ನರಬಲಿ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪ್ರಮುಖ ಆರೋಪಿಗಳನ್ನು ಎರ್ನಾಕುಲಂ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಮೂವರು ಆರೋಪಿಗಳ ಹೆಸರು ಮುಹಮ್ಮದ್ ಶಫಿ (ಅಲಿಯಾಸ್ ರಶೀದ್), ಭಗವಾಲ್ ಸಿಂಗ್ ಮತ್ತು ಲೈಲಾ ಭಗವಾಲ್ ಸಿಂಗ್.
ಪಟ್ಟಣಂತಿಟ್ಟ ಜಿಲ್ಲೆಯ ತಿರುವಳ್ಳದಲ್ಲಿ ಮಂಗಳವಾರ ಇಬ್ಬರು ಮಹಿಳೆಯರ ದೇಹಗಳು ಛಿದ್ರಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ರಾಜ್ಯದಲ್ಲಿ ನರಬಲಿ ನಡೆದ ಸುದ್ದಿ ಬೆಳಕಿಗೆ ಬಂದಿತ್ತು. ನಾಪತ್ತೆಯಾದ ಇಬ್ಬರು ಮಹಿಳೆಯರ ಕುರಿತು ಪೊಲೀಸರು ಕೈಗೊಂಡ ತನಿಖೆಯಿಂದಾಗಿ ನರಬಲಿ ಘಟನೆ ಪತ್ತೆಯಾಗಿತ್ತು.
ಎರ್ನಾಕುಲಂನಲ್ಲಿ ಲಾಟರಿ ಮಾರಾಟ ಮಾಡುತ್ತಿದ್ದ ಇಬ್ಬರೂ ಮಹಿಳೆಯರಿಗೆ ಯಾವುದೇ ಕುಟುಂಬ ಇರಲಿಲ್ಲ. ಇವರು ಜೂನ್ ಮತ್ತು ಸೆಪ್ಟೆಂಬರ್‌ನಲ್ಲಿ ನಾಪತ್ತೆಯಾಗಿದ್ದರು. ನರಬಲಿಗಾಗಿ ಈ ಮಹಿಳೆಯರನ್ನು ಹತ್ಯೆ ಮಾಡಲಾಗಿದೆ ಎನ್ನಲಾಗಿದ್ದು ಕೃತ್ಯಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು. ಆರೋಪಿಗಳ ಪರ ವಕೀಲ ಬಿ ಎ ಆಲೂರು ವಾದ ಮಂಡಿಸಿದರು.
ಘಟನೆ ಕುರಿತಂತೆ ಕೇರಳ ಹೈಕೋರ್ಟ್ ಕೂಡ ಆಘಾತ ವ್ಯಕ್ತಪಡಿಸಿತ್ತು. "ಇಲ್ಲಿ ನಡೆಯುತ್ತಿರುವ ಕೆಲ ಸಂಗತಿಗಳು ಅಸಂಬದ್ಧತೆಯ ಎಲ್ಲೆ ಮೀರುತ್ತಿವೆ. ಇಂದು ನರಬಲಿ ನಡೆದಿದೆ. ಕೇರಳ ಎತ್ತ ಸಾಗುತ್ತಿದೆ ಎಂದು ಆಶ್ಚರ್ಯವಾಗುತ್ತಿದೆ" ಎಂದು ಅದು ಹೇಳಿತ್ತು.