ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ಮಾಂಸದ ಬಳಕೆ ಮತ್ತು ದ್ವೀಪದ ಡೈರಿ ಫಾರಂ ಮುಚ್ಚುವ ಲಕ್ಷದ್ವೀಪ ಆಡಳಿತದ ಆದೇಶಕ್ಕೆ ಕೇರಳ ಹೈಕೋರ್ಟ್ ಮಂಗಳವಾರ ಮಧ್ಯಂತರ ತಡೆ ನೀಡಿದೆ.
ಆಡಳಿತಾತ್ಮಕ ಬದಲಾವಣೆಗಳ ವಿರುದ್ಧ ಕವರಟ್ಟಿ ದ್ವೀಪದ ವಕೀಲ ಅಜ್ಮಲ್ ಅಹ್ಮದ್ ಅವರು ಸಲ್ಲಿಸಿದ್ದ ಅರ್ಜಿಯ ಮೇರೆಗೆ ಮುಖ್ಯ ನ್ಯಾಯಮೂರ್ತಿ ಎಸ್ ಮಣಿಕುಮಾರ್ ಮತ್ತು ನ್ಯಾಯಮೂರ್ತಿ ಶಾಜಿ ಪಿ ಚಾಲಿ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಜಾರಿಗೊಳಿಸಿತು. ಅರ್ಜಿದಾರರ ಪರ ವಕೀಲ ಪೀಯುಷ್ ಕೊಟ್ಟಂ ಅವರು ಇದನ್ನು ʼಬಾರ್ ಅಂಡ್ ಬೆಂಚ್ʼಗೆ ದೃಢಪಡಿಸಿದ್ದಾರೆ.
ಶಾಲಾಮಕ್ಕಳಿಗೆ ಮಾಂಸದೂಟ, ಡೈರಿ ಫಾರಂಗಳಿಗೆ ನಿರ್ಬಂಧ ಹೇರಿದ ಕ್ರಮ ಸಂವಿಧಾನದ 19 ಮತ್ತು 300 ಎ ಅಡಿಯಲ್ಲಿ ದ್ವೀಪದ ಜನರಿಗೆ ದೊರೆತಿರುವ ಜನಾಂಗೀಯ ಸಂಸ್ಕೃತಿ, ಪರಂಪರೆ, ಆಹಾರ ಪದ್ದತಿಯ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ. 1950ರಿಂದಲೂ ಲಕ್ಷದ್ವೀಪ, ಪೂರ್ವ ಪ್ರಾಥಮಿಕ ಹಂತದಿಂದ ಪ್ರೌಢಶಾಲಾ ಹಂತದ ಮಕ್ಕಳಿಗೆ ಮಧ್ಯಾಹ್ನ ಬೇಯಿಸಿದ ಮಾಂಸ ಮತ್ತಿತರ ಆಹಾರವನ್ನು ನೀಡುತ್ತಾ ಬಂದಿದೆ. 2009ರಿಂದ, 12ನೇ ತರಗತಿಯವರೆಗೆ ಈ ಸೌಲಭ್ಯ ವಿಸ್ತರಿಸಲಾಗಿದೆ. ಆದರೆ ಯಾವುದೇ ಸಮಾಲೋಚನೆ ಇಲ್ಲದೆ ಮಾಂಸದೂಟ ಇಲ್ಲದ ಹೊಸ ಮೆನು ಜಾರಿಗೆ ತರಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಹೊಸ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಅವರು ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಬೆಂಗಳೂರಿನ 'ಅಕ್ಷಯ ಪಾತ್ರಾ' ಹೆಸರಿನ ಎನ್‌ಜಿಒಗೆ ವಹಿಸಲು ಯೋಜಿಸುತ್ತಿದ್ದಾರೆ ಎಂದು ಅರ್ಜಿದಾರರು ದಾಖಲೆಗಳ ಸಹಿತ ವಿವರಿಸಿದ್ದಾರೆ. ಹೊಸ ಮೆನು ಜಾರಿಗೆ ಬಂದ ಬಳಿಕ ಬಿಸಿಯೂಟ ತಯಾರಿಸುತ್ತಿದ್ದ 105 ಮಂದಿ ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. ಬಿಸಿಯೂಟ ಯೋಜನೆಯನ್ನು ಎನ್‌ಜಿಒ ಒಂದಕ್ಕೆ ವಹಿಸುವ ಪ್ರಸ್ತಾಪ ಕಾನೂನುಬಾಹಿರ ಮತ್ತು ಖಂಡನೀಯ ಎಂದು ಅರ್ಜಿದಾರರು ವಾದಿಸಿದರು.
ಎಲ್ಲಾ ಡೈರಿ ಫಾರಂಗಳನ್ನು ಮುಚ್ಚುವಂತೆ ಪಶುಸಂಗೋಪನಾ ಇಲಾಖೆ ಮೇ 21ರಂದು ನಿರ್ದೇಶನ ನೀಡಿದೆ. ಎತ್ತು ಮತ್ತು ಕರುಗಳನ್ನು ಹರಾಜಿನ ಮೂಲಕ ವಿಲೇವಾರಿ ಮಾಡುವಂತೆ ಪಶು ವೈದ್ಯಕೀಯ ಘಟಕಗಳಿಗೆ ಆದೇಶಿಸಿದೆ. ಹಸು, ಕರು, ಎತ್ತು ಇತ್ಯಾದಿಗಳ ವಧೆ ನಿಷೇಧಿಸುವ 2021ರ ಪ್ರಾಣಿ ಸಂರಕ್ಷಣೆ (ನಿಯಂತ್ರಣ) ನಿಯಮಾವಳಿಯನ್ನು ಜಾರಿಗೆ ತರುವ ಉದ್ದೇಶದಿಂದ ಡೈರಿ ಫಾರಂಗಳನ್ನು ಮುಚ್ಚಲಾಗುತ್ತಿದೆ. ಗುಜರಾತ್‌ನಂತಹ ರಾಜ್ಯಗಳಿಂದ ಖಾಸಗಿ ಕಂಪೆನಿಗಳು ಉತ್ಪಾದಿಸುವ ಹಾಲಿನ ಉತ್ಪನ್ನಗಳನ್ನು ಖರೀದಿಸಲು ಅನುವಾಗುವಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅರ್ಜಿದಾರರು ವಾದಿಸಿದರು. ಪ್ರಸ್ತುತ ಕೇಂದ್ರ ಸರ್ಕಾರ ಬೇರೆ ರಾಜ್ಯಗಳಲ್ಲಿ ಪಶುಸಂಗೋಪನೆ ಉತ್ತೇಜಿಸುವ ಉದ್ದೇಶದಿಂದ ಬೇರೆ ರಾಜ್ಯಗಳಲ್ಲಿ ಡೈರಿ ಕೃಷಿಯನ್ನು ಉತ್ತೇಜಿಸುತ್ತಿದ್ದು ಪಶು ಸಂಗೋಪಕರ ಸ್ವಾವಲಂಬನೆಗೆ ಸಹಾಯ ಮಾಡುತ್ತಿದೆ ಎಂದು ಅವರು ವಿವರಿಸಿದರು.
ನ್ಯಾಯಾಲಯ, ಬಿಸಿಯೂಟದ ಮೆನು ಬದಲಿಸಿರುವ ಆಡಳಿತಗಾರರ ನಿರ್ಧಾರವನ್ನು ಪ್ರಶ್ನಿಸಿತು. ಜೊತೆಗೆ ದ್ವೀಪವಾಸಿಗಳ ಸಾಂಪ್ರದಾಯಿಕ ಆಹಾರ ಪದ್ದತಿ ಅಡ್ಡಿಪಡಿಸುವುದರಿಂದ ಆಗುವ ಪ್ರಯೋಜನಗಳೇನು ಎಂದು ಕೇಳಿತು.
ಈ ಕುರಿತು ಪ್ರತಿವಾದಿಗಳು “ಮಾಂಸ ಶೇಖರಣೆಗೆ ಸೌಲಭ್ಯದ ಕೊರತೆ ಇದೆ ಹಾಗೂ ಲಾಭದಾಯಕವಲ್ಲದ ಕಾರಣ ಡೈರಿ ಫಾರಂಗಳನ್ನು ಮುಚ್ಚಲಾಗಿದೆ” ಎಂದು ಸಮರ್ಥಿಸಿಕೊಂಡರು.
ಉದ್ಯೋಗಕ್ಕಾಗಿ ಲಕ್ಷದ್ವೀಪದ ಜನ ಬಹುತೇಕ ಸರ್ಕಾರಿ ಕೆಲಸವನ್ನೇ ಅವಲಂಬಿಸಿದ್ದಾರೆ. ಆದರೆ ಆಡಳಿತಗಾರರ ʼತುಘಲಕ್ ನೀತಿʼಯಿಂದಾಗಿ ಕಳೆದ ಜನವರಿಯಿಂದ 300 ಮಂದಿ ಉದ್ಯೋಗ ಕಳೆದುಕೊಂಡಿದ್ದು ಅವರಲ್ಲಿ ಪ್ರಾಥಮಿಕ ಶಾಲೆ ಶಿಕ್ಷಕರು, ಬಿಸಿಯೂಟ ತಯಾರಕರು ಹಾಗೂ ಪಶುಸಂಗೋಪನೆ ಮತ್ತು ಕೃಷಿ ಇಲಾಖೆ ಸಿಬ್ಬಂದಿ ಸೇರಿದ್ದಾರೆ ಎಂದು ವಾದಿಸಿದರು.
ಅಲ್ಲದೆ ಉದ್ದೇಶಿತ ಲಕ್ಷದ್ವೀಪ ಅಭಿವೃದ್ಧಿ ಪ್ರಾಧಿಕಾರ ನಿಯಂತ್ರಣ ನಿಯಮಾವಳಿ ಮಸೂದೆ, ಲಕ್ಷದ್ವೀಪ ಸಾಮಾಜಿಕ ವಿರೋಧಿ ಚಟುವಟಿಕೆಗಳ ನಿಯಂತ್ರಣ ವಿಧೇಯಕ, ಲಕ್ಷದ್ವೀಪ ಪ್ರಾಣಿ ಸಂರಕ್ಷಣಾ ನಿಯಂತ್ರಣ ನಿಯಮಾವಳಿಗಳನ್ನು ಜಾರಿಗೆ ತರದಂತೆ ನಿರ್ದೇಶನ ನೀಡಬೇಕು. ಅಂತಹ ಕರಡು ನಿಯಮಾವಳಿಗಳ ಪರಿಣಾಮವನ್ನು ಅರ್ಥ ಮಾಡಿಕೊಳ್ಳದಿರಲಿ ಮತ್ತು ನಿಯಮ ಜಾರಿಗೊಳಿಸುವುದರ ವಿರುದ್ಧ ಆಕ್ಷೇಪಣೆ ಸಲ್ಲಿಸದಿರಲಿ ಎಂಬ ಉದ್ದೇಶದಿಂದ ಸ್ಥಳೀಯ ಭಾಷೆಗಳಾದ ʼಮಲಯಾಳಂʼ, ಅಥವಾ ʼಮಹಲ್ʼನಲ್ಲಿ ಅವುಗಳನ್ನು ಪ್ರಕಟಿಸಿಲ್ಲ ಎಂದು ತಿಳಿಸಲಾಗಿದೆ.
ಅರ್ಜಿದಾರರ ವಾದವನ್ನು ಮನ್ನಿಸಿದ ನ್ಯಾಯಾಲಯ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ಮಾಂಸದ ಬಳಕೆ ಮತ್ತು ದ್ವೀಪದ ಡೈರಿ ಫಾರಂ ಮುಚ್ಚುವ ಲಕ್ಷದ್ವೀಪ ಆಡಳಿತದ ಆದೇಶಕ್ಕೆ ಕೇರಳ ಹೈಕೋರ್ಟ್ ಮಧ್ಯಂತರ ತಡೆ ನೀಡಿತು. ಪ್ರತ್ಯುತ್ತರ ಅಫಿಡವಿಟ್ ಸಲ್ಲಿಸಲು ಪೀಠ ಕೇಂದ್ರ ಸರ್ಕಾರಕ್ಕೆ ಅವಕಾಶ ನೀಡಿದ್ದು ಅಲ್ಲಿಯವರೆಗೆ ಈ ಎರಡು ನಿರ್ದಿಷ್ಟ ವಿಚಾರಗಳ ಕುರಿತಂತೆ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಹೇಳಿದೆ. ಒಂದು ವಾರದ ಬಳಿಕ ಪ್ರಕರಣ ವಿಚಾರಣೆಗೆ ಬರುವ ಸಾಧ್ಯತೆಗಳಿವೆ.