
ವಕೀಲರ ಚಿಹ್ನೆಯನ್ನು ವಾಣಿಜ್ಯಕ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲು ಪೊಲೀಸರಿಗೆ ನಿರ್ದೇಶಿಸುವಂತೆ ಗೃಹ ಸಚಿವ ಜಿ ಪರಮೇಶ್ವರ್ ಅವರಿಗೆ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಎಸ್ ಎಸ್ ಮಿಟ್ಟಲಕೋಡ ಮನವಿ ಮಾಡಿದ್ದಾರೆ.
ವಕೀಲರ ಸೋಗಿನಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಬಳಕೆ ಮಾಡುವ ವಾಹನಗಳಲ್ಲೂ ವಕೀಲರ ಚಿಹ್ನೆ ದುರ್ಬಳಕೆ ಮಾಡಿಕೊಳ್ಳುವ ನಕಲಿಗಳ ವಿರುದ್ದ ಕ್ರಮಕೈಗೊಳ್ಳುವಂತೆ ಪೊಲೀಸರಿಗೂ ಮನವಿ ಮಾಡಲಾಗಿದೆ.
ವಕೀಲರ ಕಾಯಿದೆ 1961 ಸೆಕ್ಷನ್ 24ರ ಪ್ರಕಾರ ವಕೀಲರಾದವರು ಯಾವುದೇ ಲಾಭದಾಯಕ ವೃತ್ತಿ, ವ್ಯಾಪಾರ ಮಾಡುವಂತಿಲ್ಲ. ವಕೀಲರು ಒಂದೊಮ್ಮೆ ತಮ್ಮ ವಾಣಿಜ್ಯ ಚಟುವಟಿಕೆಗೆ ಬಳಕೆ ಮಾಡುವ ವಾಹನಗಳಿಗೆ ವಕೀಲರ ಚಿಹ್ನೆ ಲಗತ್ತಿಸಿರುವುದು ಕಂಡುಬಂದರೆ ಅಂಥವರ ವಿರುದ್ಧ ದೂರು ನೀಡಿದರೆ ಕೆಎಸ್‌ಬಿಸಿಯು ಕ್ರಮಕೈಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕರ್ನಾಟಕದಲ್ಲಿ ಸದ್ಯ 1,17,920 ನೋಂದಾಯಿತ ವಕೀಲರಿದ್ದು, ಈ ಮಾಹಿತಿಯು ksbc.org.inನಲ್ಲಿ ಲಭ್ಯವಿದೆ. ನೋಂದಾಯಿತ ವಕೀಲರಿಗೆ ಗುರುತಿನ ಚೀಟಿ ನೀಡಲಾಗಿದೆ. ನ್ಯಾಯಾಲಯ ಆವರಣ, ಸರ್ಕಾರಿ ಕಚೇರಿ ಸಮಯದಲ್ಲಿ ವಾಣಿಜ್ಯ ಚಟುವಟಿಕೆಗೆ ಬಳಕೆ ಮಾಡುವ ವಾಹನಗಳ ಮೇಲೆ ವಕೀಲರ ಚಿಹ್ನೆ ಲಗತ್ತಿಸಿಕೊಂಡಿರುವುದು ಕಂಡುಬಂದರೆ ಅಂಥವರ ಗುರುತಿನ ಚೀಟಿಯನ್ನು ಪೊಲೀಸರು ಪರಿಶೀಲಿಸಬಹುದು ಎಂದು ಕೆಎಸ್‌ಬಿಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.