ಕೆಜಿಎಫ್‌ ಕೃತಿಸ್ವಾಮ್ಯ ಉಲ್ಲಂಘನೆ: ರಾಹುಲ್‌ ಹಾಗೂ ಇತರ ಕಾಂಗ್ರೆಸ್‌ ನಾಯಕರ ವಿರುದ್ಧದ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆ

“ಮುಂದಿನ ವಿಚಾರಣೆಯವರೆಗೆ ಯಶವಂತಪುರ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ಕುರಿತು ತನಿಖೆ ನಡೆಸಲು ತಡೆ ನೀಡಲಾಗಿದೆ. ಪ್ರತಿವಾದಿಗಳು ಆಕ್ಷೇಪಣೆ ಸಲ್ಲಿಸಲು ಸ್ವತಂತ್ರರಾಗಿದ್ದಾರೆ" ಎಂದು ಆದೇಶಿಸಿದ ಪೀಠ.
Karnataka HC and Rahul Gandhi, Jairam Ramesh, Supriya Shrinate
Karnataka HC and Rahul Gandhi, Jairam Ramesh, Supriya Shrinate

ಭಾರತ್ ಜೋಡೋ ಯಾತ್ರೆಯ ಪ್ರಚಾರ ವಿಡಿಯೋಗೆ ಕೆಜಿಎಫ್‌-2 ಕನ್ನಡ ಸಿನಿಮಾದ ಮುದ್ರಿತ ಸಂಗೀತವನ್ನು ಬಳಕೆ ಮಾಡುವ ಮೂಲಕ ಕೃತಿಚೌರ್ಯ ಎಸಗಲಾಗಿದೆ ಎಂದು ಆರೋಪಿಸಿ ಎಂಆರ್‌ಟಿ ಮ್ಯೂಸಿಕ್‌ ಸಂಸ್ಥೆಯು ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ, ಜೈರಾಮ್‌ ರಮೇಶ್‌ ಮತ್ತು ಸುಪ್ರಿಯಾ ಶ್ರೀನಾಥೆ ಅವರ ವಿರುದ್ಧ ಬೆಂಗಳೂರಿನ ಯಶವಂತಪುರ ಠಾಣೆಯಲ್ಲಿ ದಾಖಲಿಸಿರುವ ಎಫ್‌ಐಆರ್‌ನ ತನಿಖೆಗೆ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಮಧ್ಯಂತರ ತಡೆ ನೀಡಿದೆ.

ಕಾಂಗ್ರೆಸ್‌ ನಾಯಕರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನೀಲ್‌ ದತ್‌ ಯಾದವ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಪ್ರಕರಣದ ಮುಂದಿನ ವಿಚಾರಣೆಯವರೆಗೆ ಎಫ್‌ಐಆರ್‌ ಆಧರಿಸಿ ತನಿಖೆ ನಡೆಸದಂತೆ ತಡೆ ನೀಡಿ ಆದೇಶಿಸಿದೆ.

“ಮುಂದಿನ ವಿಚಾರಣೆಯವರೆಗೆ ಯಶವಂತಪುರ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ಕುರಿತು ತನಿಖೆ ನಡೆಸಲು ತಡೆ ನೀಡಲಾಗಿದೆ. ಪ್ರತಿವಾದಿಗಳು ಆಕ್ಷೇಪಣೆ ಸಲ್ಲಿಸಲು ಸ್ವತಂತ್ರರಾಗಿದ್ದಾರೆ" ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಎ ಎಸ್‌ ಪೊನ್ನಣ್ಣ ಅವರು “ಹೈಕೋರ್ಟ್‌ನ ವಿಭಾಗೀಯ ಪೀಠಕ್ಕೆ ನೀಡಿದ ಭರವಸೆಯಂತೆ ಕಾಂಗ್ರೆಸ್‌ ಪಕ್ಷದ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಕೆಜೆಎಫ್‌-2 ಗೀತೆ ಒಳಗೊಂಡ ವಿಡಿಯೊವನ್ನು ತೆಗೆಯಲಾಗಿದೆ. ಎಂಆರ್‌ಟಿ ಮ್ಯೂಸಿಕ್‌ ದಾವೆ ಆಧರಿಸಿ ವಾಣಿಜ್ಯ ನ್ಯಾಯಾಲಯವು ಕಾಂಗ್ರೆಸ್‌ ಮತ್ತು ಭಾರತ್‌ ಜೋಡೋ ಸಾಮಾಜಿಕ ಜಾಲತಾಣ ಖಾತೆಗಳನ್ನು ನಿರ್ಬಂಧಿಸುವಂತೆ ಆದೇಶಿಸಿತ್ತು. ಈ ಆದೇಶವನ್ನು ವಿಭಾಗೀಯವು ತಡೆ ಹಿಡಿದಿತ್ತು” ಎಂದರು.

Also Read
ಕೆಜಿಎಫ್‌ ಕೃತಿ ಸ್ವಾಮ್ಯ ಉಲ್ಲಂಘನೆ: ನ್ಯಾಯಾಂಗ ನಿಂದನೆ ಅರ್ಜಿ ದಾಖಲು; ರಾಹುಲ್‌ ಮತ್ತಿತರರಿಗೆ ಹೈಕೋರ್ಟ್‌ ನೋಟಿಸ್‌

“ಎಫ್‌ಐಆರ್‌ ದಾಖಲಿಸಲು ಅಗತ್ಯವಾದ ಸಂಜ್ಞೇಯ ಅಪರಾಧವೇ ಇಲ್ಲ. ವಿಡಿಯೊದಲ್ಲಿ ರಾಹುಲ್‌ ಗಾಂಧಿ ಅವರ ಚಿತ್ರ ಮಾತ್ರಕ್ಕೆ ಅವರನ್ನು ಆರೋಪಿಯನ್ನಾಗಿಸಲಾಗದು. ಭಾರತ್‌ ಜೋಡೊ ಯಾತ್ರೆ ಬೆಂಗಳೂರು ಪ್ರವೇಶಿಸದಿದ್ದರೂ ಯಶವಂತಪುರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ” ಎಂದು ವಾದಿಸಿದರು.

ಎಂಆರ್‌ಟಿ ಮ್ಯೂಸಿಕ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಎಂ ಎಸ್‌ ಶ್ಯಾಮಸುಂದರ್‌ ಅವರು “ಅರ್ಜಿಯನ್ನು ತುರ್ತಾಗಿ ಆಲಿಸುವ ಅಗತ್ಯವಿಲ್ಲ. ಚಳಿಗಾಲದ ರಜೆ ಮುಗಿದ ಬಳಿಕ ವಿಚಾರಣೆ ನಡೆಸಬಹುದಾಗಿದೆ. ಆಕ್ಷೇಪಾರ್ಹವಾದ ವಿಡಿಯೊ ತೆಗೆಯುವ ಸಂಬಂಧ ನ್ಯಾಯಾಲಯಕ್ಕೆ ಭರವಸೆ ನೀಡಿರುವ ಹೊರತಾಗಿಯೂ ಅವುಗಳನ್ನು ತೆಗೆಯಲಾಗಿಲ್ಲ. ಹೀಗಾಗಿ, ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಲಾಗಿದೆ” ಎಂದು ವಿವರಿಸಿದರು.

Related Stories

No stories found.
Kannada Bar & Bench
kannada.barandbench.com