ವಕೀಲರ ಪರಿಹಾರ ಧನ ಹೆಚ್ಚಳ: ಕರ್ನಾಟಕ ವಕೀಲರ ಕಲ್ಯಾಣ ನಿಧಿ ಕಾಯಿದೆ ತಿದ್ದುಪಡಿಗೆ ಕಾನೂನು ಸಚಿವರಿಗೆ ಮನವಿ ಸಲ್ಲಿಕೆ

15 ವರ್ಷ, 15 ವರ್ಷಕ್ಕಿಂತ ಹೆಚ್ಚು 35 ವರ್ಷ ಮೀರದ ವಕೀಲಿಕೆ ಅನುಭವ ಹೊಂದಿರುವವರಿಗೆ ಹಾಲಿ ಇರುವ ₹4 ಲಕ್ಷ, ₹6 ಲಕ್ಷ & ₹8 ಲಕ್ಷ ಪರಿಹಾರವನ್ನು ಕ್ರಮವಾಗಿ ₹6 ಲಕ್ಷ, ₹8 ಲಕ್ಷ & ₹10 ಲಕ್ಷಕ್ಕೆ ಹೆಚ್ಚಿಸಲು ಕೆಎಸ್‌ಬಿಸಿ ಮನವಿ ಮಾಡಿದೆ.
ವಕೀಲರ ಪರಿಹಾರ ಧನ ಹೆಚ್ಚಳ: ಕರ್ನಾಟಕ ವಕೀಲರ ಕಲ್ಯಾಣ ನಿಧಿ ಕಾಯಿದೆ ತಿದ್ದುಪಡಿಗೆ ಕಾನೂನು ಸಚಿವರಿಗೆ ಮನವಿ ಸಲ್ಲಿಕೆ
Published on

ವಕೀಲರು ಸೇವಾ ನಿವೃತ್ತಿ ಅಥವಾ ಮರಣ ಹೊಂದಿದರೆ ಅಥವಾ ವೈದ್ಯಕೀಯ ನೆರವಿಗೆ ನೀಡಲಾಗುತ್ತಿದ್ದ ಪರಿಹಾರ ಹೆಚ್ಚಳ ಮಾಡಲು ಅನುಕೂಲವಾಗುವಂತೆ ಕರ್ನಾಟಕ ವಕೀಲರ ಕಲ್ಯಾಣ ನಿಧಿ ಕಾಯಿದೆ 1983ಕ್ಕೆ ಬೆಳಗಾವಿಯಲ್ಲಿ ಹಾಲಿ ನಡೆಯುತ್ತಿರುವ ಅಧಿವೇಶನದಲ್ಲಿ ತಿದ್ದುಪಡಿ ತರುವ ಸಂಬಂಧ ಕ್ರಮಕೈಗೊಳ್ಳುವಂತೆ ಕಾನೂನು ಸಚಿವ ಎಚ್‌ ಕೆ ಪಾಟೀಲ್‌ ಅವರಿಗೆ ಕರ್ನಾಟಕ ರಾಜ್ಯ ಕಾನೂನು ಪರಿಷತ್‌ (ಕೆಎಸ್‌ಬಿಸಿ) ಈಚೆಗೆ ಮನವಿ ಸಲ್ಲಿಸಿದೆ.

15 ವರ್ಷ, 15 ವರ್ಷಕ್ಕಿಂತ ಹೆಚ್ಚು 35 ವರ್ಷ ಮೀರದ ವಕೀಲಿಕೆ ಅನುಭವ ಹೊಂದಿರುವವರಿಗೆ ಹಾಲಿ ಇರುವ ₹4 ಲಕ್ಷ, ₹6 ಲಕ್ಷ ಮತ್ತು ₹8 ಲಕ್ಷ ಪರಿಹಾರವನ್ನು ಕ್ರಮವಾಗಿ ₹6 ಲಕ್ಷ, ₹8 ಲಕ್ಷ ಮತ್ತು ₹10 ಲಕ್ಷಕ್ಕೆ ಹೆಚ್ಚಿಸಲು ಕಾಯಿದೆಗೆ ತಿದ್ದುಪಡಿ ತರಲು ಸಚಿವ ಪಾಟೀಲ್‌ ಅವರಿಗೆ ಕೆಎಸ್‌ಬಿಸಿ ಅಧ್ಯಕ್ಷ ವಿ ಡಿ ಕಾಮರಡ್ಡಿ, ಉಪಾಧ್ಯಕ್ಷ ವಿನಯ್‌ ಮಂಗ್ಳೇಕರ್‌, ಸದಸ್ಯರಾದ ಎಸ್‌ ಬಸವರಾಜು, ಮಾಜಿ ಅಧ್ಯಕ್ಷ ಕೆ ಬಿ ನಾಯಕ್‌ ಮತ್ತಿತರರ ನಿಯೋಗವು ಮನವಿ ಮಾಡಿದೆ.

ಕಳೆದ ಎಂಟು ವರ್ಷಗಳಿಂದ ಸೇವಾ ನಿವೃತ್ತಿ ಅಥವಾ ಮರಣ ಹೊಂದಿದರೆ ಅಥವಾ ವೈದ್ಯಕೀಯ ನೆರವಿನ ರೂಪದಲ್ಲಿ ಕ್ರಮವಾಗಿ ₹4 ಲಕ್ಷ, ₹6 ಲಕ್ಷ ಮತ್ತು ₹8 ಲಕ್ಷ ನೀಡಲಾಗುತ್ತಿದೆ. ಕಳೆದ ಒಂದು ದಶಕದಲ್ಲಿ ಹಣದ ಮೌಲ್ಯ ಕುಸಿತವಾಗಿದೆ. ಹೀಗಾಗಿ, ಪ್ರಸಕ್ತ ನೀಡುತ್ತಿರುವ ಪರಿಹಾರದ ಮೊತ್ತದಿಂದ ಪರಿಸ್ಥಿತಿ ನಿಭಾಯಿಸಲು ವಕೀಲ ಸಮುದಾಯ ತ್ರಾಸ ಪಡುತ್ತಿದೆ. ಮೊತ್ತವನ್ನು ಹೆಚ್ಚಿಸಿದರೆ ಅದರಿಂದ ಉದ್ಭವಿಸುವ ಹಣಕಾಸಿನ ಪರಿಣಾಮಗಳನ್ನು ನಿಭಾಯಿಸಲು ಕೆಎಸ್‌ಬಿಸಿಯ ಬಳಿ ಸಾಕಷ್ಟು ನಿಧಿಯಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಈ ನೆಲೆಯಲ್ಲಿ ವಕೀಲ ಸಮುದಾಯದ ಬೇಡಿಕೆಯನ್ನು ಈಡೇರಿಸಲು 2019ರಲ್ಲಿ ಕರ್ನಾಟಕ ವಕೀಲರ ಕಲ್ಯಾಣ ನಿಧಿ ತಿದ್ದುಪಡಿ ಮಸೂದೆ 2019 ರೂಪಿಸಿದ್ದರೂ ಜಾರಿಗೊಳಿಸಲಾಗಿರಲಿಲ್ಲ. ಆದ್ದರಿಂದ, ಕಾಯಿದೆಗೆ ಅಗತ್ಯ ತಿದ್ದುಪಡಿ ತಂದು ಪರಿಹಾರದ ಹಣ ಹೆಚ್ಚಳ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಸಚಿವರಿಗೆ ಮನವಿ ಮಾಡಲಾಗಿದೆ.

Attachment
PDF
KSBC letter
Preview
Kannada Bar & Bench
kannada.barandbench.com