ಮೊಹಮ್ಮದ್ ಫೈಜಲ್ ದೋಷಿ ಎಂಬ ತೀರ್ಪಿನ ಅಮಾನತಿಗೆ ಕೇರಳ ಹೈಕೋರ್ಟ್ ನಕಾರ; ಸಂಸತ್ ಸದಸ್ಯತ್ವ ಕಳೆದುಕೊಳ್ಳುವ ಸಾಧ್ಯತೆ

ಆದರೆ ಈ ಪ್ರಕರಣದಲ್ಲಿ ಫೈಜಲ್‌ಗೆ ವಿಧಿಸಿದ್ದ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಅಮಾನತುಗೊಳಿಸಿದೆ.
Mohammed Faizal with Kerala High Court
Mohammed Faizal with Kerala High CourtFacebook
Published on

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಪಿ ಪಿ ಮೊಹಮ್ಮದ್ ಫೈಜಲ್ ಅವರನ್ನು ದೋಷಿ ಎಂದು ಅಪರಾಧ ನಿರ್ಣಯ ಮಾಡಿ ನೀಡಲಾಗಿದ್ದ ತೀರ್ಪನ್ನು ಅಮಾನತುಗೊಳಿಸಲು ಕೇರಳ ಹೈಕೋರ್ಟ್ ಮಂಗಳವಾರ ನಿರಾಕರಿಸಿದೆ. ಆದರೆ ಈ ಪ್ರಕರಣದಲ್ಲಿ ನ್ಯಾಯಾಲಯ ಅವರಿಗೆ ವಿಧಿಸಿದ್ದ ಶಿಕ್ಷೆಯ ಪ್ರಮಾಣವನ್ನು ಅಮಾನತುಗೊಳಿಸಿದೆ.

ಹೈಕೋರ್ಟ್ ಈ ಹಿಂದೆ ಫೈಜಲ್‌ ಅವರನ್ನು ದೋಷಿ ಎಂದು ಘೋಷಿಸಿದ್ದನ್ನು ಮತ್ತು ಆ ಸಂಬಂಧ ವಿಧಿಸಲಾಗಿದ್ದ ಶಿಕ್ಷೆಯನ್ನು ಅಮಾನತುಗೊಳಿಸಿತ್ತು ಆದರೆ ಕಳೆದ ಆಗಸ್ಟ್‌ನಲ್ಲಿ, ಸುಪ್ರೀಂ ಕೋರ್ಟ್ ಹೈಕೋರ್ಟ್‌ ಆದೇಶ  ರದ್ದುಗೊಳಿಸಿತು. ಫೈಝಲ್‌  ಅವರು ಸಲ್ಲಿಸಿರುವ ಮನವಿಯನ್ನು ಮರುಪರಿಶೀಲಿಸಿ ಆರು ವಾರಗಳಳೊಳಗೆ ಮತ್ತೊಮ್ಮೆ ಪ್ರಕರಣ ನಿರ್ಧರಿಸುವಂತೆ ಅದು ಹೈಕೋರ್ಟ್‌ಗೆ ನಿರ್ದೇಶಿಸಿತ್ತು.

ಪ್ರಕರಣವನ್ನು ಹೊಸದಾಗಿ ಆಲಿಸಿದ ನ್ಯಾಯಮೂರ್ತಿ ಎನ್‌ ನಗರೇಶ್‌ ಅವರು ವಿಚಾರಣಾ ನ್ಯಾಯಾಲಯ ಫೈಜಲ್ ಸೇರಿದಂತೆ ನಾಲ್ವರಿಗೆ ವಿಧಿಸಿದ್ದ ಶಿಕ್ಷೆಯ ಪ್ರಮಾಣವನ್ನು ಅಮಾನತಿನಲ್ಲಿಟ್ಟು ಇಂದು ಆದೇಶ ಹೊರಡಿಸಿದರು. ಆದರೆ ತನ್ನನ್ನು ದೋಷಿ ಎಂದು ಘೋಷಿಸಿದ್ದ ತೀರ್ಪನ್ನು ಅಮಾನತಿನಲ್ಲಿಡುವಂತೆ ಫೈಜಲ್‌ ಅವರು ಮಾಡಿದ್ದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತು. ಪ್ರಸ್ತುತ ತೀರ್ಪಿನಿಂದಾಗಿ ಅವರು ಸಂಸತ್‌ ಸದಸ್ಯತ್ವದಿಂದ ಅನರ್ಹರಾಗುವ ಸಾಧ್ಯತೆ ಇದೆ.

Also Read
ಲಕ್ಷದ್ವೀಪ ಸಂಸದನ ಶಿಕ್ಷೆ ಅಮಾನತು ಆದೇಶ ರದ್ದುಗೊಳಿಸಿದ ಸುಪ್ರೀಂ: ಮರುವಿಚಾರಣೆ ನಡೆಸುವಂತೆ ಕೇರಳ ಹೈಕೋರ್ಟ್‌ಗೆ ಸೂಚನೆ

ಹದಿನಾಲ್ಕು ವರ್ಷಗಳ ಹಿಂದೆ ಅಂದರೆ  2009ರ ಲೋಕಸಭೆ ಚುನಾವಣೆ ವೇಳೆ ನಡೆದ ರಾಜಕೀಯ ಕಲಹಕ್ಕೆ ಸಂಬಂಧಿಸಿದಂತೆ ಕೇಂದ್ರದ ಮಾಜಿ ಸಚಿವ ಮತ್ತು ಕಾಂಗ್ರೆಸ್ ನಾಯಕ ಪಿ ಎಂ ಸಯೀದ್ ಅವರ ಅಳಿಯ ಪಡನಾಥ್ ಸಾಲಿಹ್ ಅವರನ್ನು ಕೊಲೆ ಮಾಡಲು ಯತ್ನಿಸಿದ್ದಕ್ಕಾಗಿ ಫೈಝಲ್ ಹಾಗೂ ಇತರ ಮೂವರನ್ನು ದೋಷಿಗಳು ಎಂದು ಕವರಟ್ಟಿಯ ಸೆಷನ್ಸ್ ನ್ಯಾಯಾಲಯ ಜನವರಿ 11ರಂದು ತೀರ್ಪು ನೀಡಿತ್ತು. ಎಲ್ಲಾ ನಾಲ್ವರು ಆರೋಪಿಗಳಿಗೆ ವಿಚಾರಣಾ ನ್ಯಾಯಾಲಯ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಕೂಡ ವಿಧಿಸಿತ್ತು.

ನಾಲ್ವರು ಅಪರಾಧಿಗಳು ಜನವರಿ 12 ರಂದು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಅವರು ತಮ್ಮನ್ನು ದೋಷಿ ಎಂದು ತೀರ್ಮಾನಿಸಿರುವುದನ್ನು ಮತ್ತು ತಮಗೆ ವಿಧಿಸಲಾದ ಶಿಕ್ಷೆಯನ್ನು ಅಮಾನತುಗೊಳಿಸಬೇಕು ಎಂದು ಕೋರಿದ್ದರು. ಜೊತೆಗೆ ತಮ್ಮ ಮೇಲ್ಮನವಿ ಬಾಕಿ ಇದ್ದು ತಮ್ಮನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು.  

Kannada Bar & Bench
kannada.barandbench.com