ಪತಂಜಲಿ ಪ್ರಕರಣ: ವಾರೆಂಟ್ ಹಿಂಪಡೆಯಲು ಕೋರಿ ಕೇರಳ ನ್ಯಾಯಾಲಕ್ಕೆ ಬಾಬಾ ರಾಮದೇವ್, ಬಾಲಕೃಷ್ಣ ಮೊರೆ

ಇಂತದ್ದೇ ದಿಕ್ಕು ತಪ್ಪಿಸುವ ಜಾಹಿರಾತುಗಳಿಗೆ ಸಂಬಂಧಿಸಿದಂತೆ ಬಾಬಾ ರಾಮದೇವ್, ಪತಂಜಲಿ ಹಾಗೂ ಆಚಾರ್ಯ ಬಾಲಕೃಷ್ಣ ಮಾತ್ರವೇ ಅಲ್ಲದೆ ಸೂಕ್ತ ಕ್ರಮ ಕೈಗೊಳ್ಳದ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಈ ಹಿಂದೆ ಛೀಮಾರಿ ಹಾಕಿತ್ತು.
Baba Ramdev and Acharya Balakrishna
Baba Ramdev and Acharya BalakrishnaImage source: Facebook
Published on

ಪತಂಜಲಿಯ ದಿಕ್ಕು ತಪ್ಪಿಸುವ ಜಾಹೀರಾತುಗಳ ಕುರಿತಾದ ಪ್ರಕರಣದ ವಿಚಾರಣೆಗೆ ಹಾಜರಾಗದ ತಮ್ಮ ವಿರುದ್ಧ ಹೊರಡಿಸಿದ್ದ ಬಂಧನ ವಾರೆಂಟ್‌ ಹಿಂಪಡೆಯುವಂತೆ ಕೋರಿ ಪತಂಜಲಿ ಆಯುರ್ವೇದ ಸಂಸ್ಥೆಯ ಸ್ಥಾಪಕರಾದ ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರು ಕೇರಳದ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ [ಪಾಲಕ್ಕಾಡ್‌ ಔಷಧ ಪರೀಕ್ಷಕರು ಮತ್ತು ದಿವ್ಯಾ ಫಾರ್ಮಸಿ ನಡುವಣ ಪ್ರಕರಣ].

ಆರೋಪಿಗಳು ನ್ಯಾಯಾಲಯದ ವಿಚಾರಣೆಗಳಿಗೆ ಖುದ್ದು ಹಾಜರಾಗದೆ ಅವರ ವಕೀಲರಿಂದ ಪ್ರತಿನಿಧಿತವಾಗಲು ಅವಕಾಶ ಕಲ್ಪಿಸುವ ವಿಚಾರಣಾ ನ್ಯಾಯಾಲಯಗಳ ವಿವೇಚನಾಧಿಕಾರಕ್ಕೆ ಸಂಬಂಧಿಸಿದ  ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 205ರ ಅಡಿಯಲ್ಲಿ ಇವರಿಬ್ಬರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.  

Also Read
ಸುಪ್ರೀಂ ಕಪಾಳಮೋಕ್ಷ: ದೊಡ್ಡದಾಗಿ ಕ್ಷಮೆಯಾಚನೆ ಪ್ರಕಟಿಸಿದ ಪತಂಜಲಿ

ಜನವರಿ 16 ರಂದು ನಡೆದ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದ್ದರೂ ಅದನ್ನು ಪಾಲಿಸದ ಹಿನ್ನೆಲೆಯಲ್ಲಿ ಪಾಲಕ್ಕಾಡ್‌ನ ಜೆಎಫ್‌ಸಿಎಂ ನ್ಯಾಯಾಲಯ II ಈ ಹಿಂದೆ ಜಾಮೀನು ನೀಡಬಹುದಾದ ವಾರೆಂಟ್‌ ಹೊರಡಿಸಿ ಫೆಬ್ರವರಿ 1ಕ್ಕೆ ವಿಚಾರಣೆ ಮುಂದೂಡಿತ್ತು. ಫೆ.1ರಂದು ಕೂಡ ಆರೋಪಿಗಳು ಹಾಜರಾಗದ ಹಿನ್ನೆಲೆಯಲ್ಲಿ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿತ್ತು. ಬಳಿಕ ಫೆಬ್ರವರಿ 3ಕ್ಕೆ ನಂತರ ಇಂದಿಗೆ (ಫೆಬ್ರವರಿ 6) ಪ್ರಕರಣ ಮುಂದೂಡಲಾಗಿತ್ತು.

ತಮ್ಮ ವಿರುದ್ಧದ ಜಾಮೀನು ರಹಿತ ವಾರಂಟ್ ಹಿಂಪಡೆಯಲು ಮತ್ತು ನ್ಯಾಯಾಲಯದ ವಿಚಾರಣೆಯ ವೇಳೆ ಖುದ್ದು ಹಾಜರಿಯಿಂದ ವಿನಾಯಿತಿ ನೀಡಲು ಕೋರಿ ರಾಮದೇವ್ ಮತ್ತು ಬಾಲಕೃಷ್ಣ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಂದು ನಡೆಯಲಿದೆ.

ಪತಂಜಲಿ ಆಯುರ್ವೇದದ ಅಂಗಸಂಸ್ಥೆಯಾದ ದಿವ್ಯಾ ಫಾರ್ಮಸಿ ವಿರುದ್ಧ ಪಾಲಕ್ಕಾಡ್‌ನ ಡ್ರಗ್ಸ್ ಇನ್ಸ್‌ಪೆಕ್ಟರ್ ನೀಡಿದ ದೂರಿನ ಮೇರೆಗೆ ಪಾಲಕ್ಕಾಡ್ ವಿಚಾರಣಾ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು.

ದಿವ್ಯಾ ಫಾರ್ಮಸಿ ಪ್ರಕಟಿಸಿದ ಜಾಹೀರಾತುಗಳು 1954 ರ ಔಷಧಗಳು ಮತ್ತು ಮಾಂತ್ರಿಕ ಪರಿಹಾರ (ಆಕ್ಷೇಪಾರ್ಹ ಜಾಹೀರಾತುಗಳು) ಕಾಯಿದೆಯ ಸೆಕ್ಷನ್‌ಗಳನ್ನು ಉಲ್ಲಂಘಿಸಿವೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.

Also Read
ಪತಂಜಲಿ, ಬಾಬಾ ರಾಮದೇವ್‌ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣ ಕೈಬಿಟ್ಟ ಸುಪ್ರೀಂ ಕೋರ್ಟ್

ದಿವ್ಯಾ ಫಾರ್ಮಸಿ ಸಂಸ್ಥೆಯು ಅಲೋಪತಿ ಸೇರಿದಂತೆ ಆಧುನಿಕ ಔಷಧವನ್ನು ಅವಹೇಳನಗೊಳಿಸಿ ಜಾಹೀರಾತು ಪ್ರಕಟಿಸುತ್ತಿದೆ ಮತ್ತು ರೋಗಗಳನ್ನು ಗುಣಪಡಿಸುವ ಬಗ್ಗೆ ಆಧಾರರಹಿತ ಹೇಳಿಕೆಗಳನ್ನು ನೀಡುತ್ತಿರುವ ಹಿನ್ನೆಲೆಯಲ್ಲಿ ಕೇರಳದ ವಿವಿಧೆಡೆ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು.  ಅಂತಹ ಒಂದು ಪ್ರಕರಣ  ಕೋಝಿಕ್ಕೋಡ್‌  ನ್ಯಾಯಾಲಯದಲ್ಲಿ ವಿಚಾರಣೆ ಎದುರು ನೋಡುತ್ತಿದೆ.

ಇಂತದ್ದೇ ದಿಕ್ಕು ತಪ್ಪಿಸುವ ಜಾಹಿರಾತುಗಳಿಗೆ ಸಂಬಂಧಿಸಿದಂತೆ ಬಾಬಾ ರಾಮದೇವ್‌, ಪತಂಜಲಿ ಹಾಗೂ ಆಚಾರ್ಯ ಬಾಲಕೃಷ್ಣ ಮಾತ್ರವಲ್ಲದೆ ಸೂಕ್ತ ಕ್ರಮ ಕೈಗೊಳ್ಳದ ಕೇಂದ್ರ ಸರ್ಕಾರಕ್ಕೂ ಸುಪ್ರೀಂ ಕೋರ್ಟ್‌ ಈ ಹಿಂದೆ ಛೀಮಾರಿ ಹಾಕಿತ್ತು.

Kannada Bar & Bench
kannada.barandbench.com