

ಖ್ಯಾತ ನಟ ಹಾಗೂ ರಾಜ್ಯಸಭಾ ಸದಸ್ಯ ಕಮಲ್ ಹಾಸನ್ ಅವರ ವ್ಯಕ್ತಿತ್ವ ಹಕ್ಕುಗಳನ್ನು ರಕ್ಷಿಸಿ ಮದ್ರಾಸ್ ಹೈಕೋರ್ಟ್ ಸೋಮವಾರ ಮಧ್ಯಂತರ ಆದೇಶ ಹೊರಡಿಸಿದ್ದು ಕಮಲ್ ಹಾಸನ್ ಅವರ ರೂಪವನ್ನು ಬಳಸಿಕೊಂಡು ತಿರುಚಿದ ವಿಡಿಯೋಗಳ ಪ್ರಸರಣ ಮಾಡುವುದಾಗಲಿ ಇಲ್ಲವೇ ವಾಣಿಜ್ಯ ಉದ್ದೇಶಕ್ಕಾಗಿ ಕೃತಕ ಬುದ್ಧಿಮತ್ತೆ ಮೂಲಕ ವಸ್ತು ವಿಷಯ ಸೃಷ್ಟಿಸಿ ಪ್ರಚಾರಕ್ಕೆ ಬಳಸುವುದಾಗಲಿ ಮಾಡದಂತೆ ನಿರ್ಬಂಧಿಸಿದೆ [ಕಮಲ್ ಹಾಸನ್ ಮತ್ತು ನೀಯೆವಿದೈ ನಡುವಣ ಪ್ರಕರಣ].
ಕಮಲ್ ಹಾಸನ್ ಅವರು ಮಧ್ಯಂತರ ಪರಿಹಾಕ್ಕಾಗಿ ಮಂಡಿಸಿದ ವಾದ ಮೇಲ್ನೋಟಕ್ಕೆ ಸತ್ವ ಇರುವುದು ಕಂಡಬಂದಿದೆ ಎಂದು ನ್ಯಾ. ಸೆಂಥಿಲ್ ಕುಮಾರ್ ರಾಮಮೂರ್ತಿ ತಿಳಿಸಿದ್ದಾರೆ. ಆದ್ದರಿಂದ, ಮುಂದಿನ ವಿಚಾರಣೆಯ ದಿನಾಂಕದವರೆಗೆ ಪ್ರತಿವಾದಿಗಳು ದಾವೆದಾರರ ಸುಳ್ಳು ಚಿತ್ರ ಸೃಷ್ಟಿಸುವುದನ್ನಾಗಲಿ, ಯಾವುದೇ ಮಾಧ್ಯಮದ ಮೂಲಕ ಅವುಗಳನ್ನು ಪ್ರದರ್ಶಿಸುವುದನ್ನಾಗಲಿ ನಿಷೇಧಿಸಲಾಗುತ್ತಿದೆ ಎಂದು ಪೀಠ ಹೇಳಿದೆ.
ನ್ಯಾಯಾಲಯ ಅವರ ಚಿತ್ರಗಳ ವಾಣಿಜ್ಯಿಕ ದುರ್ಬಳಕೆಗೂ ತಡೆ ನೀಡಿದೆ. “ದಾವೆದಾರರ ಒಪ್ಪಿಗೆ ಅಥವಾ ಅನುಮೋದನೆ ಇಲ್ಲದೆ, ಅವರ ಚಿತ್ರ ಅಥವಾ ಹೆಸರು, ಅವರು ತೆರೆಯ ಮೇಲೆ ನಿರ್ವಹಿಸಿದ ಪಾತ್ರಗಳ ಹೆಸರನ್ನು ಒಳಗೊಂಡಿರುವ ವಸ್ತುಗಳನ್ನು ಮಾರಾಟ ಮಾಡದಂತೆಯೂ ಮುಂದಿನ ವಿಚಾರಣೆಯ ದಿನಾಂಕದವರೆಗೆ ಪ್ರತಿವಾದಿಗಳಿಗೆ ನಿರ್ಬಂಧ ವಿಧಿಸಲಾಗುತ್ತಿದೆ” ಎಂದು ಆದೇಶದಲ್ಲಿ ಹೇಳಲಾಗಿದೆ.
ಆದರೆ ಕಮಲ್ ಅವರನ್ನು ವಿಡಂಬನೆ ಮಾಡುವುದಕ್ಕಾಗಲಿ, ಕಾನೂನಾತ್ಮಕವಾಗಿ ಅನುಮತಿಸಲಾದ ಇತರೆ ಸೃಜನಾತ್ಮಕ ಅಭಿವ್ಯಕ್ತಿಗಳಿಗೆ ಬಳಸುವುದಕ್ಕಾಗಲಿ ಅವಕಾಶ ಇದೆ ಎಂದು ನ್ಯಾಯಾಲಯ ಹೇಳಿದೆ.
“ಈ ಆದೇಶ ವ್ಯಂಗ್ಯಚಿತ್ರಗಳು, ವಿಡಂಬನೆ ಅಥವಾ ಇತರೆ ಅನುಮತಿಸಲಾದ ಸೃಜನಾತ್ಮಕ ಅಭಿವ್ಯಕ್ತಿಗಳಿಗೆ ಅಡ್ಡಿ ಉಂಟುಮಾಡುವುದಿಲ್ಲ” ಎಂದು ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದ್ದಾರೆ.
ಈ ಪ್ರಕರಣದಲ್ಲಿ ಅನಾಮಧೇಯ ವ್ಯಕ್ತಿಗಳನ್ನು ಕಕ್ಷಿದಾರರನ್ನಾಗಿ ಮಾಡಿರುವುದರಿಂದ ಅನಾಮಧೇಯ ವ್ಯಕ್ತಿಗಳಿಗೆ ಮಾಹಿತಿ ನೀಡುವ ಉದ್ದೇಶಕ್ಕಾಗಿ ವ್ಯಾಪಕ ಓದುಗವರ್ಗ ಹೊಂದಿರುವ ಇಂಗ್ಲಿಷ್ ದಿನಪತ್ರಿಕೆಯಲ್ಲಿ ತನ್ನ ಆದೇಶವನ್ನು ಪ್ರಕಟಿಸುವಂತೆಯೂ ನ್ಯಾಯಾಲಯ ನಿರ್ದೇಶಿಸಿತು.
ಕಮಲ್ ಹಾಸನ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಸತೀಶ್ ಪರಾಸರನ್, ಅನಧಿಕೃತ ಆನ್‌ಲೈನ್ ಚಟುವಟಿಕೆಗಳಿಂದ ಕಮಲ್ ಅವರ ಗೌರವ ಮತ್ತು ವಾಣಿಜ್ಯ ಹಿತಾಸಕ್ತಿಗಳಿಗೆ ಧಕ್ಕೆಯಾಗುತ್ತಿರುವುದರಿಂದ ದಾವೆ ಹೂಡಲಾಗಿದೆ. ಅವರ ವ್ಯಕ್ತಿತ್ವದ ವಾಣಿಜ್ಯ ದುರ್ಬಳಕೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಅವಹೇಳನಕಾರಿ ಹಾಗೂ ಹಾನಿಕಾರಕ ವಿಷಯಗಳ ಪ್ರಸಾರ ಎಂಬ ಎರಡು ರೀತಿಯ ದುರುಪಯೋಗ ನಡೆಯುತ್ತಿದೆ ಎಂದರು.
ಕಮಲ್ ಅವರ ಚಿತ್ರ ಹಾಗೂ ಹೆಸರನ್ನು ಅನುಮತಿಯಿಲ್ಲದೆ ಟೀ-ಶರ್ಟ್‌ಗಳು ಸೇರಿದಂತೆ ವಿವಿಧ ವಸ್ತುಗಳಲ್ಲಿ ಬಳಸಿ ವಾಣಿಜ್ಯ ಲಾಭ ಪಡೆಯಲಾಗುತ್ತಿದೆ. ಎಐ ಮೂಲಕ ಸೃಷ್ಟಿಸಲಾದ ಡೀಪ್‌ಫೇಕ್‌ಗಳು ಹಾಗೂ ಮಾರ್ಪಡಿಸಿದ ಚಿತ್ರಗಳು ಕಮಲ್ ಹಾಸನ್ ಅವರನ್ನು ಅಶ್ಲೀಲವಾಗಿ ಬಿಂಬಿಸುತ್ತಿದ್ದು ಅವರ ವ್ಯಕ್ತಿತ್ವ ಹಕ್ಕು, ನೈತಿಕ ಹಕ್ಕು ಮತ್ತು ಜಾಹೀರಾತು ಮೌಲ್ಯಕ್ಕೆ ಧಕ್ಕೆಯುಂಟು ಮಾಡುತ್ತಿದೆ ಎಂದು ಅವರು ದೂರಿದರು.