ಕೇರಳ ಸರ್ಕಾರ ಕೆಲ ದಿನಗಳಿಂದ ಒಂದು ವಿಶಿಷ್ಟ ವಿವಾದದಲ್ಲಿ ಸಿಲುಕಿದ್ದು ಅದು ಬಸವನ ಹುಳುವಿನಂತೆ ತೆವಳುವ ಸುದೀರ್ಘ ಕಾನೂನು ಪ್ರಕ್ರಿಯೆಗಳ ಬಗ್ಗೆಯೂ ಕನ್ನಡಿ ಹಿಡಿಯುತ್ತದೆ.
ಕತೆ ಆರಂಭವಾಗುವುದು 1990ರ ಏಪ್ರಿಲ್‌ನಲ್ಲಿ. ಆಂಡ್ರ್ಯೂ ಸಾಲ್ವಟೋರ್ ಸೆರ್ವೆಲ್ಲಿ ಎಂಬ ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬ ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದ,. 61.5 ಗ್ರಾಂನಷ್ಟು ಮಾದಕವಸ್ತು ಹಶೀಶನ್ನು ತನ್ನ ಒಳ ಉಡುಪಿನಲ್ಲಿ ಇರಿಸಿಕೊಂಡಿದ್ದ ಎಂಬುದು ಆತನ ಮೇಲಿದ್ದ ಆರೋಪ. ಮಾದಕವಸ್ತು ಮತ್ತು ಅಮಲು ಪದಾರ್ಥ ನಿಯಂತ್ರಣ ಕಾಯಿದೆ- 1985ರ ಅಡಿ ಆತ ತಪ್ಪಿತಸ್ಥ ಎಂಬುದು ಸಾಬೀತಾಗಿ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಯಿತು.
ಅಲ್ಲಿಯೇ ಕತೆಗೆ ತಿರುವು ದೊರೆತದ್ದು. ಶಿಕ್ಷೆ ಪ್ರಶ್ನಿಸಿ ಕೇರಳ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ ಸೆರ್ವೆಲ್ಲಿ ತನ್ನ ದೇಹದ ಗಾತ್ರಕ್ಕಿಂತಲೂ ತಾನು ಮಾದಕವಸ್ತು ಬಚ್ಚಿಟ್ಟುಕೊಂಡಿದ್ದೆನೆನ್ನಲಾದ ಒಳ ಉಡುಪು ಚಿಕ್ಕದು ಎಂದು ಪ್ರತಿಪಾದಿಸಿದ. ಆಗ ಆತನ ಪರ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದು ಈಗ ಕೇರಳ ಸಾರಿಗೆ ಸಚಿವರಾಗಿರುವ ಆಂಟೊನಿ ರಾಜು. ಹೈಕೋರ್ಟ್ ಸೆರ್ವೆಲ್ಲಿಯನ್ನು ದೋಷಮುಕ್ತ ಗೊಳಿಸಿತು.
ಇನ್ನು ನೆಮ್ಮದಿಯ ಜೀವನ ನಡೆಸಬಹುದು ಎಂದು ಲೆಕ್ಕಹಾಕಿ ಸೆರ್ವೆಲ್ಲಿ ಆಸ್ಟ್ರೇಲಿಯಾಕ್ಕೆ ಹೋದ. ಆದರೆ ಆ ನೆಮ್ಮದಿ ಬಹುಕಾಲ ಉಳಿಯಲಿಲ್ಲ.
ಸೆರ್ವೆಲ್ಲಿ ಆಸ್ಟ್ರೇಲಿಯಾದಲ್ಲಿ ಕೊಲೆ ಪ್ರಕರಣವೊಂದರಲ್ಲಿ ಸಿಕ್ಕಿಬಿದ್ದ. ಆತನನ್ನು ವಿಕ್ಟೋರಿಯಾದಲ್ಲಿ ಸೆರೆ ಹಿಡಿಯಲಾಯಿತು. ಜೈಲು ಸೇರಿದ ಅವನ ಬಾಯಿ ಸುಮ್ಮನಿರಲಿಲ್ಲ. ತಾನು ಭಾರತದ ಕೇಸೊಂದರಲ್ಲಿ ಪಾರಾಗಿ ಬಂದ ಕತೆಯನ್ನು ಕೈದಿಗಳಿಗೆ ಬಣ್ಣಿಸತೊಡಗಿದ. ಅದರಲ್ಲೂ ಭಾರತದ ಪೊಲೀಸರು ಮತ್ತು ನ್ಯಾಯಾಲಯಗಳಿಗೆ ಹೇಗೆ ಚಳ್ಳೆಹಣ್ಣು ತಿನ್ನಿಸಿದೆ ಎಂಬುದನ್ನು ಕೊಚ್ಚಿಕೊಳ್ಳತೊಡಗಿದ.
ತಕ್ಷಣವೇ ಎಚ್ಚೆತ್ತುಕೊಂಡ ಆಸ್ಟ್ರೇಲಿಯಾದ ರಾಷ್ಟ್ರೀಯ ತನಿಖಾ ಸಂಸ್ಥೆ ಎನ್‌ಸಿಬಿ ಭಾರತೀಯ ಅಧಿಕಾರಿಗಳಿಗೆ ಮಾಹಿತಿ ನೀಡಿತು. ಕೊಲೆ ಪ್ರಕರಣದಲ್ಲಿ ಸರ್ವೆಲ್ಲಿಯ ಸಹ ಆರೋಪಿಯ ವಿಚಾರಣೆ ನಡೆಸಿದಾಗ ಸರ್ವೆಲ್ಲಿಯ ಕುಟುಂಬ ಮತ್ತು ವಕೀಲರು ನ್ಯಾಯಾಲಯದ ಅಧಿಕಾರಿಯೊಬ್ಬರಿಗೆ ಲಂಚ ನೀಡಿದ್ದ ವಿಚಾರ ಬಯಲಾಯಿತು. ಹಾಗೆ ಲಂಚ ಪಡೆದ ಅಧಿಕಾರಿ ಒಳ ಉಡುಪನ್ನು ಬದಲಿಸಿದ್ದ ಅಥವಾ ಅದರ ಗಾತ್ರವನ್ನು ಕಿರಿದಾಗಿಸಿದ್ದ.
ಕೂಡಲೇ ಕೇರಳ ಹೈಕೋರ್ಟ್ ಮೊರೆ ಹೋದ ಪ್ರಕರಣದ ತನಿಖಾಧಿಕಾರಿ ಸಾಕ್ಷ್ಯ ತಿರುಚಿರುವುದರ ಬಗ್ಗೆ ತನಿಖೆ ನಡೆಸುವಂತೆ ಕೋರಿದರು. ಪರಿಣಾಮ ಸಚಿವ ಆಂಟೊನಿ ರಾಜು ಮತ್ತು ನ್ಯಾಯಾಲಯ ಗುಮಾಸ್ತನ ವಿರುದ್ಧ ತಿರುವನಂತಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡರು.
2006ರಲ್ಲೇ ಸಚಿವ ರಾಜು ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಯಿತಾದರೂ 2014ರವರೆಗೂ ಪ್ರಕರಣದ ವಿಚಾರಣೆ ಆರಂಭವಾಗಲೇ ಇಲ್ಲ. ಅದಾದ ಒಂದು ತಿಂಗಳಲ್ಲಿ ಕಾಕತಾಳೀಯವೆಂಬಂತೆ ರಾಜು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದರು.
ಕುತೂಹಲದ ಸಂಗತಿ ಎಂದರೆ ಈ ಒಳ ಉಡುಪು ಪ್ರಕರಣ ಸಿನಿಮಾದಲ್ಲಿಯೂ ಕಾಣಿಸಿಕೊಂಡಿತ್ತು. ಘಟನೆ ನಡೆದ ಒಂದು ವರ್ಷದ ಬಳಿಕ 1991ರಲ್ಲಿ ಬಿಡುಗಡೆಯಾದ ಮಲಯಾಳಂ ಹಾಸ್ಯ ಚಿತ್ರ ʼಆನವಾಳ್ ಮೋದಿರಂ'ನಲ್ಲಿ ʼಚೋಟುದ್ದದ ಒಳಚಡ್ಡಿʼ ಕತೆಯನ್ನು ಹೆಣೆಯಲಾಗಿದೆ.
ಕಳೆದ ವಾರ ತಿರುವನಂತಪುರದ ಪ್ರಥಮ ದರ್ಜೆ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಅವರು ಹದಿನಾರು ವರ್ಷಕ್ಕಿಂತ ಹಳೆಯದಾದ ಎಲ್ಲಾ ಪ್ರಕರಣಗಳನ್ನು ತನ್ನ ಮುಂದಿಡುವಂತೆ ಕೇಳುವವರೆಗೆ 32 ವರ್ಷದಷ್ಟು ಹಳೆಯದಾದ ʼಚೋಟುದ್ದ ಚಡ್ಡಿಯʼ ಪ್ರಕರಣವನ್ನು ಸಾರ್ವಜನಿಕರು ಮತ್ತು ಮಾಧ್ಯಮಗಳು ಮರೆತೇಬಿಟ್ಟಿದ್ದವು.
ಆರೋಪಪಟ್ಟಿಯಲ್ಲಿ ಸಚಿವ ರಾಜು ಮತ್ತು ನ್ಯಾಯಾಲಯ ಗುಮಾಸ್ತ ಜೋಸ್ ಅವರ ಹೆಸರಿದ್ದು ಇಬ್ಬರೂ ಪಿತೂರಿ, ವಂಚನೆ, ಸಾಕ್ಷ್ಯ ನಾಶ, ಪುರಾವೆ ಸೃಷ್ಟಿ, ಸಾರ್ವಜನಿಕ ನಂಬಿಕೆಗೆ ಧಕ್ಕೆ ಮುಂತಾದ ಅಪರಾಧ ಎಸಗಿದ್ದಾರೆ ಎಂದು ದೂರಲಾಗಿದೆ.
ಸಚಿವ ರಾಜು ಅವರು, ಆಡಳಿತಾರೂಢ ಎಡ ಪ್ರಜಾಸತ್ತಾತ್ಮಕ ರಂಗದ (ಎಲ್‌ಡಿಎಫ್) ಭಾಗವಾಗಿರುವ ಜನಾಧಿಪತ್ಯ ಕೇರಳ ಕಾಂಗ್ರೆಸ್ ಪಕ್ಷದ ನಾಯಕ ಕೂಡ. ಪ್ರಕರಣದ ಬಗ್ಗೆ ದಿನೇ ದಿನೇ ಸಾರ್ವಜನಿಕ ಆಕ್ರೋಶ ವ್ಯಕ್ತವಾಗುತ್ತಿದ್ದು ಪ್ರತಿಪಕ್ಷಗಳು ಇದನ್ನು ಅಸ್ತ್ರವಾಗಿ ಬಳಸಲು ಯತ್ನಿಸುತ್ತಿವೆ. ಚೋಟುದ್ದ ಚಡ್ಡಿಯ ಪ್ರಕರಣವೀಗ ಸಚಿವರ ಪ್ರತಿಷ್ಠೆಗೆ ಸವಾಲು ಒಡ್ಡುತ್ತಿದೆ. ಇತ್ತ ವಿಚಾರಣೆ ವಿಳಂಬವಾದ ಬಗ್ಗೆ ವರದಿ ಸಲ್ಲಿಸುವಂತೆ ಕೇರಳ ಹೈಕೋರ್ಟ್ ರಿಜಿಸ್ಟ್ರಿ ಸಂಬಂಧಪಟ್ಟವರಿಗೆ ಸೂಚಿಸಿದೆ.
ಪ್ರಕರಣವನ್ನು ತುರ್ತಾಗಿ ವಿಚಾರಣೆ ನಡೆಸುವಂತೆ ಬುಧವಾರ ಅರ್ಜಿದಾರರೊಬ್ಬರು ಕೇರಳ ಹೈಕೋರ್ಟ್ ಮೊರೆ ಹೋಗಿದ್ದ ಹಿನ್ನೆಲೆಯಲ್ಲಿ ಆಗಸ್ಟ್ 4ರಂದು ಪ್ರಕರಣದ ವಿಚಾರಣೆ ನಡೆಸುವಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಉಚ್ಚ ನ್ಯಾಯಾಲಯ ಆದೇಶಿಸಿದೆ.
ಕುತೂಹಲದ ಸಂಗತಿ ಎಂದರೆ ಈ ಒಳ ಉಡುಪು ಪ್ರಕರಣ ಸಿನಿಮಾದಲ್ಲಿಯೂ ಕಾಣಿಸಿಕೊಂಡಿತ್ತು. ಘಟನೆ ನಡೆದ ಒಂದು ವರ್ಷದ ಬಳಿಕ 1991ರಲ್ಲಿ ಬಿಡುಗಡೆಯಾದ ಮಲಯಾಳಂ ಹಾಸ್ಯ ಚಿತ್ರ ʼಆನವಾಳ್ ಮೋದಿರಂ'ನಲ್ಲಿ ʼಚೋಟುದ್ದದ ಒಳಚಡ್ಡಿʼ ಕತೆಯನ್ನು ಹೆಣೆಯಲಾಗಿದೆ.