ಪ್ರಜ್ವಲ್‌ ಪ್ರಕರಣ: ಸಂತ್ರಸ್ತೆ ಅಪಹರಣದ ಆರನೇ ಆರೋಪಿಗೆ ಮಧ್ಯಂತರ ಜಾಮೀನು

ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯನ್ನು ಅಪಹರಿಸಲು ಸಹಕಾರ ನೀಡಿದ ಆರೋಪದಡಿ ಬಂಧನಕ್ಕೊಳಾಗಿರುವ ಇತರ ಆರೋಪಿಗಳು ಜಾಮೀನು ಕೋರಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
Karnataka High Court
Karnataka High Court
Published on

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯನ್ನು ಅಪಹರಿಸಲು ಸಹಕಾರ ನೀಡಿದ ಆರೋಪದಡಿ ಬಂಧನಕ್ಕೊಳಾಗಿರುವ ಆರನೇ ಆರೋಪಿ ಎಚ್ ಟಿ ಕೀರ್ತಿಗೆ ತನ್ನ ತಂದೆಯ ಮರಣೋತ್ತರ ವಿಧಿವಿಧಾನಗಳನ್ನು ನೆರವೇರಿಸಲು ಕರ್ನಾಟಕ ಹೈಕೋರ್ಟ್ ಶುಕ್ರವಾರ ಷರತ್ತು ಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಪ್ರಕರಣ ಸಂಬಂಧ ಜಾಮೀನು ಕೋರಿ ಎಚ್ ಟಿ ಕೀರ್ತಿ ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಸ್‌ ಬಸವರಾಜು ಅವರು “ಎಚ್ ಟಿ ಕೀರ್ತಿ ಅವರ ತಂದೆ ಜೂನ್‌ 24 ರಂದು ನಿಧನ ಹೊಂದಿದ್ದಾರೆ. ಅರ್ಜಿದಾರರು ಮೃತರಿಗೆ ಏಕ ಮಾತ್ರ ಪುತ್ರರಾಗಿದ್ದು, ತಂದೆಯ ಮರಣದ ನಂತರ 11 ದಿನಗಳ ವರೆಗೂ ಹಾಲು ತುಪ್ಪ, ಅಸ್ಥಿ ವಿಸರ್ಜನೆ ಸೇರಿದಂತೆ ಇನ್ನಿತರ ಧಾರ್ಮಿಕ ವಿಧಿವಿಧಾನಗಳನ್ನು ನೇರವೇರಿಸಬೇಕಿದೆ. ಹೀಗಾಗಿ, 15 ದಿನಗಳ ಕಾಲ ಜಾಮೀನಿನ ಮೇಲೆ ಬಿಡುಗಡೆಗೊಳಿಸಿ ಮೃತ ತಂದೆಯ ಮರಣೋತ್ತರ ವಿಧಿವಿಧಾನಗಳನ್ನು ನಡೆಸಲು ಅನುವು ಮಾಡಿಕೊಡಬೇಕು” ಎಂದು ಪೀಠಕ್ಕೆ ಮನವಿ ಮಾಡಿದರು.

ಇದನ್ನು ಪರಿಗಣಿಸಿದ ಪೀಠವು ಅರ್ಜಿದಾರರು ತಂದೆಯ ಮರಣದ ನಂತರ ಅಪರಕರ್ಮ ನೇರವೇರಿಸಲು ಮಧ್ಯಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಮೃತ ಪೋಷಕರ ಅಪರಕರ್ಮದಲ್ಲಿ ಭಾಗವಹಿಸಲು ಅನುವು ಮಾಡಿಕೊಡುವುದು ಧಾರ್ಮಿಕ ಹಕ್ಕುಗಳ ಭಾಗವೂ ಆಗಿದೆ. ಈ ನಿಟ್ಟಿನಲ್ಲಿ ಅರ್ಜಿದಾರರಿಗೆ ಜುಲೈ 15ರವೆಗೆ 17 ದಿನಗಳ ಕಾಲ ಷರತ್ತು ಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿದೆ ಎಂದು ಆದೇಶಿಸಿತು.

ಅರ್ಜಿದಾರರನ್ನು ಈ ಕೂಡಲೇ ಜೈಲಿನಿಂದ ಬಿಡುಗಡೆಗೊಳಿಸಬೇಕು. ಆರೋಪಿಯು 50 ಸಾವಿರ ಮೊತ್ತದ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತಾ ಖಾತರಿ ಒದಗಿಸಬೇಕು. ಮೈಸೂರು ಜಿಲ್ಲೆಯ ಕೆ ಆರ್ ನಗರದ ಹೊರತಾಗಿ ಬೇರೆ ಕಡೆಗಳಲ್ಲಿ ಪ್ರವಾಸ ಬೆಳೆಸಬಾರದು. ಜತೆಗೆ ಕಾರ್ಯವಿಧಾನಗಳನ್ನು ನೇರವೇರಿಸಿದ ಬಳಿಕ ಜುಲೈ15 ಕ್ಕೆ ಪೊಲೀಸ್ ಠಾಣೆಗೆ ಹೋಗಿ ಶರಣಾಗಬೇಕು ಎಂದು ಹೇಳಿ ವಿಚಾರಣೆಯನ್ನು ಮುಂದೂಡಿದರು.

ರಾಜ್ಯ ಸರ್ಕಾರಕ್ಕೆ ನೋಟಿಸ್: ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯನ್ನು ಅಪಹರಿಸಲು ಸಹಕಾರ ನೀಡಿದ ಆರೋಪದಡಿ ಬಂಧನಕ್ಕೊಳಾಗಿರುವ ಇತರ ಆರೋಪಿಗಳು ಜಾಮೀನು ಕೋರಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

Kannada Bar & Bench
kannada.barandbench.com