ಹಳೆಯ ಜಾತಿ ಶ್ರೇಣಿಯಲ್ಲಿ ಬೇರೂರಿರುವ ಬಹಿಷ್ಕಾರ, ಅಸ್ಪೃಶ್ಯತೆ ಮತ್ತು ಹಿಂಸೆಯಂತಹ ವ್ಯವಸ್ಥಿತ ಅವಮಾನವನ್ನು ಎದುರಿಸಿದ್ದಾರೆ ಎಂಬ ನಿರ್ವಿವಾದಿತ ಅಂಶವನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು " ಎಂದು ಕೂಡ ಅದು ಹೇಳಿತು.

ಜಾತಿ ಆಧಾರಿತ ತಾರತಮ್ಯ  ಸಾಮಾನ್ಯವಾಗಿ ಸೂಕ್ಷ್ಮವಾಗಿ ನಡೆಯಲಿದ್ದು ಹೇಳಿಕೆಯೊಂದು ಜಾತಿವಾದಿಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ವಿಚಾರಣೆ ವೇಳೆಯಷ್ಟೇ ನಿರ್ಧರಿಸಬಹುದು ಎಂದ ಅದು ಪ್ರಕರಣ ರದ್ದತಿಗೆ ನಿರಾಕರಿಸಿತು.

[ತೀರ್ಪಿನ ಪ್ರತಿ]

Attachment
PDF
Dr_CM_Kusuman_v_State_of_Kerala___ors
Preview
Kannada Bar & Bench
kannada.barandbench.com