ಮಾನಸಿಕ ಆರೋಗ್ಯ ಕಾಯಿದೆ ಬಗ್ಗೆ ಪೊಲೀಸ್ ಅಧಿಕಾರಿಗಳು ಸಂವೇದನಾಶೀಲರಾಗಿರುವಂತೆ ನೋಡಿಕೊಳ್ಳಿ: ಕೇರಳ ಹೈಕೋರ್ಟ್ ನಿರ್ದೇಶನ

ಬೈಪೋಲಾರ್ ಡಿಸಾರ್ಡರ್ (ದ್ವಿಧ್ರುವಿ ಅಸ್ವಸ್ಥತೆ) ಮತ್ತು ಖಿನ್ನತೆಯಿಂದ ಬಳಲುತ್ತಿದ್ದ ಜೊತೆಗೆ ಆತ್ಮಹತ್ಯೆ ಪ್ರವೃತ್ತಿ ಇರುವ ವ್ಯಕ್ತಿಯ ಪರವಾಗಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ವೇಳೆ ಈ ಸೂಚನೆ ನೀಡಿದೆ ನ್ಯಾಯಾಲಯ.
Kerala High Court, Mental health
Kerala High Court, Mental health

ಮಾನಸಿಕ ಅಸ್ವಸ್ಥರ ಕುಂದುಕೊರತೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವುದಕ್ಕಾಗಿ ಮಾನಸಿಕ ಆರೋಗ್ಯ ಕಾಯಿದೆ, 2017 ರ ನಿಬಂಧನೆಗಳ ಬಗ್ಗೆ ಎಲ್ಲಾ ಪೊಲೀಸ್ ಅಧಿಕಾರಿಗಳು ಸಂವೇದನಾಶೀಲರಾಗಿರುವಂತೆ ನೋಡಿಕೊಳ್ಳಬೇಕು ಎಂದು ಕೇರಳ ಹೈಕೋರ್ಟ್ ಇತ್ತೀಚೆಗೆ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ನಿರ್ದೇಶನ ನೀಡಿದೆ [xxxx ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣ].

ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ವಿ ರಾಮ್‌ಕುಮಾರ್ ನಂಬಿಯಾರ್ ಅವರು ನೀಡಿದ ಸಲಹೆ ಆಧರಿಸಿ ನ್ಯಾ. ಕೆ ಬಾಬು ಅವರು ಸೂಚನೆ ನೀಡಿದ್ದಾರೆ.

“ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಲ್ಲಿರುವ ಪೊಲೀಸ್ ಅಧಿಕಾರಿಗಳು ಮಾನಸಿಕ ಆರೋಗ್ಯ ಕಾಯಿದೆ- 2017 ರ ನಿಬಂಧನೆಗಳಿಗೆ ಸಂಬಂಧಿಸಿದಂತೆ ಸಂವೇದನಾಶೀಲರಾಗಿದ್ದಾರೆ ಎಂದು ಖಚಿತಪಡಿಸಿಕೊಳ್ಳಬೇಕು. ಇದರಿಂದಾಗಿ ಮಾನಸಿಕ ಅಸ್ವಸ್ಥರ ಕುಂದುಕೊರತೆ ನಿವಾರಿಸುವ ಮಾರ್ಗವಾಗಲಿರುವ ನಿಯಮಾವಳಿಗಳ ಸೂಕ್ತ, ತ್ವರಿತ ಹಾಗೂ ಪರಿಣಾಮಕಾರಿ ಪಾಲನೆಯಾಗುವಂತೆ ನೋಡಿಕೊಳ್ಳಬಹುದು” ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಬೈಪೋಲಾರ್ ಡಿಸಾರ್ಡರ್ (ದ್ವಿಧ್ರುವೀ ಅಸ್ವಸ್ಥತೆ) ಮತ್ತು ಖಿನ್ನತೆಯಿಂದ ಬಳಲುತ್ತಿದ್ದ ಜೊತೆಗೆ ಆತ್ಮಹತ್ಯೆ ಪ್ರವೃತ್ತಿ ಇರುವ ವ್ಯಕ್ತಿಯ ಪರವಾಗಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ವೇಳೆ ಪೀಠ ಈ ಸೂಚನೆ ನೀಡಿದೆ.

ಐಪಿಸಿ ಸೆಕ್ಷನ್‌ 377 ಮತ್ತು ಪೋಕ್ಸೊ ಕಾಯಿದೆ- 2012ರ ಸೆಕ್ಷನ್ 9 ಮತ್ತು 10ರ ಅಡಿ ಆರೋಪ ಎದುರಿಸುತ್ತಿದ್ದ ಮಾನಸಿಕ ಅಸ್ವಸ್ಥರೊಬ್ಬರು ತಮ್ಮ ಮಾನಸಿಕ ಸ್ಥಿತಿಯ ಕಾರಣಕ್ಕೆ ವಿಚಾರಣೆ ಎದುರಿಸಲು ಅಥವಾ ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್‌ ಮೊಕದ್ದಮೆ ಸಮರ್ಥಿಸಿಕೊಳ್ಳಲು ಯೋಗ್ಯರಲ್ಲ ಎಂದು ವಾದಿಸಲಾಗಿತ್ತು.

ಕ್ರಿಮಿನಲ್ ಪ್ರಕರಣದಲ್ಲಿ ಆರೋಪಿಯು ಅಸ್ವಸ್ಥನಾಗಿರುವ ಪ್ರಕರಣಗಳಲ್ಲಿ ಅನುಸರಿಸಬೇಕಾದ ಕಾರ್ಯವಿಧಾನದ ಬಗ್ಗೆ ವ್ಯವಹರಿಸುವ  ಸಿಆರ್‌ಪಿಸಿ ಸೆಕ್ಷನ್ 328 ರ ಅಡಿಯಲ್ಲಿ ಅವರ ಪತ್ನಿ ಮೂಲಕ ಸಲ್ಲಿಸಿದ ಅರ್ಜಿಯನ್ನು ಪೋಕ್ಸೊ ವಿಶೇಷ ನ್ಯಾಯಾಲಯ ಈ ಹಿಂದೆ ತಿರಸ್ಕರಿಸಿತ್ತು. ಈ ಕಾರಣಕ್ಕೆ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಮಾನಸಿಕ ಅಸ್ವಸ್ಥತೆ ಮತ್ತು ಅರ್ಜಿದಾರರಿಗೆ ಪ್ರತಿವಾದ ಮಂಡಿಸಲು ಇರುವ ಅಸಮರ್ಥತೆಯನ್ನು ಸಾಬೀತುಪಡಿಸುವ ಸಾಕ್ಷ್ಯಾಧಾರಗಳನ್ನು ವಿಚಾರಣಾ ನ್ಯಾಯಾಲಯ ಪರಿಶೀಲಿಸಿಲ್ಲ ಎಂಬುದು ಅರ್ಜಿದಾರರ ಪರ ವಕೀಲರ ವಾದವಾಗಿತ್ತು. ಅಲ್ಲದೆ, ಇಂತಹ ಪ್ರಕರಣಗಳಲ್ಲಿ, ಮಾನಸಿಕ ಆರೋಗ್ಯ ಕಾಯಿದೆ, 2017 ರ ಸೆಕ್ಷನ್ 105ರ ಅನ್ವಯ ಪ್ರಕರಣವನ್ನು ತಜ್ಞರ ಮಂಡಳಿಗೆ ಶಿಫಾರಸ್ಸು ಮಾಡಬೇಕಿತ್ತು, ಆದರೆ ಹಾಗೆ ಮಾಡಿಲ್ಲ ಎಂದು ಆಕ್ಷೇಪಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಿಕಸ್‌ ಕ್ಯೂರಿ ಅವರು ಮಾನಸಿಕ ಆರೋಗ್ಯ ಕಾಯಿದೆ, 2017 ರ ಸೆಕ್ಷನ್ 105 ಅನ್ನು ಅವಲಂಬಿಸಿ ಪ್ರಕರಣವನ್ನು ತಜ್ಞರ ಮಂಡಳಿಗೆ ಹೆಚ್ಚಿನ ಪರಿಶೀಲನೆಗಾಗಿ ವಿಚಾರಣಾ ನ್ಯಾಯಾಲಯದ ಕಡೆಯಿಂದ ಉಲ್ಲೇಖಿಸುವುದು ಕಡ್ಡಾಯವಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಈ ಪ್ರಕ್ರಿಯೆಯನ್ನು ವಿಚಾರಣಾ ನ್ಯಾಯಾಲಯ ಮಾಡಿಲ್ಲದ ಕಾರಣ, ಹೈಕೋರ್ಟ್ ಪ್ರಕರಣದಲ್ಲಿ ಮಧ್ಯಪ್ರವೇಶಿಸಬೇಕು ಎಂದು ಅವರು ಹೇಳಿದ್ದರು.

ಅರ್ಜಿದಾರರ ವೈದ್ಯಕೀಯ ದಾಖಲೆಗಳು ಮತ್ತು ಪೂರ್ವನಿದರ್ಶನಗಳನ್ನು ಪರಿಶೀಲಿಸಿದ ಹೈಕೋರ್ಟ್ ಅಂತಿಮವಾಗಿ ಅಮಿಕಸ್ ಕ್ಯೂರಿ ಸಲ್ಲಿಸಿದ ವಾದಗಳನ್ನು ಅಂಗೀಕರಿಸಿ ಅರ್ಜಿಯನ್ನು ಪುರಸ್ಕರಿಸಿತು.

ಸಿಆರ್‌ಪಿಸಿ ಮತ್ತು ಮಾನಸಿಕ ಆರೋಗ್ಯ ಕಾಯಿದೆ- 2017ರ ಸೆಕ್ಷನ್ 105ರಲ್ಲಿ ಪರಿಗಣಿಸಲಾದ ಕಾರ್ಯವಿಧಾನವನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಪ್ರಕರಣ ಮರುಪರಿಶೀಲಿಸಲು ಮತ್ತು ಮುಂದುವರಿಯಲು ವಿಚಾರಣಾ ನ್ಯಾಯಾಲಯಕ್ಕೆ ಪೀಠವು ಆದೇಶಿಸಿತು.

Related Stories

No stories found.
Kannada Bar & Bench
kannada.barandbench.com