ಕೋವಿಡ್ ಸೋಂಕಿತ ವಕೀಲರ ನೆರವಿಗೆ ಧಾವಿಸಿದ ಕೆಎಸ್‌ಬಿಸಿ: ರೂ.25 ಸಾವಿರದವರೆಗೆ ಧನಸಹಾಯ

ಕೋವಿಡ್ ಸೋಂಕಿತ ವಕೀಲರ ನೆರವಿಗೆ ಧಾವಿಸಿದ ಕೆಎಸ್‌ಬಿಸಿ: ರೂ.25 ಸಾವಿರದವರೆಗೆ ಧನಸಹಾಯ

ಮೇ 7ರಂದು ನಡೆದ ಸಭೆಯಲ್ಲಿ ಸಂಕಷ್ಟದಲ್ಲಿರುವ ವಕೀಲರಿಗೆ ಹಣದ ನೆರವು ನೀಡಲು ಒಮ್ಮತದ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಕೆಎಸ್‌ಬಿಸಿ ಪ್ರಕಟಣೆ ತಿಳಿಸಿದೆ.

ಕೋವಿಡ್‌ ಸೋಂಕಿತ ನ್ಯಾಯವಾದಿಗಳ ನೆರವಿಗೆ ನಿರ್ಧರಿಸಿರುವ ಕರ್ನಾಟಕ ರಾಜ್ಯ ವಕೀಲರ ಪರಿಷತ್‌ (ಕೆಎಸ್‌ಬಿಸಿ) ಈ ಸಂಬಂಧ ವಿವಿಧ ಬಗೆಯ ಆರ್ಥಿಕ ನೆರವು ನೀಡಲು ಮುಂದಾಗಿದೆ.

ಕೊರೊನಾಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿರುವ ವಕೀಲರಿಗಾಗಿ ರೂ.25,000 ಹಾಗೂ ಪ್ರತ್ಯೇಕವಾಸದಲ್ಲಿರುವವರಿಗೆ ರೂ.10,000 ಮೊತ್ತದ ಧನಸಹಾಯ ನೀಡಲು ಕೆಎಸ್‌ಬಿಸಿ ನಿರ್ಧರಿಸಿದೆ. ಈ ಕುರಿತು ಮೇ 7ರಂದು ನಡೆದ ಸಭೆಯಲ್ಲಿ ಒಮ್ಮತದ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಅದು ಪ್ರಕಟಣೆಯಲ್ಲಿ ತಿಳಿಸಿದೆ.

ಸಂತ್ರಸ್ತ ವಕೀಲರಿಗೆ ಧನಸಹಾಯಕ್ಕಾಗಿ ಅರ್ಜಿ ನಮೂನೆ ಬಿಡುಗಡೆ ಮಾಡಲಾಗಿದೆ. ಅರ್ಜಿಯಲ್ಲಿ ವಕೀಲರು ತಮ್ಮ ಹೆಸರು ವಿಳಾಸ, ರೋಲ್‌ ನಂಬರ್‌, ಪ್ರಾಕ್ಟೀಸ್‌ ಮಾಡುತ್ತಿರುವ ಸ್ಥಳ, ತಾವು ಸದಸ್ಯರಾಗಿರುವ ವಕೀಲರ ಸಂಘದ ಹೆಸರು, ಮೊಬೈಲ್‌ ಸಂಖ್ಯೆ, ಆಧಾರ್‌ ಸಂಖ್ಯೆಯ ವಿವರಗಳನ್ನು ನೀಡಬೇಕಿದೆ.

ಅಲ್ಲದೆ, 1ನೇ ಏಪ್ರಿಲ್‌ 2021ರ ಬಳಿಕ ಕೋವಿಡ್‌ ಪೀಡಿತರಾಗಿರುವಿರೇ, ಗೃಹ ಪ್ರತ್ಯೇಕ ವಾಸದಲ್ಲಿರುವಿರೆ? ಹಾಗಿದ್ದರೆ ಆರ್‌ಟಿಪಿಸಿಆರ್‌ ವರದಿಯ ವಿವರಗಳು, ಆಸ್ಪತ್ರೆಯ ವಿಳಾಸ ಮತ್ತು ಸಂಪರ್ಕ ಸಂಖ್ಯೆ, ದಾಖಲಾದ ದಿನಾಂಕ, ಆಸ್ಪತ್ರೆಯಿಂದ ಬಿಡುಗಡೆಯಾದ ದಿನಾಂಕ, ಪ್ಯಾನ್‌ ಕಾರ್ಡ್‌ ಸಂಖ್ಯೆ, ಬ್ಯಾಂಕ್‌ ವಿವರಗಳನ್ನು ನೀಡುವಂತೆ ಸಹ ಸೂಚಿಸಲಾಗಿದೆ.

ಕೋವಿಡ್‌ ಪೀಡಿತ ವಕೀಲರು ಹಾಗೂ ಅವರ ಕುಟುಂಬಸ್ಥರಿಗೆ ಗರಿಷ್ಠ ಮಟ್ಟದ ನೆರವು ನೀಡುವುದಾಗಿ ಪರಿಷತ್‌ ಅಧ್ಯಕ್ಷ ಎಲ್‌ ಶ್ರೀನಿವಾಸಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅರ್ಜಿಯನ್ನು ಇಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು:

Attachment
PDF
Appln. Covid 19 (1).pdf
Preview
No stories found.
Kannada Bar & Bench
kannada.barandbench.com