

ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿನ ಅಕ್ರಮ ಮನೆಗಳ ತೆರವು ಕಾರ್ಯಾಚರಣೆಯಲ್ಲಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿದ್ದರೂ ಅದನ್ನು ಅವರು ಬಳಕೆ ಮಾಡುತ್ತಿಲ್ಲ ಎಂಬುದು ಚಿತ್ರಗಳಿಂದ ತಿಳಿಯಲಿದೆ ಎಂದು ಕರ್ನಾಟಕ ಹೈಕೋರ್ಟ್ ಮಂಗಳವಾರ ಹೇಳಿದೆ.
ಅಕ್ರಮವಾಗಿ ತೆರವು ಕಾರ್ಯಾಚರಣೆ ನಡೆಸಿರುವುದರಿಂದ ಅದನ್ನು ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೋರಿ ಕೋಗಿಲು ಬಡಾವಣೆ ನಿವಾಸಿಗಳಾದ ಜೈಬಾ ತಬಸ್ಸುಮ್, ರೆಹನಾ ಮತ್ತು ಆರೀಫ್ ಬೇಗಂ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಕೆ ಎಸ್ ಹೇಮಲೇಖಾ ಅವರ ವಿಭಾಗೀಯ ಪೀಠ ನಡೆಸಿತು.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲರು “ಸರ್ಕಾರದ ಪುನರ್ವಸತಿ ಕೇಂದ್ರದಲ್ಲಿ 100 ಮಂದಿ ವಾಸಿಸಲು ಅವಕಾಶವಿಲ್ಲ. ಅವು ಕೋಗಿಲು ಲೇಔಟ್ ಸಮೀಪದಲ್ಲಿಲ್ಲ ಹಾಗೂ ಅಲ್ಲಿ ಅಗತ್ಯವಾದಷ್ಟು ಶೌಚಾಲಯಗಳಿಲ್ಲ ಮತ್ತು ಸೂಕ್ತ ಉಪಚಾರದ ವ್ಯವಸ್ಥೆಯಿಲ್ಲ. ಈ ಸಂಬಂಧ ಅಮಿಕಸ್ ಕ್ಯೂರಿ ಮಾಡಿರುವ ವಿಡಿಯೊ ರೆಕಾರ್ಡಿಂಗ್ ಹಾಜರುಪಡಿಸಲು ನಿರ್ದೇಶಿಸಬೇಕು” ಎಂದರು.
ಇದಕ್ಕೆ ಒಪ್ಪದ ಪೀಠವು “ಸರ್ಕಾರವು ಸಲ್ಲಿಸಿರುವ ಫೋಟೊಗಳು ಬೇರೆಯದೇ ಕತೆ ಹೇಳುತ್ತವೆ. ಸಂತ್ರಸ್ತರಿಗೆ ಯಾವುದೇ ಸಮಸ್ಯೆಗಳಿದ್ದರೂ ಅವರು ಅವುಗಳನ್ನು ಅಮಿಕಸ್ ಕ್ಯೂರಿ ಬಿ ವಿ ವಿದ್ಯುಲ್ಲತಾ ಅವರ ಗಮನಕ್ಕೆ ತರಬಹುದು. ಅವರು ಕ್ರಮಕೈಗೊಳ್ಳಲಿದ್ದಾರೆ” ಎಂದಿತು.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು “ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲಾಗಿದೆ. ಆದರೆ, ಅವರು ಸ್ಥಳವನ್ನು ಬಿಟ್ಟು ಕದಲು ಸಿದ್ಧರಿಲ್ಲ. ಏಕೆಂದರೆ ನಿವೇಶನಗಳು ಇಲ್ಲದಾಗುತ್ತವೆ ಎಂಬ ಆತಂಕ ಅವರದ್ದಾಗಿದೆ” ಎಂದರು.
ಅರ್ಜಿದಾರರ ಪರ ವಕೀಲ ಕ್ಲಿಫ್ಟನ್ ರೋಜಾರಿಯೋ ಅವರು “ಸಂತ್ರಸ್ತರಿಗೆ ಕರ್ನಾಟಕ ಭೂಕಂದಾಯ ಕಾಯಿದೆ ಅಡಿ ನಿವೇಶನ ಹಂಚಿಕೆ ಮಾಡಲಾಗಿದೆ. ಅದಕ್ಕೆ ದಾಖಲೆ ಇದೆ” ಎಂದರು.
ಈ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿದ ನ್ಯಾಯಾಲಯವು ವಿಚಾರಣೆಯನ್ನು ಜುಲೈ 13ಕ್ಕೆ ಮುಂದೂಡಿತು.