

ವಿವಾದಾತ್ಮಕ ಚಿತ್ರ 'ದಿ ಕೇರಳ ಸ್ಟೋರಿ 2 - ಗೋಸ್ ಬಿಯಾಂಡ್' ಗೆ ನೀಡಲಾದ ಪ್ರಮಾಣೀಕರಣದ ಬಗ್ಗೆ ಕೇರಳ ಹೈಕೋರ್ಟ್ ಮಂಗಳವಾರ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯನ್ನು (ಸಿಬಿಎಫ್‌ಸಿ) ತರಾಟೆಗೆ ತೆಗೆದುಕೊಂಡಿದೆ [ಶ್ರೀದೇವ್ ನಂಬೂದಿರಿ ಮತ್ತು ಭಾರತ ಒಕ್ಕೂಟ ಇನ್ನಿತರರು ಹಾಗೂ ಸಂಬಂಧಿತ ಪ್ರಕರಣಗಳು].
ಚಿತ್ರದ ಬಿಡುಗಡೆಗೆ ತಡೆ ನೀಡುವಂತೆ ಹಾಗೂ ಅದಕ್ಕೆ ನೀಡಲಾದ ಪ್ರಮಾಣಪತ್ರ ರದ್ದುಗೊಳಿಸುವಂತೆ ಕೋರಿ ಅರ್ಜಿದಾರರಾದ ಶ್ರೀದೇವ್ ನಂಬೂದಿರಿ, ಫ್ರೆಡ್ಡಿ ವಿ. ಫ್ರಾನ್ಸಿಸ್ ಹಾಗೂ ವಕೀಲ ಅಥುಲ್ ರಾಯ್ ಅವರು ಸಲ್ಲಿಸಿದ್ದ ಮೂರು ಅರ್ಜಿಗಳ ಕುರಿತು ತೀರ್ಪು ಪ್ರಕಟಿಸುವ ಮುನ್ನ ಚಿತ್ರವನ್ನು ತಾನೇ ನಾಳೆ (ಬುಧವಾರ) ಖುದ್ದು ವೀಕ್ಷಿಸುವುದಾಗಿ ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಬೆಳಗಿನ ವಿಚಾರಣೆ ವೇಳೆ ತಿಳಿಸಿದ್ದರು.
ಆದರೆ ಚಿತ್ರವನ್ನು ನ್ಯಾಯಾಲಯಕ್ಕೆ ತೋರಿಸಲು ಹಿಂದೇಟು ಹಾಕುತ್ತಿರುವ ನಿರ್ಮಾಪಕರನ್ನು ನ್ಯಾಯಾಲಯ ಮಧ್ಯಾಹ್ನ ಮೌಖಿಕವಾಗಿ ತರಾಟೆಗೆ ತೆಗೆದುಕೊಂಡಿತು. "ಚಿತ್ರವನ್ನು ನ್ಯಾಯಾಲಯಕ್ಕೆ ತೋರಿಸುವ ಬಗ್ಗೆ ನೀವು ಉತ್ಸುಕರಾಗಿಲ್ಲ. ಈ ಅರ್ಜಿಯು ಖಾಸಗಿ ಮೊಕದ್ದಮೆಯೋ ಅಥವಾ ಸಾರ್ವಜನಿಕ ಮೊಕದ್ದಮೆಯೋ ಎಂಬುದರ ಮೇಲೆ ಸಮಸ್ಯೆಯನ್ನು ನಿರ್ಧರಿಸಬೇಕೆಂದು ನೀವು ಬಯಸುತ್ತಿದ್ದೀರಿ" ಎಂದು ಅದು ಕಿಡಿಕಾರಿತು.
ಪ್ರಸ್ತಾವಿತ ಪ್ರದರ್ಶನದ ಕುರಿತು ಸಿಬಿಎಫ್‌ಸಿ ಮತ್ತು ನಿರ್ಮಾಪಕರಿಂದ ಯಾವುದೇ ಸೂಚನೆಗಳು ಸಿಗದ ಕಾರಣ, ಅರ್ಜಿಗಳ ನಿರ್ವಹಣೆಗೆ ಸಂಬಂಧಿಸಿದ ಪ್ರಾಥಮಿಕ ಸಮಸ್ಯೆಯನ್ನು ಮೊದಲು ಪರಿಗಣಿಸುವುದಾಗಿ ನ್ಯಾಯಾಲಯ ಸೂಚಿಸಿತು.
ಕೇರಳ ಸಂಪೂರ್ಣ ಸೌಹಾರ್ದತೆಯಿಂದ ಬದುಕುತ್ತಿರುವ ರಾಜ್ಯ. ಅದನ್ನು ಕೋಮು ನೆಲೆಯಲ್ಲಿ ಬಿಂಬಿಸುವುದು ಗಂಭೀರ ಪರಿಣಾಮ ಉಂಟುಮಾಡುತ್ತದೆ. ಚಿತ್ರದ ಶೀರ್ಷಿಕೆಯಲ್ಲಿ ‘ಕೇರಳ’ ಎಂಬ ಹೆಸರನ್ನು ಬಳಸಿರುವುದರಿಂದ ಜನರ ಆತಂಕವನ್ನು ನಿರ್ಲಕ್ಷಿಸಲಾಗುವುದಿಲ್ಲ. ಚಿತ್ರವನ್ನು ನೈಜ ಘಟನೆಗಳಿಂದ ಪ್ರೇರಿತ ಎಂದು ಪ್ರಚಾರ ಮಾಡಿರುವುದರಿಂದ, ಸುಳ್ಳು ನಿರೂಪಣೆ ಬಗ್ಗೆಎ ಅರ್ಜಿದಾರರ ಆತಂಕ ಮೇಲ್ನೋಟಕ್ಕೆ ನ್ಯಾಯಸಮ್ಮತವಾದುದು ಎಂದು ಪೀಠ ಬೆಳಗಿನ ವಿಚಾರಣೆ ವೇಳೆ ನುಡಿಯಿತು.
ಚಿತ್ರದಲ್ಲಿ ತೋರಿಸಿರುವ ವಿಷಯಗಳು ತಪ್ಪು ಸಂದೇಶ ನೀಡಬಹುದಾದ್ದರಿಂದ ಸಮುದಾಯಗಳ ನಡುವೆ ಉದ್ರೇಕ ಉಂಟಾಗುವ ಭೀತಿ ಇದೆ ಎಂದು ಆತಂಕ ವ್ಯಕ್ತಪಡಿಸಿದ ನ್ಯಾಯಾಲಯ ಇಂತಹ ಸಂದರ್ಭಗಳಲ್ಲಿ ಸಿಬಿಎಫ್‌ಸಿ ಜವಾಬ್ದಾರಿಯುತವಾಗಿ ನಡೆದುಕೊಂಡು ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ನ್ಯಾಯಾಲಯ ಕಿವಿ ಹಿಂಡಿತು.
ಜಾತಿ, ಧರ್ಮ ಅಥವಾ ಇತರ ಸಮಾನ ಗುಂಪುಗಳ ವಿರುದ್ಧ ಅವಮಾನಕಾರಿ ದೃಶ್ಯಗಳು ಅಥವಾ ಪದಗಳನ್ನು ನಿರ್ಬಂಧಿಸುವ ಸಿಬಿಎಫ್‌ಸಿ ನಿಯಮಾವಳಿಗಳನ್ನು ಚಿತ್ರ ಪಾಲಿಸಿದೆಯೇ ಎಂದು ನ್ಯಾಯಾಲಯ ಪ್ರಶ್ನಿಸಿತು.
ನ್ಯಾಯಾಲಯ ಸಾಮಾನ್ಯವಾಗಿ ಕಲಾತ್ಮಕ ಅಭಿವ್ಯಕ್ತಿಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ; ಆದರೆ ಧಾರ್ಮಿಕ ವಿಷಯಗಳಿಗೆ ಸಂಬಂಧಿಸಿದಾಗ ಕಾನೂನು ಮತ್ತು ಮಾರ್ಗಸೂಚಿಗಳ ಅಡಿಯಲ್ಲಿ ನಿರ್ಬಂಧಗಳು ಅನ್ವಯವಾಗುತ್ತವೆ ಎಂದು ಅದು ಹೇಳಿತು.
ಧಾರ್ಮಿಕ ವಿಷಯವನ್ನು ಒಳಗೊಂಡಿರುವುದರಿಂದ ಈ ಪ್ರಕರಣವು ಸಾಮಾನ್ಯ ಪ್ರಕರಣವಲ್ಲ; ಗಂಭೀರ ಪರಿಶೀಲನೆ ಅಗತ್ಯವಿದೆ ಎಂದು ಅದು ತಿಳಿಸಿತು. ನಿರ್ಮಾಪಕರ ಪರವಾಗಿ ಹಿರಿಯ ವಕೀಲ ಎಸ್. ಶ್ರೀಕುಮಾರ್ ಹಾಜರಿದ್ದರು.