ಐಪಿಸಿ ಸೆ. 377ರ ಪ್ರಕಾರ ತುಟಿ ಚುಂಬನ, ಖಾಸಗಿ ಭಾಗ ಸ್ಪರ್ಶ ಅನೈಸರ್ಗಿಕ ಅಪರಾಧವಲ್ಲ: ಬಾಂಬೆ ಹೈಕೋರ್ಟ್

ಇಂತಹ ಕೃತ್ಯ ಪೋಕ್ಸೊ ಕಾಯಿದೆಯಡಿ ಅಪರಾಧವಾದರೂ ಆರೋಪಿ ವಿರುದ್ಧ ನಿಗದಿಪಡಿಸಲಾದ ಪೋಕ್ಸೊ ಅಪರಾಧಕ್ಕೆ 5 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು ಎಂಬುದನ್ನು ಗಮನಿಸಿ ಪೀಠ ಜಾಮೀನು ನೀಡಿತು.
Bombay High Court
Bombay High Court
Published on

ಅಪ್ರಾಪ್ತ ವಯಸ್ಕರ ತುಟಿ ಚುಂಬಿಸುವುದು ಅವರ ಖಾಸಗಿ ಭಾಗ ಸ್ಪರ್ಶಿಸುವುದು ಐಪಿಸಿ ಸೆಕ್ಷನ್‌ 377ರ ಅಡಿ ಅನೈಸರ್ಗಿಕ ಅಪರಾಧವಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್‌ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ [ಪ್ರೇಮ್ ರಾಜೇಂದ್ರ ಪ್ರಸಾದ್ ದುಬೆ ಮತ್ತು ಮಹಾರಾಷ್ಟ್ರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಇಂತಹ ಕೃತ್ಯ ಪೋಕ್ಸೊ ಕಾಯಿದೆಯಡಿ ಅಪರಾಧವಾದರೂ ಆರೋಪಿ ವಿರುದ್ಧ ನಿಗದಿಪಡಿಸಲಾದ ಪೋಕ್ಸೊ ಅಪರಾಧಕ್ಕೆ 5 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು ಮತ್ತು ಆರೋಪಿ ಈಗಾಗಲೇ ಬಹುತೇಕ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಾನೆ ಎಂಬುದನ್ನು ಗಮನಿಸಿ ಪೀಠ ಜಾಮೀನು ನೀಡಿತು.

“ಅರ್ಜಿದಾರ ತನ್ನ ಖಾಸಗಿ ಭಾಗಗಳನ್ನು ಮುಟ್ಟಿ ತುಟಿಗಳಿಗೆ ಮುತ್ತಿಟ್ಟಿದ್ದಾನೆ ಎಂಬುದನ್ನು ಸಂತ್ರಸ್ತನ ಹೇಳಿಕೆ ಹಾಗೂ ಎಫ್‌ಐಆರ್‌ ಪ್ರಾಥಮಿಕವಾಗಿ ಸೂಚಿಸುತ್ತವೆ. ನನ್ನ ಅಭಿಪ್ರಾಯದಲ್ಲಿ, ಇದು ಐಪಿಸಿಯ ಸೆಕ್ಷನ್ 377ರ ಅಡಿಯಲ್ಲಿ ಮೇಲ್ನೋಟದ ಅಪರಾಧವಾಗುವುದಿಲ್ಲ” ಎಂದು ನ್ಯಾಯಮೂರ್ತಿ ಅನುಜಾ ಪ್ರಭುದೇಸಾಯಿ ಆದೇಶಿಸಿದರು.

Also Read
ನ್ಯಾ. ಪುಷ್ಪಾ ಗನೇದಿವಾಲಾ ರಾಜೀನಾಮೆ: ವಿವಾದಕ್ಕೆ ಕಾರಣವಾದ ತೀರ್ಪುಗಳ ಮೆಲುಕು

ಯಾರಾದರೂ ಸ್ವಇಚ್ಛೆಯಿಂದ ನೈಸರ್ಗಿಕ ಕ್ರಿಯೆಗೆ ವಿರುದ್ಧವಾಗಿ ಪುರುಷ, ಸ್ತ್ರೀ ಅಥವಾ ಪ್ರಾಣಿಯೊಡನೆ ದೈಹಿಕ ಸಂಭೋಗ ನಡೆಸಿದರೆ ಅವರು 10 ವರ್ಷ ಜೈಲು ಶಿಕ್ಷೆ ಮತ್ತು ದಂಡಕ್ಕೆ ಅರ್ಹರಾಗಿರುತ್ತಾರೆ ಎಂದು ಸೆಕ್ಷನ್‌ 377 ಹೇಳುತ್ತದೆ. ಸೆಕ್ಷನ್‌ ಪ್ರಕಾರ ಐಹಿಕ ಸುಖ ಸಾಬೀತುಪಡಿಸಲು ಜನನಾಂಗ ಒಳಪ್ರವೇಶಿಕೆ ನಡೆದಿರಬೇಕು ಎಂದು ನ್ಯಾಯಾಲಯ ಹೇಳಿತು.

ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 384 (ಸುಲಿಗೆಗೆ ಶಿಕ್ಷೆ), 420 (ವಂಚನೆ) ಮತ್ತು ಪೋಕ್ಸೊ ಸೆಕ್ಷನ್ 8 (ಲೈಂಗಿಕ ದೌರ್ಜನ್ಯಕ್ಕೆ ಶಿಕ್ಷೆ) ಮತ್ತು 12 (ಲೈಂಗಿಕ ಕಿರುಕುಳಕ್ಕೆ ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

Also Read
ಚರ್ಮದಿಂದ ಚರ್ಮ ಸ್ಪರ್ಶಿಸಿದ್ದರೆ ಮಾತ್ರ ಲೈಂಗಿಕ ದೌರ್ಜನ್ಯ ಎನ್ನುವ ಬಾಂಬೆ ಹೈಕೋರ್ಟ್ ತೀರ್ಪು ರದ್ದುಗೊಳಿಸಿದ ಸುಪ್ರೀಂ

ಎಫ್‌ಐಆರ್‌ ಪ್ರಕಾರ ಬಾಲಕನ ತಂದೆ ತನ್ನ ಕಪಾಟಿನಲ್ಲಿಟ್ಟಿದ್ದ ಹಣ ನಾಪತ್ತೆಯಾಗಿದೆ ಎಂದು ಮಗನ ಬಳಿ ವಿಚಾರಿಸಿದ್ದರು. ಆಗ ಅಪ್ರಾಪ್ತ ವಯಸ್ಕ ಮಗ ತಾನು ಆರೋಪಿಗೆ ಆನ್‌ಲೈನ್‌ ಗೇಮ್‌ ʼಓಲಾ ಪಾರ್ಟಿ ಆಡಲು ರಿಚಾರ್ಜ್‌ ಮಾಡಿಸುವುದಕ್ಕಾಗಿ ಬಳಸಿದ್ದಾಗಿ ತಿಳಿಸಿದ್ದ. ಇದೇ ವೇಳೆ, ಆರೋಪಿ ತನ್ನ ತುಟಿಗೆ ಚುಂಬಿಸಿ ಖಾಸಗಿ ಅಂಗಗಳನ್ನು ಮುಟ್ಟಿದ್ದ ಎಂದು ಬಾಲಕ ಆರೋಪಿಸಿದ್ದ.

ಜಾಮೀನು ನೀಡುವ ಸಂದರ್ಭದಲ್ಲಿ ನ್ಯಾಯಾಲಯ ಈ ಪ್ರಕರಣದಲ್ಲಿ ಸೆಕ್ಷನ್ 377 ಅನ್ವಯವಾಗದು ಎಂದು ಹೇಳಿತು. “ಸೆಕ್ಷನ್ 8 ಮತ್ತು 12 (ಪೋಕ್ಸೊ) ಅಡಿಯಲ್ಲಿ ಅಪರಾಧಕ್ಕಾಗಿ ಗರಿಷ್ಠ ಐದು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಅರ್ಜಿದಾರ ಸುಮಾರು ಒಂದು ವರ್ಷದವರೆಗೆ ಜೈಲಿನಲ್ಲಿದ್ದಾರೆ. ಆರೋಪವನ್ನು ಇನ್ನೂ ಸಾಬೀತುಪಡಿಸಲು ಆಗಿಲ್ಲ. ಕೂಡಲೇ ತನಿಖೆ ಆರಂಭವಾಗುವ ಸಾಧ್ಯತೆಗಳೂ ಇಲ್ಲ. ಮೇಲ್ಕಂಡ ಸಂಗತಿಗಳು ಮತ್ತು ಸನ್ನಿವೇಶಗಳ ಆಧಾರದಲ್ಲಿ, ಅರ್ಜಿದಾರರು ಜಾಮೀನಿಗೆ ಅರ್ಹರಾಗಿರುತ್ತಾರೆ,” ಎಂದು ನ್ಯಾಯಾಲಯ ಆದೇಶಿಸಿದೆ.

Kannada Bar & Bench
kannada.barandbench.com