ಕೇರಳ ಸಚಿವ ಆಂಟೋನಿ ರಾಜು ವಿರುದ್ಧ ಒಳಉಡುಪು ಸಾಕ್ಷ್ಯ ನಾಶಪಡಿಸಿದ ಆರೋಪ: ಪ್ರಕರಣಕ್ಕೆ ಕೇರಳ ಹೈಕೋರ್ಟ್ ತಾತ್ಕಾಲಿಕ ತಡೆ

ಒಳಉಡುಪು ಸಾಕ್ಷ್ಯಗಳು ವಿಚಾರಣಾ ನ್ಯಾಯಾಲಯದ ವಶದಲ್ಲಿದ್ದು ಆಗ ಸಾಕ್ಷ್ಯ ತಿರುಚಲಾಗಿದೆ. ಹೀಗಾಗಿ ನ್ಯಾಯಾಲಯ ಅದನ್ನು ತನಿಖೆ ನಡೆಸುವ ಕುರಿತಂತೆ ವಿಚಾರಣೆ ಆರಂಭಿಸಬೇಕಿತ್ತು ಎಂಬುದು ರಾಜು ಅವರ ವಾದ.
Antony raju
Antony raju Facebook

ವಕೀಲರಾಗಿದ್ದ ವೇಳೆ ಒಳ ಉಡುಪು ಸಾಕ್ಷ್ಯ ತಿರುಚಿದ ಆರೋಪ ಎದುರಿಸುತ್ತಿದ್ದ ಆಡಳಿತಾರೂಢ ಎಡ ಪ್ರಜಾಸತ್ತಾತ್ಮಕ ರಂಗದ ಭಾಗವಾಗಿರುವ ಜನಾಧಿಪತ್ಯ ಕೇರಳ ಕಾಂಗ್ರೆಸ್ ಪಕ್ಷದ ನಾಯಕ ಹಾಗೂ ರಾಜ್ಯ ಸಾರಿಗೆ ಸಚಿವ ಆಂಟನಿ ರಾಜು ವಿರುದ್ಧದ ಪ್ರಕರಣಕ್ಕೆ ಕೇರಳ ಹೈಕೋರ್ಟ್‌ ಬುಧವಾರ ತಾತ್ಕಾಲಿಕ ತಡೆ ನೀಡಿದೆ [ಅಡ್ವೊಕೇಟ್‌ ಆಂಟೋನಿ ರಾಜು ಮತ್ತು ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಆಪಾದಿತ ಅಪರಾಧಗಳ ಬಗ್ಗೆ ಸಂಬಂಧಪಟ್ಟ ನ್ಯಾಯಾಲಯ ಅಥವಾ ಅದು ಅಧಿಕಾರ ನೀಡಿದ ಅಧಿಕಾರಿ ನೀಡುವ ದೂರಿನ ಆಧಾರದ ಮೇಲೆ ಮಾತ್ರ ಕಾನೂನು ಕ್ರಮ ಜರುಗಿಸಬೇಕೆ ವಿನಾ ಪ್ರಸ್ತುತ ಪ್ರಕರಣದಲ್ಲಿ ಮಾಡಲಾದಂತೆ ಪೊಲೀಸರಲ್ಲ ಎಂದು ರಾಜು ಪ್ರಾಥಮಿಕ ವಾದ ಮಂಡಿಸಿದ್ದಾರೆ ಎಂಬುದಾಗಿ ನ್ಯಾಯಮೂರ್ತಿ ಜಿಯಾದ್ ರಹಮಾನ್ ಎ ಎ ಅಭಿಪ್ರಾಯಪಟ್ಟರು.

“ಈ ಪ್ರಕರಣದಲ್ಲಿ ಮೇಲ್ಕಂಡ ಪ್ರಕ್ರಿಯೆಗಳನ್ನು ಪಾಲಿಸಿಲ್ಲ ಎಂದು ದಾಖಲೆಯಿಂದ ತಿಳಿದುಬಂದಿದ್ದು ಅರ್ಜಿದಾರರ ಪರವಾಗಿ ಪ್ರಕರಣ ಇರುವುದು ಮೇಲ್ನೋಟಕ್ಕೆ ನನ್ನ ಗಮನಕ್ಕೆ ಬಂದಿದೆ. ಆದ್ದರಿಂದ ಸಿಸಿ 11/2014 ಪ್ರಕರಣಕ್ಕೆ ಸಂಬಂಧಿಸಿದಂತೆ ನೆಡುಮಂಗಾಡ್‌ ಜೆಎಫ್‌ಸಿಎಂ ನ್ಯಾಯಾಲಯದ ಮುಂದಿರುವ ಎಲ್ಲಾ ಪ್ರಕ್ರಿಯೆಗಳಿಗೆ ಒಂದು ತಿಂಗಳ ಕಾಲ ತಡೆ ನೀಡಿ ಮಧ್ಯಂತರ ಆದೇಶ ನೀಡಲಾಗುತ್ತಿದೆ” ಎಂದು ನ್ಯಾಯಾಲಯ ತಿಳಿಸಿದೆ.

ತನ್ನ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸುವಂತೆ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 482 ರ ಅಡಿಯಲ್ಲಿ ರಾಜು ಸಲ್ಲಿಸಿದ ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ಒಳಉಡುಪು ಸಾಕ್ಷ್ಯಗಳು ವಿಚಾರಣಾ ನ್ಯಾಯಾಲಯದ ವಶದಲ್ಲಿದ್ದು ಆಗ ಸಾಕ್ಷ್ಯ ತಿರುಚಲಾಗಿದೆ. ಹೀಗಾಗಿ ನ್ಯಾಯಾಲಯವೇ ಅದನ್ನು ತನಿಖೆ ನಡೆಸುವ ಕುರಿತಂತೆ ವಿಚಾರಣೆ ಆರಂಭಿಸಬೇಕಿತ್ತು. ಆದರೆ ಪ್ರಸ್ತುತ ಪ್ರಕರಣದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ ಹೊರತು ನ್ಯಾಯಾಲಯವಲ್ಲ. ಹೀಗಾಗಿ ಇದು ಕಾನೂನು ಬಾಹಿರವಾಗಿದೆ. ನ್ಯಾಯಾಲಯವೇ ದೂರು ನೀಡದಿದ್ದರೆ ಅದನ್ನು ಅಪರಾಧವಾಗಿ ಪರಿಗಣಿಸಲು ನ್ಯಾಯಾಲಯಕ್ಕೆ ಯಾವುದೇ ಅಧಿಕಾರ ಇರುವುದಿಲ್ಲ ಎಂದು ರಾಜು ವಾದಿಸಿದ್ದಾರೆ.

ಸಚಿವ ರಾಜು ಅವರು ವಕೀಲ ವೃತ್ತಿಯಲ್ಲಿ ತೊಡಗಿದ್ದಾಗ 1990ರಲ್ಲಿ ನಡೆದ ಘಟನೆಯೊಂದರ ಸುತ್ತ ಪ್ರಕರಣ ಹೆಣೆದುಕೊಂಡಿದೆ. ಕೇರಳದಲ್ಲಿ ಕೆಲ ದಿನಗಳಿಂದ ವಿವಾದದ ತಿದಿ ಒತ್ತಿರುವ, ಸ್ವಾರಸ್ಯಕರ ಅಂಶಗಳಿಂದ ಕೂಡಿದ, ಚಲನಚಿತ್ರವೊಂದಕ್ಕೆ ಸ್ಪೂರ್ತಿಯನ್ನೂ ನೀಡಿದ್ದ ಪ್ರಕರಣದ ವಿವರಗಳಿಗೆ ಕೆಳಕಂಡ ಲಿಂಕ್‌ ಗಮನಿಸಿ.
Also Read
ಚೋಟುದ್ದ ಚಡ್ಡಿ ಕತೆಯೂ, ಕೇರಳ ಸಚಿವರೊಬ್ಬರ ಪ್ರತಿಷ್ಠೆಯೂ!

Related Stories

No stories found.
Kannada Bar & Bench
kannada.barandbench.com