[ಕೆಎಸ್‌ಬಿಸಿ ಚುನಾವಣೆ ಇಂದು] 23 ಸದಸ್ಯ ಸ್ಥಾನಗಳಿಗೆ 149 ವಕೀಲರ ಪೈಪೋಟಿ; ಮಾರ್ಚ್‌ 16ರಿಂದ ಮತ ಎಣಿಕೆ ಆರಂಭ

ಕಣದಲ್ಲಿರುವ 149 ಅಭ್ಯರ್ಥಿಗಳ ಪೈಕಿ 42 ಮಂದಿ ಮಹಿಳಾ ವಕೀಲರು ಸ್ಪರ್ಧಾಳುಗಳಾಗಿದ್ದು, 107 ಮಂದಿ ಪುರುಷರಾಗಿದ್ದಾರೆ. ಬೆಳಿಗ್ಗೆ 9.30ರಿಂದ ಸಂಜೆ 6 ಗಂಟೆಯವರೆಗೆ ಎಲ್ಲಾ ತಾಲ್ಲೂಕು & ಜಿಲ್ಲಾ ನ್ಯಾಯಾಲಯ ಸಂಕೀರ್ಣಗಳಲ್ಲಿ ಚುನಾವಣೆ ನಡೆಯಲಿದೆ.
KSBC election
KSBC election
Published on

ಬಹುನಿರೀಕ್ಷಿತ ಕರ್ನಾಟಕ ರಾಜ್ಯ ವಕೀಲರ ಪರಿಷತ್‌ (ಕೆಎಸ್‌ಬಿಸಿ) ಚುನಾವಣೆಯು ಬುಧವಾರ ನಡೆಯಲಿದ್ದು, ಕಣದಲ್ಲಿರುವ 149 ವಕೀಲರ ಭವಿಷ್ಯವನ್ನು ಸುಮಾರು 72 ಸಾವಿರ ಮತದಾರರು ನಿರ್ಧರಿಸಲಿದ್ದಾರೆ. 23 ಮಂದಿ ಅದೃಷ್ಟವಂತರು ವಿಜಯದ ನಗೆ ಬೀರಲಿದ್ದಾರೆ.

ವಕೀಲರ ಕಲ್ಯಾಣಕ್ಕಾಗಿ ನೂರಾರು ಕೋಟಿ ರೂಪಾಯಿ ನಿಧಿ ಹೊಂದಿರುವ ಕೆಎಸ್‌ಬಿಸಿ ಚುನಾವಣೆಯು ಹಿರಿಯ ಮತ್ತು ಕಿರಿಯರ ನಡುವಿನ ಜಿದ್ದಾಜಿದ್ದಿಯ ಕಣವಾಗಿ ಮಾರ್ಪಟ್ಟಿದ್ದು, ಹಣ, ಆಮಿಷಗಳನ್ನು ಒಡ್ಡಿ ಮತ ಪಡೆಯುವ ಪ್ರಯತ್ನ ಎಗ್ಗಿಲ್ಲದೇ ನಡೆಯುತ್ತಿದೆ ಎಂಬ ಆರೋಪ ವಕೀಲರ ಸಮುದಾಯದಿಂದಲೇ ಕೇಳಿಬಂದಿದೆ.

ಎಂಟು ವರ್ಷಗಳ ಹಿಂದೆ ಕೆಎಸ್‌ಬಿಸಿಗೆ ಚುನಾವಣೆ ನಡೆದಿದ್ದು, ಸರ್ಟಿಫಿಕೇಟ್‌ ಆಫ್‌ ಪ್ರಾಕ್ಟೀಸ್‌ನಿಂದ (ಎಸ್‌ಒಪಿ) ಚುನಾವಣೆ ವಿಳಂಬವಾಗಿತ್ತು. ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶಿಸಿ, ಮಾರ್ಚ್‌ 15ರ ಒಳಗೆ ಚುನಾವಣೆ ಪೂರ್ಣಗೊಳಿಸುವಂತೆ ವಿಧಿಸಿರುವ ಗಡುವಿನ ಹಿನ್ನೆಲೆಯಲ್ಲಿ ಬೆಳಿಗ್ಗೆ 9.30ರಿಂದ ಸಂಜೆ 6 ಗಂಟೆಯವರೆಗೆ ಎಲ್ಲಾ ತಾಲ್ಲೂಕು ಮತ್ತು ಜಿಲ್ಲಾ ನ್ಯಾಯಾಲಯ ಸಂಕೀರ್ಣಗಳಲ್ಲಿ ಚುನಾವಣೆ ನಡೆಯಲಿದೆ.

“ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಸ್ಥಳೀಯವಾಗಿ ಚುನಾವಣಾಧಿಕಾರಿಗಳು ಮತ್ತು ಮೇಲ್ವಿಚಾರಕರಾಗಿ ಸಹಕಾರ ಇಲಾಖೆಯ ಅಧಿಕಾರಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಒಟ್ಟಾರೆ 198 ಬೂತ್‌ಗಳಲ್ಲಿ ಮತಪತ್ರದ ಮೂಲಕ ವಕೀಲರು ಹಕ್ಕು ಚಲಾಯಿಸಲಿದ್ದು, ಮಾರ್ಚ್‌ 16ರಿಂದ ಮತ ಎಣಿಕೆ ನಡೆಯಲಿದೆ. ಗರಿಷ್ಠ 30 ದಿನಗಳಲ್ಲಿ ಮತ ಎಣಿಕೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ” ಎಂದು ರಾಜ್ಯ ಚುನಾವಣಾಧಿಕಾರಿಯಾದ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಸುಭಾಷ್‌ ಬಿ. ಅಡಿ ಅವರು “ಬಾರ್‌ ಅಂಡ್‌ ಬೆಂಚ್‌”ಗೆ ತಿಳಿಸಿದರು.

“ಪ್ರತಿವರ್ಷ ಸಾಕಷ್ಟು ದೂರುಗಳು ಬರುತ್ತಿದ್ದವು. ಈ ಬಾರಿ ಚುನಾವಣಾ ಅಕ್ರಮಗಳ ಸಂಖ್ಯೆ ಕಡಿಮೆಯಾಗಿದ್ದು, ಬಂದ ದೂರುಗಳಿಗೆ ಸ್ಪಂದಿಸಿದ್ದೇವೆ. ಒಟ್ಟಾರೆಯಾಗಿ ಚುನಾವಣಾ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯುತ್ತಿದೆ” ಎಂದು ನ್ಯಾ. ಅಡಿ ತಿಳಿಸಿದ್ದಾರೆ.

ಬೆಂಗಳೂರಿನ ಕೆಎಸ್‌ಬಿಸಿಯ ಸಮೀಪ ಇರುವ ಕಟ್ಟಡದಲ್ಲಿ ಮತ ಎಣಿಕೆ ನಡೆಯಲಿದೆ. ಮತದಾನ ಪೂರ್ಣಗೊಂಡ ಬಳಿಕ ಸ್ಥಳೀಯ ಅಂಚೆ ಕಚೇರಿಗಳಲ್ಲಿ ಮತ ಪೆಟ್ಟಿಗೆಗಳು ಭದ್ರವಾಗಿರಲಿವೆ.

23 ಸ್ಥಾನಗಳಿಗೆ ಚುನಾವಣೆ

ಕೆಎಸ್‌ಬಿಸಿಯಲ್ಲಿ ಒಟ್ಟಾರೆ 26 ಸದಸ್ಯ ಸ್ಥಾನ ಇದ್ದು, ಸದ್ಯ 23 ಸ್ಥಾನಕ್ಕೆ ವಕೀಲರು ಹಕ್ಕು ಚಲಾಯಿಸಲಿದ್ದಾರೆ. ಈ ಪೈಕಿ ಇದೇ ಪ್ರಥಮ ಬಾರಿಗೆ ಐದು ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ.

ಎರಡು ಸ್ಥಾನಗಳಿಗೆ ನಾಮನಿರ್ದೇಶನ ಮಾಡಲಾಗುತ್ತದೆ. ಉಳಿದ ಒಂದು ಸ್ಥಾನಕ್ಕೆ ಪದನಿಮಿತ್ತ ಸದಸ್ಯರಾಗಿ ಅಡ್ವೊಕೇಟ್‌ ಜನರಲ್‌ ಇರಲಿದ್ದಾರೆ. ಚುನಾವಣೆಯ ಬಳಿಕ ವಿಜೇತ ಅಭ್ಯರ್ಥಿಗಳು ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಭಾರತೀಯ ವಕೀಲರ ಪರಿಷತ್‌ಗೆ ನಾಮನಿರ್ದೇಶಿತ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ.

ಕಣದಲ್ಲಿರುವ 149 ಅಭ್ಯರ್ಥಿಗಳ ಪೈಕಿ 42 ಮಂದಿ ಮಹಿಳಾ ವಕೀಲರು ಸ್ಪರ್ಧಾಳುಗಳಾಗಿದ್ದು, 107 ಮಂದಿ ಪುರುಷರಾಗಿದ್ದಾರೆ. ಪ್ರತಿಯೊಬ್ಬ ವಕೀಲರಿಗೆ 23 ಮತಗಳಿದ್ದು, ಎಲ್ಲಾ 149 ಅಭ್ಯರ್ಥಿಗಳ ಹೆಸರಿನ ಮುಂದೆ ಆದ್ಯತೆಯ ಮೇಲೆ ಮತ ಚಲಾಯಿಸಬಹುದಾಗಿದೆ.

ಉನ್ನತಾಧಿಕಾರ ಸಮಿತಿಗೆ ನ್ಯಾ. ಕೃಷ್ಣಕುಮಾರ್‌ ನೇತೃತ್ವ

ಮಣಿಪುರ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ನಿವೃತ್ತ ನ್ಯಾ. ಡಿ ಕೃಷ್ಣಕುಮಾರ್‌ ಅವರು ರಾಜ್ಯದಲ್ಲಿ ಉನ್ನತಾಧಿಕಾರಿ ಸಮಿತಿಯ ಮುಖ್ಯಸ್ಥರಾಗಿದ್ದು, ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಎ ಜಿ ಗುಂಜಾಳ್‌ ಮತ್ತು ಇನ್ನೊಬ್ಬ ಅಧಿಕಾರಿ ಸದಸ್ಯರಾಗಿದ್ದಾರೆ. ಬೆಂಗಳೂರು ವಕೀಲರ ಸಂಘವು ಹಿರಿಯ ವಕೀಲರಾದ ಕೆ ಎನ್‌ ಫಣೀಂದ್ರ, ವಿಕ್ರಮ್‌ ಹುಯಿಲಗೋಳ ಸೇರಿ ಮೂವರು ವಕೀಲರನ್ನು ಬೆಂಗಳೂರು ಜಿಲ್ಲಾ ಘಟಕದ ಚುನಾವಣೆಗೆ ಸಮನ್ವಯಕಾರರನ್ನಾಗಿ ನೇಮಿಸಿದೆ. ಬೆಂಗಳೂರು ಜಿಲ್ಲೆಯಲ್ಲಿ 22 ಸಾವಿರ ವಕೀಲರು ಹಕ್ಕು ಚಲಾಯಿಸಲಿದ್ದಾರೆ.

Also Read
ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ಚುನಾವಣೆ ಮಾರ್ಚ್‌ 11ಕ್ಕೆ

ಒಟ್ಟು ಐದು ಹಂತಗಳಲ್ಲಿ ದೇಶಾದ್ಯಂತ ಚುನಾವಣೆ ನಡೆಯಬೇಕು ಎಂದು ಸುಪ್ರೀಂ ಕೋರ್ಟ್‌ ಕಳೆದ ವರ್ಷ ಹೇಳಿದ್ದು, ಮೂರನೇ ಹಂತದಲ್ಲಿ, ರಾಜಸ್ಥಾನ, ಪಶ್ಚಿಮ ಬಂಗಾಳ, ಜಾರ್ಖಂಡ್, ಕರ್ನಾಟಕ, ಗುಜರಾತ್, ಪಂಜಾಬ್ ಮತ್ತು ಹರಿಯಾಣಗಳಲ್ಲಿ ಚುನಾವಣೆಗಳು ಮಾರ್ಚ್ 15, 2026 ರೊಳಗೆ ಪೂರ್ಣಗೊಳ್ಳಬೇಕು ಎಂದು ಕಳೆದ ವರ್ಷ ನಿರ್ದೇಶಿಸಿತ್ತು.

ಉನ್ನತ ಅಧಿಕಾರ ಸಮಿತಿಗಳ ಮೇಲ್ವಿಚಾರಣೆಯಲ್ಲಿ ಎಣಿಕೆ ಕಾರ್ಯ ನಡೆಯಬೇಕು. ಪ್ರಾದೇಶಿಕ ಸಮಿತಿಯ ನಿರ್ಧಾರಕ್ಕೆ ಆಕ್ಷೇಪ ಇದ್ದರೆ ರಾಷ್ಟ್ರೀಯ ಉನ್ನತ ಅಧಿಕಾರದ ಮೇಲ್ವಿಚಾರಣಾ ಸಮಿತಿಯನ್ನು ಸಂಪರ್ಕಿಸಬಹುದು. ಅದರ ತೀರ್ಮಾನವೇ ಅಂತಿಮ. ಇದನ್ನು ಪ್ರಶ್ನಿಸುವ ಅರ್ಜಿಗಳನ್ನು ಸಿವಿಲ್‌ ನ್ಯಾಯಾಲಯಗಳು ಮತ್ತು ಹೈಕೋರ್ಟ್‌ಗಳು ಸ್ವೀಕರಿಸಬಾರದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

Kannada Bar & Bench
kannada.barandbench.com