

'ದ ಕೇರಳ ಸ್ಟೋರಿ 2 - ಗೋಸ್ ಬಿಯಾಂಡ್ ' ಚಿತ್ರದ ಬಿಡುಗಡೆಗೆ ಕೇರಳ ಹೈಕೋರ್ಟ್ ಗುರುವಾರ ತಡೆ ನೀಡಿದೆ [ಶ್ರೀದೇವ್ ನಂಬೂದಿರಿ ಮತ್ತು ಭಾರತ ಒಕ್ಕೂಟ ಇನ್ನಿತರರು ಹಾಗೂ ಸಂಬಂಧಿತ ಪ್ರಕರಣಗಳು].
ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಚಿತ್ರದ ಬಿಡುಗಡೆಗೆ ನೀಡಿದ ಪ್ರಮಾಣೀಕರಣವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರು ಮಧ್ಯಂತರ ಆದೇಶ ಹೊರಡಿಸಿದರು.
ಚಿತ್ರದ ಮೂಲಕ ಕೇರಳವನ್ನು ತಪ್ಪಾಗಿ ಬಿಂಬಿಸಲಾಗುತ್ತಿದೆ. ಕೋಮು ಸಾಮರಸ್ಯಕ್ಕೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ ಎಂದು ಅರ್ಜಿದಾರರು ಆತಂಕ ವ್ಯಕ್ತಪಡಿಸಿದ್ದರು.
ಚಿತ್ರಕ್ಕೆ ಪ್ರಮಾಣಪತ್ರ ನೀಡುವ ವೇಳೆ ಸಿಬಿಎಫ್‌ಸಿ ವಿವೇಚನೆ ಬಳಸಿಲ್ಲ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ವಿಚಾರಣೆ ವೇಳೆ ತಿಳಿಸಿದ ನ್ಯಾಯಾಲಯ, ಅರ್ಜಿದಾರರು ವ್ಯಕ್ತಪಡಿಸಿದ ಆತಂಕಗಳು ನಿಜವಾದವು ಅವು ಪರಿಗಣನೆಗೆ ಅರ್ಹ ಎಂದಿತು.
ಸಾಮಾನ್ಯವಾಗಿ ಚಿತ್ರಗಳ ಬಿಡುಗಡೆಯಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡುವುದಿಲ್ಲ. ಚಿತ್ರದ ವಿಷಯವಸ್ತು ಧಾರ್ಮಿಕ ವೈಮನಸ್ಯವನ್ನು ಪ್ರಚೋದಿಸುವ ನಿಜವಾದ ಸಾಧ್ಯತೆ ಇದ್ದರೆ ಮಧ್ಯಪ್ರವೇಶ ಅಗತ್ಯವಾಗುತ್ತದೆ ಎಂದು ಪೀಠ ನುಡಿಯಿತು.
ಅರ್ಜಿದಾರರು ಸಲ್ಲಿಸಿದ ಮರುಪರಿಶೀಲನಾ ಅರ್ಜಿಗಳನ್ನು ನಿಗದಿತ ಅವಧಿಯಲ್ಲಿ ಪರಿಗಣಿಸಿ ಸಿಬಿಎಫ್‌ಸಿ ಹೊಸ ಆದೇಶ ನೀಡಬೇಕು ಎಂದು ಅದು ತಾಕೀತು ಮಾಡಿತು. ಹೊಸ ಆದೇಶ ನೀಡುವವರೆಗೆ ಚಿತ್ರದ ಬಿಡುಗಡೆಯಾಗದಂತೆ ಪೀಠ ತಡೆ ನೀಡಿತು.
ಚಿತ್ರದ ಪ್ರಮಾಣೀಕರಣ ಮತ್ತು ಶೀರ್ಷಿಕೆ ಪ್ರಶ್ನಿಸಿ ವಕೀಲ ಅತುಲ್ ರಾಯ್ ಮೂರನೇ ಅರ್ಜಿಯನ್ನು ಸಲ್ಲಿಸಿದ್ದರು. ನ್ಯಾಯಾಲಯ ಇಂದು ರಾಯ್ ಅವರ ಅರ್ಜಿಯನ್ನು ವಜಾಗೊಳಿಸಿತು. ನಂಬೂದಿರಿ ಮತ್ತು ಮತ್ತೊಬ್ಬ ಅರ್ಜಿದಾರರಾದ ಫ್ರಾನ್ಸಿಸ್ ಅವರ ಅರ್ಜಿಗಳಿಗೆ ಸಂಬಂಧಿಸಿದಂತೆ ಮಧ್ಯಂತರ ಆದೇಶ ನೀಡಿತು.
ಹಿಂದಿನ ವಿಚಾರಣೆ ವೇಳೆ ವಿಚಾರಣೆ ಬಾಕಿ ಇರುವಾಗಲೇ ಚಿತ್ರ ಬಿಡುಗಡೆಯಾದರೆ, ಅರ್ಜಿಗಳು ನಿರರ್ಥಕ ಆಗುವ ಸಾಧ್ಯತೆ ಇದೆ ಎಂತಲೂ ತಿಳಿಸಿದ್ದ ನ್ಯಾಯಾಲಯ ‘ನಿಜ ಘಟನೆಗಳಿಂದ ಪ್ರೇರಿತ’ ಎಂಬ ಪ್ರಚಾರ ಹಾಗೂ ಶೀರ್ಷಿಕೆಯಲ್ಲಿ ರಾಜ್ಯದ ಹೆಸರು ಬಳಕೆ ಇರುವುದರಿಂದ ವಿಷಯವನ್ನು ಗಂಭೀರವಾಗಿ ಪರಿಶೀಲಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟಿತ್ತು.
ಕಣ್ಣೂರು ಮೂಲದ ಶ್ರೀದೇವ್ ನಂಬೂದಿರಿ ಅವರು ಸಲ್ಲಿಸಿದ್ದ ಅರ್ಜಿಯಲ್ಲಿ, ಚಿತ್ರದ ಶೀರ್ಷಿಕೆ ಮತ್ತು ಟೀಸರ್ ಮತ್ತು ಟ್ರೇಲರ್ ಸೇರಿದಂತೆ ಪ್ರಚಾರ ಸಾಮಗ್ರಿಗಳು ಹಿಂಸಾಚಾರವನ್ನು ಪ್ರಚೋದಿಸುವ ಮತ್ತು ಕೇರಳ ರಾಜ್ಯಕ್ಕೆ ಅನ್ಯಾಯವಾಗಿ ಕಳಂಕ ತರುವ ವಿಷಯಗಳನ್ನು ಒಳಗೊಂಡಿವೆ ಎಂದು ಆರೋಪಿಸಿದ್ದರು.
ಅಲ್ಲದೆ, ಟೀಸರ್‌ನ ಉಪಶೀರ್ಷಿಕೆಯಾದ 'ಅಬ್ ಸಹೇಂಗೆ ನಹೀಂ… ಲಡೇಂಗೆ' (ನಾವು ಇನ್ನು ಸಹಿಸುವುದಿಲ್ಲ, ಬದಲಿಗೆ ಹೋರಾಡುತ್ತೇವೆ) ಎನ್ನುವುದನ್ನು ನಂಬೂದಿರಿ ಆಕ್ಷೇಪಿಸಿದ್ದರು. ಇದು ಕೋಮು ಹಿಂಸಾಚಾರವನ್ನು ಪ್ರಚೋದಿಸುವ ಕರೆಯಾಗಿದೆ ಎಂದು ವಾದಿಸಿದ್ದರು. ಸಾರ್ವಜನಿಕ ಸುವ್ಯವಸ್ಥೆ, ಸಭ್ಯತೆ ಮತ್ತು ನೈತಿಕತೆಯ ಮೇಲೆ ಚಿತ್ರದ ಪರಿಣಾಮವನ್ನು ನಿರ್ಣಯಿಸಲು ಮಂಡಳಿಯು ವಿಫಲವಾಗಿದೆ ಎಂಬ ಕಾರಣಕ್ಕೆ ಅವರು ಸಿಬಿಎಫ್‌ಸಿ ಪ್ರಮಾಣೀಕರಣವನ್ನು ಅವರು ಪ್ರಶ್ನಿಸಿದ್ದರು.
ಚಿತ್ರದ ಬಿಡುಗಡೆಯನ್ನು ನಿಷೇಧಿಸುವಂತೆ ಕೋರಿದ್ದ ಫ್ರೆಡ್ಡಿ ವಿ ಫ್ರಾನ್ಸಿಸ್ ಅವರ ಮತ್ತೊಂದು ಅರ್ಜಿಯಲ್ಲಿ ಚಿತ್ರದ ಶೀರ್ಷಿಕೆಯಲ್ಲಿ 'ಕೇರಳ' ಎಂಬ ಪದದ ಬಳಕೆಯ ಬಗ್ಗೆ ಆಕ್ಷೇಪಿಸಲಾಗಿತ್ತು. ಇದು ಇತರ ರಾಜ್ಯಗಳ ಪಾತ್ರಗಳನ್ನು ಒಳಗೊಂಡ ಚಿತ್ರದ ಕಥೆಯ ಹೊರತಾಗಿಯೂ, ಕೇರಳವನ್ನು ಮಾತ್ರವೇ ಭಯೋತ್ಪಾದನೆ ಹಾಗೂ ಬಲವಂತದ ಧಾರ್ಮಿಕ ಮತಾಂತರದೊಂದಿಗೆ ಜೋಡಿಸಲಾಗಿದೆ ಎಂದು ವಾದಿಸಿತ್ತು.
ಚಿತ್ರ ನಿರ್ಮಾಪಕರ ಪರವಾಗಿ ವಾದಿಸಿದ ಹಿರಿಯ ವಕೀಲ ಎಸ್ ಶ್ರೀಕುಮಾರ್ ಅವರು ಪ್ರಕರಣದಲ್ಲಿ ಅರ್ಜಿದಾರರಿಗೆ ಇರುವ ವಿಚಾರಣಾ ವ್ಯಾಪ್ತಿಯ ಬಗ್ಗೆ ತಕರಾರು ತೆಗೆದಿದ್ದರು. ಅರ್ಜಿದಾರರು ಚಿತ್ರ ಬಿಡುಗಡೆಯಿಂದ ವೈಯಕ್ತಿಕವಾಗಿ ನೊಂದಿಲ್ಲ ಎಂದು ವಾದಿಸಿದ್ದರು. ಮುಂದುವರೆದು, ಅರ್ಜಿದಾರರು ಕೇವಲ ಸಾಮಾನ್ಯವಾದ ದೂರುಗಳನ್ನು ಎತ್ತುತ್ತಿದ್ದಾರೆ, ಇದು ಮೂಲಭೂತವಾಗಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ಸ್ವರೂಪದ್ದಾಗಿರಬೇಕಿತ್ತೇ ಹೊರತು ಖಾಸಗಿ ದಾವೆಯಾಗಿರಬಾರದಿತ್ತು ಎಂದು ವಾದಿಸಿದ್ದರು.
ಅಲ್ಲದೆ, ಅರ್ಜಿದಾರರು ಕೋರಿರುವ ಪರಿಹಾರವು 2 ನಿಮಿಷಗಳ ಟೀಸರ್‌ಅನ್ನು ಆಧರಿಸಿದ್ದು ಸಮರ್ಥನೀಯವಲ್ಲ ಎಂದು ವಾದಿಸಿದ್ದರು. ಚಿತ್ರವು ಎಲ್ಲಾ ಕಾನೂನು ಅವಶ್ಯಕತೆಗಳನ್ನು ಪೂರೈಸಿದ್ದು, ಬಿಡುಗಡೆಗೆ ಸಿಬಿಎಫ್‌ಸಿಯ ಅನುಮೋದನೆಯನ್ನು ಪಡೆದುಕೊಂಡಿದೆ ಎಂದು ತಿಳಿಸಿದ್ದರು.