
ನಿಷೇಧಿತ ಜಾಹೀರಾತು ಪ್ರಕರಣದಲ್ಲಿ ಪತಂಜಲಿ ಆಯುರ್ವೇದ ಸಂಸ್ಥೆಯ ಪ್ರವರ್ತಕರಾದ ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳಿಗೆ ಕೇರಳ ಹೈಕೋರ್ಟ್ ಗುರುವಾರ ತಡೆ ನೀಡಿದೆ.
ಪಾಲಕ್ಕಾಡ್‌ನ ಜೆಎಫ್‌ಸಿಎಂ ನ್ಯಾಯಾಲಯ IIರ ಮುಂದೆ ಬಾಕಿ ಇದ್ದ ವಿಚಾರಣೆಗೆ ನ್ಯಾಯಮೂರ್ತಿ ವಿ ಜಿ ಅರುಣ್ ಅವರಿದ್ದ ಏಕಸದಸ್ಯ ಪೀಠ ಮೂರು ತಿಂಗಳ ಅವಧಿಗೆ ತಡೆ ನೀಡಿತು.
ಸೆಪ್ಟೆಂಬರ್ 30, 2023 ರಂದು ಮಾತೃಭೂಮಿ ಪತ್ರಿಕೆಯಲ್ಲಿ 'ಮುಕ್ತ ವಟಿ ವಟಿ ಎಕ್ಸ್‌ಟ್ರಾ ಪವರ್' ಹೆಸರಿನ ಉತ್ಪನ್ನಕ್ಕಾಗಿ ಜಾಹೀರಾತು ಪ್ರಕಟಿಸಲಾಗಿದ್ದು ಇದು 1954ರ ಔಷಧಗಳು ಮತ್ತು ಮಾಂತ್ರಿಕ ಪರಿಹಾರ (ಆಕ್ಷೇಪಾರ್ಹ ಜಾಹೀರಾತುಗಳು) ಕಾಯಿದೆಯ ಸೆಕ್ಷನ್‌ಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಪಾಲಕ್ಕಾಡ್ ಡ್ರಗ್ ಇನ್ಸ್‌ಪೆಕ್ಟರ್ ಸಲ್ಲಿಸಿದ ದೂರಿನ ಆಧಾರದ ಮೇಲೆ ಮೊಕದ್ದಮೆ ಹೂಡಲಾಗಿತ್ತು.
ರೋಗಿಗಳು ಔಷಧಿಗಳನ್ನು ಖರೀದಿಸುವಂತೆ ಪ್ರಚೋದಿಸುವ ಸಲುವಾಗಿ ಈ ಜಾಹೀರಾತನ್ನು ಪ್ರಕಟಿಸಲಾಗಿದೆ. ಇದು ವೈದ್ಯರ ನಿರ್ದೇಶನವಿಲ್ಲದೆ ಸ್ವಯಂ ಔಷಧ ಬಳಕೆಗೆ ಕಾರಣವಾಗುತ್ತದೆ. ಇದು ವ್ಯಕ್ತಿಗಳ ಆರೋಗ್ಯದ ಮೇಲೆ ಅನಪೇಕ್ಷಿತ ಮತ್ತು ಸರಿಪಡಿಸಲಾಗದ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಲಾಗಿತ್ತು.
ನಂತರ ತಮ್ಮ ವಿರುದ್ಧದ ವಿಚಾರಣೆ ರದ್ದುಗೊಳಿಸುವಂತೆ ಪತಂಜಲಿ, ಬಾಬಾ ರಾಮ್‌ದೇವ್ ಹಾಗೂ ಬಾಲಕೃಷ್ಣ ಹೈಕೋರ್ಟ್ ಮೊರೆ ಹೋಗಿದ್ದರು.
ಪತಂಜಲಿ, ರಾಮದೇವ್ ಹಾಗೂ ಬಾಲಕೃಷ್ಣ ಪರವಾಗಿ ಹಿರಿಯ ವಕೀಲ ಅಜಿತ್ ಕುಮಾರ್ ವಾದ ಮಂಡಿಸಿದರು. ಕ್ವಿಂಟ್ ಲಾ ಪಾರ್ಟ್‌ನರ್ಸ್‌ನ ವಕೀಲರಾದ ಸಿರಿಯಾಕ್ ಟಾಮ್, ಶಿವಶಂಕರ್ ಮತ್ತು ಅನಂತು ಬಹುಲೇಯನ್, ಡಿ & ವೈ ಲಾ ಚೇಂಬರ್ಸ್‌ನ ವಕೀಲರಾದ ಯಜ್ಞವಾಲ್ಕ್ಯ ಸಿಂಗ್ ಮತ್ತು ವಕೀಲ ಸಂಜಯ್ ಸಿಂಗ್ ಅವರೂ ನೆರವಾಗಿದ್ದರು.