

ಕೋವಿಡ್ ಸಾಂಕ್ರಾಮಿಕ ರೋಗ ಹರಡಿದ್ದ ವೇಳೆ ಮೃತಪಟ್ಟ ಆರೋಗ್ಯ ಕಾರ್ಯಕರ್ತರ ಕುಟುಂಬಸ್ಥರು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ ವಿಮೆ ಪಡೆಯುವುದಕ್ಕಾಗಿ ಕಡ್ಡಾಯ ಸೇವಾ ವಿನಂತಿ ಸಾಬೀತುಪಡಿಸುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಯೋಜನೆಯು ಅರ್ಹ ಆರೋಗ್ಯ ಕಾರ್ಯಕರ್ತರ ಹತ್ತಿರದ ಸಂಬಂಧಿಕರಿಗೆ ₹50 ಲಕ್ಷ ವಿಮೆ ಒದಗಿಸುತ್ತಿತ್ತು.
ಕೋವಿಡ್ ಉಲ್ಬಣಿಸಿದ ಮಾರ್ಚ್ 2020ರ ನಂತರದ ಸ್ಥಿತಿಯನ್ನು ಗಮನಿಸಿದರೆ ಕೋವಿಡ್ ಸೋಂಕು ತಡೆಯಲು ವೈದ್ಯರು ಮತ್ತು ಇತರ ಆರೋಗ್ಯ ವೃತ್ತಿಪರರನ್ನು ಸರ್ಕಾರಗಳು ಕಡ್ಡಾಯವಾಗಿ ಸೇವೆಗೆ ಕರೆಸಿದ ಪ್ರಮುಖ ಪರಿಸ್ಥಿತಿಯಲ್ಲಿ ಯಾವುದೇ ಸಂದೇಹ ಇರಬಾರದು ಎಂದು ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಆರ್. ಮಹಾದೇವನ್ ಅವರಿದ್ದ ಪೀಠ ತಿಳಿಸಿತು.
ಯಾವುದೇ ಕಡ್ಡಾಯ ಸೇವಾ ವಿನಂತಿ ಇರಲಿಲ್ಲ ಎಂಬ ಕಾರಣಕ್ಕೆ ವಿಮೆ ಪರಿಹಾರ ನೀಡಬಾರದು ಎಂಬ ಸರಳವಾದ ಒಪ್ಪಿತವಲ್ಲ ಎಂದು ನ್ಯಾಯಾಲಯ ತಿಳಿಸಿತು.
ಆಗ ವೈಯಕ್ತಿಕ ನೇಮಕ ಪತ್ರ ಅಥವಾ ಸೇವಾ ಕೋರಿಕೆಯ ಪತ್ರ ನೀಡುವುದು ಸಾಧ್ಯವಾಗದ ಪರಿಸ್ಥಿತಿ ಇತ್ತು ಎಂಬುದನ್ನು ಊಹಿಸುವುದು ಕಷ್ಟವೇನಲ್ಲ. ಅದೇ ಕಾರಣಕ್ಕೆ ಸಾಂಕ್ರಾಮಿಕ ರೋಗ ಕಾಯಿದೆ 1897 ಜೊತೆಗೆ 2020ರ ನಿಯಂತ್ರಣ ನಿಯಮವಾಳಿಯನ್ನು ಅನ್ವಯಿಸಲು ನಿಖರ ಕಾರಣವೇ ಅದಾಗಿದೆ ಎಂದು ಪೀಠ ವಾದಿಸಿತು.
ಆದರೆ ಯೋಜನೆಯಡಿ ಸಲ್ಲಿಸುವ ವೈಯಕ್ತಿಕ ವಿಮಾ ಅರ್ಜಿಗಳನ್ನು ಕಾನೂನು ಮತ್ತು ಪುರಾವೆಗಳ ಆಧಾರದಲ್ಲಿ ತೀರ್ಮಾನಿಸಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಕೋವಿಡ್-19 ಸಂಬಂಧಿತ ಜವಾಬ್ದಾರಿಗಳನ್ನು ಮುಂದುವರೆಸುವಲ್ಲಿ ವೈದ್ಯರು ಅಥವಾ ಆರೋಗ್ಯ ವೃತ್ತಿಪರರು ತಮ್ಮ ಸೇವೆಗಳನ್ನು ಒದಗಿಸಿದ್ದಾರೆಯೇ ಎಂಬುದು ಪುರಾವೆಗಳಿಗೆ ಸಂಬಂಧಿಸಿದ ವಿಷಯ ಎಂದು ನ್ಯಾಯಾಲಯ ವಿವರಿಸಿದೆ.
ಮೃತರು ಕೋವಿಡ್ ಸಂಬಂಧಿತ ಕರ್ತವ್ಯ ನಿರ್ವಹಿಸುವಾಗ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸಾಬೀತುಪಡಿಸುವ ಜವಾಬ್ದಾರಿ ವಿಮಾ ಹಕ್ಕುದಾರರ ಮೇಲಿದೆ ಮತ್ತು ಅದನ್ನು ವಿಶ್ವಾಸಾರ್ಹ ಪುರಾವೆಗಳ ಆಧಾರದ ಮೇಲೆ ಸಾಬೀತುಪಡಿಸಬೇಕಿದೆ" ಎಂದು ಅದು ಹೇಳಿದೆ.
ಕೋವಿಡ್ ಸಂಬಂಧಿತ ಕರ್ತವ್ಯಗಳಿಗಾಗಿ ಅವರ ಸೇವೆಗಳನ್ನು 'ಪಡೆಯಲಾಗಿದೆ' ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂಬ ಕಾರಣಕ್ಕೆ ಮೃತ ವೈದ್ಯ ಡಾ. ಬಿ. ಸುರ್ಗಡೆ ಅವರ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಬಾಂಬೆ ಹೈಕೋರ್ಟ್ ತೀರ್ಪನ್ನು ರದ್ದುಗೊಳಿಸಿ ನ್ಯಾಯಾಲಯ ಈ ತೀರ್ಪು ನೀಡಿದೆ.
ಕೋವಿಡ್ ವೇಳೆ ವೈದ್ಯರು ಸ್ಥೈರ್ಯ ಮತ್ತು ತ್ಯಾಗ ಅಜರಾಮರ ಎಂದು ನ್ಯಾಯಾಲಯ ಮೆಚ್ಚುಗೆ ವ್ಯಕ್ತಪಡಿಸಿತು.
[ತೀರ್ಪಿನ ಪ್ರತಿ]